ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

Income Tax: ಬ್ಯಾಂಕ್, ಹಣಕಾಸು ಸಂಸ್ಥೆಗಳು ಸೇರಿದಂತೆ ಎಲ್ಲವೂ ಆದಾಯ ತೆರಿಗೆದಾರರ ಯಾವುದೇ ಠೇವಣಿಗೆಗಳ ಮೇಲಿನ ಬಡ್ಡಿ ದರದ ಬಗ್ಗೆ ವರದಿ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆಯು ಸುತ್ತೋಲೆ ಹೊರಡಿಸಿದೆ.

  • TV9 Web Team
  • Published On - 23:03 PM, 22 Apr 2021
ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ
ಸಾಂದರ್ಭಿಕ ಚಿತ್ರ

ನವದೆಹಲಿ: ಹೂಡಿಕೆದಾರರು ಗಳಿಸಿದ ಬಡ್ಡಿ, ಡಿವಿಡೆಂಡ್ ಮತ್ತು ಕ್ಯಾಪಿಟಲ್ ಗೇಯ್ನ್ಸ್ ಬಗ್ಗೆ ವರದಿ ನೀಡುವಂತೆ ತೆರಿಗೆ ಇಲಾಖೆಯು ಕಳೆದ ಮಾರ್ಚ್​ನಲ್ಲಿ ಬ್ಯಾಂಕ್​ಗಳು, ಕಂಪೆನಿಗಳು ಮತ್ತು ಬ್ರೋಕರ್​ಗಳು ಸೇರಿದಂತೆ ಕೆಲವು ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆ 1961, ಸೆಕ್ಷನ್ 285BA ಮತ್ತು ನಿಯಮ 114E ಅಡಿಯಲ್ಲಿ ಹಣಕಾಸು ವಹಿವಾಟಿನ ಬಗ್ಗೆ ನಿರ್ದಿಷ್ಟ ವ್ಯಕ್ತಿಗಳು ವರದಿ ನೀಡಬೇಕು. ನೋಟಿಸ್​ನಲ್ಲಿ ಆದಾಯ ತೆರಿಗೆ ಇಲಾಖೆ ಹೇಳಿರುವ ಪ್ರಕಾರ, ತೆರಿಗೆದಾರರಿಗೆ ಮುಂಚಿತವಾಗಿಯೇ ಮಾಹಿತಿ ಭರ್ತಿ ಮಾಡಿದ ತೆರಿಗೆ ಅರ್ಜಿಗಳನ್ನು ನೀಡಲು ಇದರಿಂದ ಅನುಕೂಲ ಆಗುತ್ತದೆ. ಇದರ ಜತೆಗೆ ತೆರಿಗೆದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್​ನಲ್ಲಿ ಬಡ್ಡಿಯ ಮೂಲಕ ಬಂದ ಆದಾಯವನ್ನು ವರದಿ ಮಾಡಲು ಉತ್ತೇಜಿಸಿದಂತಾಗುತ್ತದೆ. ಏಕೆಂದರೆ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಈ ಆದಾಯವನ್ನು ವರದಿ ಮಾಡುವುದಕ್ಕೆ ಸಾಮಾನ್ಯವಾಗಿ ಅವರು ಮರೆಯುತ್ತಾರೆ ಎಂದು ಹೇಳಲಾಗಿದೆ.

ವರದಿಯ ಫಾರ್ಮಾಟ್​ನಲ್ಲಿ ತಿಳಿಸುವಂತೆ ಬ್ಯಾಂಕ್​ಗಳೂ ಸೇರಿ ಇತರ ಸಂಸ್ಥೆಗಳಿಗೆ ತೆರಿಗೆ ಇಲಾಖೆಯಿಂದ ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದೆ. ಹೊಸ ಸುತ್ತೋಲೆ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ಯಾವುದೇ ಠೇವಣಿ ಮೇಲಿನ ಬಡ್ಡಿ 5000 ರೂಪಾಯಿ ದಾಟಿದಲ್ಲಿ ಆ ಬಗ್ಗೆ ಬ್ಯಾಂಕ್​ಗಳು ಅಥವಾ ಸಂಸ್ಥೆಗಳು ಮಾಹಿತಿ ನೀಡಬೇಕು. ಇನ್ನು ಆದಾಯ ತೆರಿಗೆ ಕಾಯ್ದೆ 1961ರ ಅಡಿಯಲ್ಲಿ ತೆರಿಗೆ ವಿನಾಯಿತಿ ಇರುವ ಪಿಪಿಎಫ್, ಎಫ್​ಸಿಎನ್​ಆರ್ ಖಾತೆ, ಸುಕನ್ಯಾ ಸಮೃದ್ಧಿ, ರೆಸಿಡೆಂಟ್ ಫಾರಿನ್ ಕರೆನ್ಸಿ ಅಕೌಂಟ್ ಇವುಗಳ ಮೇಲಿನ ಬಡ್ಡಿಯ ಬಗ್ಗೆ ವರದಿ ಮಾಡುವ ಅಗತ್ಯ ಇಲ್ಲ.

ಆದಾಯ ತೆರಿಗೆ ಇಲಾಖೆಯಿಂದ ಈಚೆಗೆ ಹೊರಡಿಸಲಾದ ಕೆಲ ಮುಖ್ಯ ಮಾರ್ಗದರ್ಶಿ ಸೂತ್ರಗಳು ಹೀಗಿವೆ:
1) ಉಳಿತಾಯ ಖಾತೆ (ಸೇವಿಂಗ್ಸ್ ಅಕೌಂಟ್), ಎಫ್​ಡಿ, ಆರ್​ಡಿ ಹೀಗೆ ಎಲ್ಲ ಠೇವಣಿಗಳ ಮೇಲಿನ ಬಡ್ಡಿ ದರದ ಆದಾಯವನ್ನು ಬ್ಯಾಂಕ್​ಗಳು ವರದಿ ಮಾಡಬೇಕು.
2) ಒಟ್ಟು ಮೊತ್ತವನ್ನು ವರದಿ ಮಾಡಬೇಕಾಗುತ್ತದೆ. ಸೆಕ್ಷನ್ 80TTA ಅಡಿಯಲ್ಲಿ ಅವರು 10 ಸಾವಿರ ಕಡಿತ ನೀಡಲು ಸಾಧ್ಯವಿಲ್ಲ. ಆದರೆ ಆದಾಯ ತೆರಿಗೆದಾರರು ಐಟಿಆರ್​ನಲ್ಲಿ ಬಡ್ಡಿ ಆದಾಯ ಎಂದು ತೋರಿಸುವ ಮೂಲಕ ವಿನಾಯಿತಿಗೆ ಕ್ಲೇಮ್ ಮಾಡಬಹುದು.
3) ಒಂದು ವೇಳೆ ಜಂಟಿ ಖಾತೆ ಇದ್ದಲ್ಲಿ ಬಡ್ಡಿ ಆದಾಯವು ಮೊದಲ ಅಥವಾ ಪ್ರಾಥಮಿಕ ಖಾತೆದಾರರಿಗೆ ಆ ಮೊತ್ತದ ಜವಾಬ್ದಾರಿ ಬೀಳುತ್ತದೆ.
4) ಒಂದು ವೇಳೆ ಅಪ್ರಾಪ್ತರ ಹೆಸರಲ್ಲಿ ಖಾತೆ ಇದ್ದರೆ ಮಾಹಿತಿಯು ಕಾನೂನು ಬದ್ಧವಾದ ಪೋಷಕರ ಹೆಸರು ಹಾಗೂ ಪರ್ಮನೆಂಟ್ ಅಕೌಂಟ್​ ನಂಬರ್​ಗೆ ಬರುತ್ತದೆ.

ಇದನ್ನೂ ಓದಿ: Income tax deductions: ಆರೋಗ್ಯ ವಿಮೆ ಮೂಲಕ ಎಷ್ಟು ಆದಾಯ ತೆರಿಗೆಯನ್ನು ಉಳಿತಾಯ ಮಾಡಬಹುದು?

(Income Tax department circular to entities to report about interest income on deposits)