ಬೆಂಗಳೂರು: ಸಾರ್ವಜನಿಕ ಭವಿಷ್ಯ ನಿಧಿ (PPF) ಹೂಡಿಕೆ ವಾರ್ಷಿಕ ಮಿತಿಯನ್ನು 1.5 ಲಕ್ಷ ರೂ.ನಿಂದ 3 ಲಕ್ಷ ರೂ.ಗೆ ಹೆಚ್ಚಳ ಮಾಡಬೇಕು ಎಂದು ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. 2023ರ ಬಜೆಟ್ ಪೂರ್ವ ಬೇಡಿಕೆಯಲ್ಲಿ (Pre-Budget Memorandum 2023) ಐಸಿಎಐ ತನ್ನ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದೆ. ಪಿಪಿಎಫ್ ಯೋಜನೆಯ ಜನಪ್ರಿಯತೆ ಹೆಚ್ಚಾಗಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಹೂಡಿಕೆ ಮಿತಿಯನ್ನು ಹೆಚ್ಚಿಸಿಲ್ಲ ಎಂದು ಐಸಿಎಐ ಹೇಳಿದೆ.
ತೆರಿಗೆ ವಿನಾಯಿತಿಯ ಕಾರಣಕ್ಕೆ ಪಿಪಿಎಫ್ ಹೂಡಿಕೆ ಯೋಜನೆ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ವಾರ್ಷಿಕ 1.5 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿ ಪಡೆಯಲು ಈ ಯೋಜನೆಯಲ್ಲಿ ಅವಕಾಶವಿದೆ. ಮೆಚ್ಯೂರಿಟಿ ಅವಧಿಯ ಬಳಿಕ ಹಿಂಪಡೆಯುವ ಬಡ್ಡಿಗೆ ತೆರಿಗೆ ಇರುವುದಿಲ್ಲ.
ಮಿತಿ ಹೆಚ್ಚಳಕ್ಕೆ ಐಸಿಎಐ ಬೇಡಿಕೆ ಇಟ್ಟಿದ್ದೇಕೆ?
ಪಿಪಿಎಫ್ ಮಿತಿಯನ್ನು ಹೆಚ್ಚಿಸುವುದರಿಂದ ದೇಶೀಯ ಉಳಿತಾಯ ಹೆಚ್ಚಾಗಲಿದೆ. ಖಾತೆದಾರರಿಗೂ ಪ್ರಯೋಜನವಾಗಲಿದೆ ಎಂದು ಐಸಿಎಐ ಹೇಳಿರುವುದಾಗಿ ‘ಫೈನಾನ್ಶಿಯಲ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಪಿಪಿಎಫ್ ಅನ್ನು ವೃತ್ತಿಪರರು ಮತ್ತು ಉದ್ಯಮಿಗಳು ಉಳಿತಾಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಕಂಪನಿಗಳಲ್ಲಿ ಉದ್ಯೋಗ ಹೊಂದಿರುವವರು ವೇತನದ ಶೇಕಡಾ 12ರಷ್ಟು ಮೊತ್ತವನ್ನು ಪಿಎಫ್ ಖಾತೆಗೆ ಜಮೆ ಮಾಡುವ ಮೂಲಕ ಉಳಿತಾಯ ಮಾಡಿಕೊಳ್ಳಲು ಅವಕಾಶ ಇದ್ದರೆ ಸ್ವಯಂ ಉದ್ಯೋಗಿಗಳಿಗೆ ಪಿಪಿಎಫ್ ಖಾತೆ ಮೂಲಕ ಉಳಿತಾಯಕ್ಕೆ ಅವಕಾಶವಿದೆ. ಹೀಗಾಗಿ ಪಿಪಿಎಫ್ ಮಿತಿ ಹೆಚ್ಚಿಸುವ ಮೂಲಕ ದೇಶೀಯ ಉಳಿತಾಯ, ಜಿಡಿಪಿ ವೃದ್ಧಿ ಹಾಗೂ ಹಣದುಬ್ಬರ ತಡೆಗೂ ನೆರವಾಗಬಹುದು ಎಂದು ಐಸಿಎಐ ಹೇಳಿದೆ.
ಪಿಪಿಎಫ್ ಮಿತಿ ಹೆಚ್ಚಳ ಬೇಡಿಕೆ ಇದೇ ಮೊದಲಲ್ಲ
2022ರ ಬಜೆಟ್ಗೂ ಮುನ್ನ ಸಲ್ಲಿಸಲಾಗಿದ್ದ ಬೇಡಿಕೆಯಲ್ಲಿಯೂ ಪಿಪಿಎಫ್ ಮಿತಿ ಹೆಚ್ಚಿಸುವ ಬಗ್ಗೆ ಸರ್ಕಾರಕ್ಕೆ ಐಸಿಎಐ ಮನವಿ ಮಾಡಿತ್ತು. ಆದರೆ, ಇದನ್ನು ಸರ್ಕಾರ ತಿರಸ್ಕರಿಸಿತ್ತು.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಫೆಬ್ರವರಿ 1ರಂದು 2023-24ನೇ ಸಾಲಿನ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಆರ್ಥಿಕ ಸಮೀಕ್ಷೆ ಜನವರಿ 31ರಂದು ಪ್ರಕಟಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಎಸ್ಇಝಡ್ ಪ್ರದೇಶದ ಐಟಿ ಉದ್ಯೋಗಿಗಳಿಗೆ ಶುಭ ಸುದ್ದಿ; ಇನ್ನೂ ಒಂದು ವರ್ಷ ಪೂರ್ತಿ ವರ್ಕ್ ಫ್ರಂ ಹೋಮ್
ಬಜೆಟ್ ಪ್ರತಿ ತಯಾರಿಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ನಿರ್ಮಲಾ ಸೀತಾರಾಮನ್ ಕೈಗಾರಿಕೋದ್ಯಮಿಗಳು ಮತ್ತು ಹವಾಮಾನ ಬದಲಾವಣೆ ತಜ್ಞರ ಜತೆ ಸಭೆ ನಡೆಸಿದ್ದಾರೆ. ವಿವಿಧ ಕೈಗಾರಿಕೋದ್ಯಮಿಗಳು, ತಜ್ಞರು ಹಾಗೂ ಬಂಡವಾಳಗಾರರ ಜತೆ ಸಚಿವರು ಸಮಾಲೋಚನೆ ನಡೆಸುತ್ತಿದ್ದಾರೆ.
ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವುದೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ. ಯಾಕೆಂದರೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಸಾಮಾನ್ಯವಾಗಿ ಚುನಾವಣೆ ವರ್ಷದಲ್ಲಿ ಹಾಲಿ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವುದಿಲ್ಲ. ಚುನಾವಣೆ ನಂತರ ಆಯ್ಕೆಯಾಗಿ ರಚಿಸಲ್ಪಟ್ಟ ಹೊಸ ಸರ್ಕಾರ ಬಜೆಟ್ನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಕ್ತವಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Fri, 9 December 22