Budget 2023: 35 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಯಾವ್ಯಾವುದರ ಬೆಲೆ ಹೆಚ್ಚಾಗಲಿದೆ?

| Updated By: Ganapathi Sharma

Updated on: Jan 09, 2023 | 12:48 PM

ಡಿಸೆಂಬರ್​ನಲ್ಲಿ ವಿವಿಧ ಸಚಿವಾಲಯಗಳಿಗೆ ತಮ್ಮ ತಮ್ಮ ವಿಭಾಗದಲ್ಲಿರುವ ಅಗತ್ಯೇತರ ವಸ್ತುಗಳ ಪಟ್ಟಿ ಸಿದ್ಧಪಡಿಸುವಂತೆ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು ಕೇಳಿಕೊಂಡಿತ್ತು. ಅದರಂತೆ ವಿವಿಧ ಇಲಾಖೆಗಳಿಂದ ಇಂಥ ಅಗತ್ಯೇತರ ವಸ್ತುಗಳ ಪಟ್ಟಿ ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಗತಿಯನ್ನು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

Budget 2023: 35 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಯಾವ್ಯಾವುದರ ಬೆಲೆ ಹೆಚ್ಚಾಗಲಿದೆ?
ಸಾಂದರ್ಭಿಕ ಚಿತ್ರ
Image Credit source: Reuters
Follow us on

ಒಡವೆ, ಎಲೆಕ್ಟ್ರಾನಿಕ್ ಉತ್ಪನ್ನ, ಪ್ಲಾಸ್ಟಿಕ್ ವಸ್ತು ಇತ್ಯಾದಿ ವಸ್ತುಗಳ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಮುಂಬರುವ ಬಜೆಟ್ (Central Budget 2023) ವೇಳೆ ಯಾವ್ಯಾವ ವಸ್ತುಗಳ ಮೇಲೆ ಆಮದು ಸುಂಕ ಏರಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಇದೆ. ಆಮದು ಸುಂಕ (Import Duty) ಏರಿಕೆ ಮಾಡಲು 35ಕ್ಕೂ ಹೆಚ್ಚು ವಸ್ತುಗಳನ್ನು ಹಣಕಾಸು ಸಚಿವಾಲಯ (Finance Ministry) ಪಟ್ಟಿ ಮಾಡಿರುವುದು ತಿಳಿದುಬಂದಿದೆ. ಪ್ರೈವೇಟ್ ಜೆಟ್, ಹೆಲಿಕಾಪ್ಟರ್ ಇತ್ಯಾದಿಗಳೂ ಈ ಪಟ್ಟಿಯಲ್ಲಿ ಇದೆ ಎನ್ನಲಾಗಿದೆ. ಫೆಬ್ರುವರಿ 1ರಂದು ಮಂಡಿಸಲಾಗುವ ಕೇಂದ್ರೀಯ ಬಜೆಟ್ ನಲ್ಲಿ ಈ ಬೆಲೆ ಏರಿಕೆಯನ್ನು ಘೋಷಿಸಬಹುದು. ಕಳೆದ ತಿಂಗಳು, ಅಂದರೆ ಡಿಸೆಂಬರ್ ನಲ್ಲಿ ವಿವಿಧ ಸಚಿವಾಲಯಗಳಿಗೆ ತಮ್ಮ ತಮ್ಮ ವಿಭಾಗದಲ್ಲಿರುವ ಅಗತ್ಯೇತರ ವಸ್ತುಗಳ (Non- Essential Items) ಪಟ್ಟಿ ಸಿದ್ಧಪಡಿಸುವಂತೆ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು ಕೇಳಿಕೊಂಡಿತ್ತು. ಅದರಂತೆ ವಿವಿಧ ಇಲಾಖೆಗಳಿಂದ ಇಂಥ ಅಗತ್ಯೇತರ ವಸ್ತುಗಳ ಪಟ್ಟಿ ಬಂದಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಗತಿಯನ್ನು ‘ಎಕನಾಮಿಕ್ ಟೈಮ್ಸ್’ ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

ಆಮದು ಸುಂಕ ಏರಿಕೆ ಯಾಕೆ?

ಸಾಮಾನ್ಯವಾಗಿ ಸರ್ಕಾರ ಹಣಕಾಸು ನಿರ್ಧಾರಗಳನ್ನು ನಿರ್ದಿಷ್ಟ ಪರಿಣಾಮದ ಸಂಭಾವ್ಯತೆಯನ್ನು ಗಣಿಸಿಯೇ ತೆಗೆದುಕೊಳ್ಳುತ್ತದೆ. ಈ ಬಾರಿ ಕೆಲ ವಸ್ತುಗಳಿಗೆ ಆಮದು ಸುಂಕ ಹೆಚ್ಚಿಸುವ ಸರ್ಕಾರದ ನಿರ್ಧಾರದ ಹಿಂದೆ ಆ ವಸ್ತುಗಳ ದೇಶೀಯ ಉತ್ಪಾದನೆಗೆ ಪುಷ್ಟಿ ಕೊಡುವ ಇರಾದೆ ಇದೆ ಎನ್ನಲಾಗಿದೆ. ಆಮದು ಸುಂಕ ಹೆಚ್ಚಳ ಮಾಡಿದಾಗ, ಒಂದೆಡೆ ಆ ವಸ್ತುವನ್ನು ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆ ಆಗುತ್ತದೆ. ಇನ್ನೊಂದೆಡೆ ಆ ವಸ್ತುವಿನ ಸ್ಥಳೀಯ ತಯಾರಕರಿಗೆ ಉತ್ತೇಜನ ಸಿಕ್ಕಂತಾಗುತ್ತದೆ. ಇದರ ಒಟ್ಟಾರೆ ಚಾಲ್ತಿ ಖಾತೆ ಅಂತರ ತಗ್ಗುವುದಾಗಿರುತ್ತದೆ.

ಚಿನ್ನದ ಆಮದು ಸುಂಕ ಇಳಿಕೆಗೆ ಚಿಂತನೆ

ಇದಕ್ಕೆ ವ್ಯತಿರಿಕ್ತವೇನೋ ಎಂಬಂತೆ ಈ ಬಾರಿಯ ಬಜೆಟ್ ನಲ್ಲಿ ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಬೇಕೆಂದು ವಾಣಿಜ್ಯ ಸಚಿವಾಲಯ ಬೇಡಿಕೆ ಇಟ್ಟಿದೆ. ಇದರಿಂದ ಆಭರಣ ಕ್ಷೇತ್ರಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.
ಭಾರತ ಅತಿಹೆಚ್ಚು ಆಮದು ಮಾಡಿಕೊಳ್ಳುವ ವಸ್ತುಗಳಲ್ಲಿ ಪೆಟ್ರೋಲ್ ಮತ್ತು ಚಿನ್ನ ಸೇರಿವೆ. ಭಾರತ ಚಿನ್ನವನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತದಾದರೂ ಆಭರಣ ಇತ್ಯಾದಿ ಚಿನ್ನೋತ್ಪನ್ನಗಳನ್ನು ಭಾರತ ರಫ್ತು ಮಾಡುತ್ತದೆ. ಹೀಗಾಗಿ, ಚಿನ್ನದ ಮೇಲಿನ ಆಮದು ಸುಂಕ ಕಡಿಮೆಗೊಂಡರೆ ಈ ಕ್ಷೇತ್ರಕ್ಕೆ ಅನುಕೂಲವಾಗುವ ಎಣಿಕೆ ಇದೆ.

ಇದನ್ನೂ ಓದಿ: Fact Check: ಪೆನ್ನಿನಲ್ಲಿ ಗೀಚಿದ, ತಿದ್ದಿದ ನೋಟು ಚಲಾವಣೆ ಆಗುತ್ತಾ? ಸರ್ಕಾರದ ಸ್ಪಷ್ಟನೆ ಇಲ್ಲಿದೆ

ಇದೇ ಜುಲೈ ತಿಂಗಳಲ್ಲಿ ಸರ್ಕಾರ ಚಿನ್ನದ ಮೇಲೇ ಶೇ. 10.75ರಷ್ಟು ಇದ್ದ ಇಂಪೋರ್ಟ್ ಡ್ಯೂಟಿಯನ್ನು ಶೇ. 15ಕ್ಕೆ ಏರಿಸಿತ್ತು. ಇದರಲ್ಲಿ ಕೃಷಿ ಸೌಕರ್ಯ ಅಭಿವೃದ್ಧಿ ತೆರಿಗೆ (ಎಐಡಿಸಿ) ಕೂಡ ಒಳಗೊಂಡಿದೆ. ಈ ಸುಂಕ ಏರಿಕೆಯಿಂದ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಯಲ್ಲಿದೆ. ಈಗ ವಾಣಿಜ್ಯ ಸಚಿವಾಲಯವು ಚಿನ್ನದ ಮೇಲಿನ ಆಮದು ಸುಂಕವನ್ನು ಇಳಿಸಲು ಮನವಿ ಮಾಡಿದೆ. ಜುಲೈಗಿಂತ ಮುಂಚೆ ಇದ್ದ ಮಟ್ಟಕ್ಕೆ ಸುಂಕ ಇಳಿಸುವ ಸಾಧ್ಯತೆ ಇಲ್ಲದಿಲ್ಲ.

ಭಾರತದ ಚಾಲ್ತಿ ಖಾತೆ ಅಂತರ (Current Account Deficit) ಹೆಚ್ಚಾಗುತ್ತಿರುವುದು ಸರ್ಕಾರಕ್ಕೆ ತಲೆನೋವು ತಂದಿದೆ. 35 ವಸ್ತುಗಳ ಆಮದು ಸುಂಕ ಹೆಚ್ಚಿಸುವುದು ಮತ್ತು ಚಿನ್ನದ ಮೇಲಿನ ಆಮದು ಸುಂಕ ಇಳಿಸುವುದು ಇವೆಲ್ಲವೂ ಒಟ್ಟಾರೆಯಾಗಿ ಆಮದು ಪ್ರಮಾಣ ಕಡಿಮೆ ಮಾಡಿ ರಫ್ತು ಹೆಚ್ಚಿಸುವ ಕಡೆ ಪರಿಣಾಮ ಬೀರುವಂಥದ್ದಾಗಿದೆ.

ಹೆಚ್ಚಾದ ಆಮದು

2022ರ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಭಾರತದ ಕರೆಂಟ್ ಅಕೌಂಟ್ ಅಂತರವು ಜಿಡಿಪಿಯ ಶೇ. 4.4ರಷ್ಟು ಇದೆ. ಹಿಂದಿನ ತ್ರೈಮಾಸಿಕದಲ್ಲಿ ಈ ಅಂತರವು ಶೇ. 2.2 ಇತ್ತು. ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಏಪ್ರಿಲ್ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ರಫ್ತು ಶೇ. 11ರಷ್ಟು ಹೆಚ್ಚಾಗಿ 295.26 ಬಿಲಿಯನ್ ಡಾಲರ್ ಇತ್ತು. ಅಂದರೆ ಸುಮಾರು 24.4 ಲಕ್ಷ ಕೋಟಿ ರೂ ಮೌಲ್ಯದಷ್ಟು ರಫ್ತು ಆಗಿತ್ತು. ಆದರೆ, ಅದೇ ಅವಧಿಯಲ್ಲಿ ಆಮದು ಮೊತ್ತ ಇದಕ್ಕಿಂತಲೂ ಹೆಚ್ಚಾಗಿದೆ. ಏಪ್ರಿಲ್ ನಿಂದ ನವೆಂಬರ್ ವರೆಗಿನ ಅವಧಿಯಲ್ಲಿ ಭಾರತ ಆಮದು ಮಾಡಿಕೊಂಡಿದ್ದು ಬರೋಬ್ಬರಿ 493.61 ಬಿಲಿಯನ್ ಡಾಲರ್ (40.6 ಲಕ್ಷ ಕೋಟಿ ರೂ) ಎನ್ನಲಾಗಿದೆ. ಅಂದರೆ ಹಿಂದಿನ ವರ್ಷದ ಅದೇ ಅವಧಿಗೆ ಹೋಲಿಸಿದರೆ ಆಮದು ಪ್ರಮಾಣ ಶೇ. 29.5ರಷ್ಟು ಹೆಚ್ಚಾಗಿದೆ. ಹೀಗಾಗಿ, ಕರೆಂಟ್ ಅಕೌಂಟ್ ಡೆಫಿಸಿಟ್ ಈ ಅವಧಿಯಲ್ಲಿ ಸಹಜವಾಗಿ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 pm, Mon, 9 January 23