Budget Session 2023: ಜನವರಿ 31ರಿಂದ ಏಪ್ರಿಲ್ 6ರ ವರೆಗೆ ಸಂಸತ್ ಬಜೆಟ್ ಅಧಿವೇಶನ; ಪ್ರಲ್ಹಾದ್ ಜೋಶಿ

| Updated By: Ganapathi Sharma

Updated on: Jan 13, 2023 | 12:38 PM

ಸಂಸತ್​ನ ಬಜೆಟ್ ಅಧಿವೇಶನ ಜನವರಿ 31ರಂದು ಆರಂಭಗೊಳ್ಳಲಿದ್ದು ಏಪ್ರಿಲ್ 6ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಶುಕ್ರವಾರ ತಿಳಿಸಿದ್ದಾರೆ.

Budget Session 2023: ಜನವರಿ 31ರಿಂದ ಏಪ್ರಿಲ್ 6ರ ವರೆಗೆ ಸಂಸತ್ ಬಜೆಟ್ ಅಧಿವೇಶನ; ಪ್ರಲ್ಹಾದ್ ಜೋಶಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಸಂಸತ್​ನ ಬಜೆಟ್ ಅಧಿವೇಶನ (Parliament’s Budget Session) ಜನವರಿ 31ರಂದು ಆರಂಭಗೊಳ್ಳಲಿದ್ದು ಏಪ್ರಿಲ್ 6ರ ವರೆಗೆ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಶುಕ್ರವಾರ ತಿಳಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್​ನ ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡುವುದರೊಂದಿಗೆ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿಗೆ ಲೋಕಸಭೆ ಮತ್ತು ರಾಜ್ಯಸಭೆಯನ್ನು ಉದ್ದೇಶಿಸಿ ಬಜೆಟ್ ಅಧಿವೇಶನದ ಜಂಟಿ ಭಾಷಣ ಮಾಡಲಿದ್ದಾರೆ. ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯ, ಕೇಂದ್ರ ಬಜೆಟ್ (Union Budget 2023) ಮಂಡನೆ ಹಾಗೂ ಇತರ ಚರ್ಚೆಗಳ ಬಗ್ಗೆ ಎದುರುನೋಡುತ್ತಿದ್ದೇವೆ ಎಂದು ಜೋಶಿ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಲಿದ್ದಾರೆ. ಕೇಂದ್ರ ಬಜೆಟ್​​ ಸಂಬಂಧಿತ ಚರ್ಚೆ ಸಂದರ್ಭ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರತಿಕ್ರಿಯೆ ನೀಡಲಿದ್ದಾರೆ.


ಫೆಬ್ರವರಿ 14ರಿಂದ ಮಾರ್ಚ್ 12ರ ವರೆಗೆ ಬಜೆಟ್ ಅಧಿವೇಶನಕ್ಕೆ ಬಿಡುವು ಇರಲಿದೆ. ಈ ಅವಧಿಯಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳು ಅನುದಾನದ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸಲಿವೆ. ವಿವಿಧ ಸಚಿವಾಲಯಗಳು ಮತ್ತು ಅವುಗಳ ಇಲಾಖೆಗಳಿಗೆ ಸಂಬಂಧಿಸಿದ ವರದಿಗಳನ್ನು ಕೂಡ ಸಿದ್ಧಪಡಿಸಲಿವೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: Budget Terms: ಬಜೆಟ್ ಪದಗಳು; ಜಿಡಿಪಿ, ಹಣದುಬ್ಬರ, ಕ್ಯಾಪಿಟಲ್ ರಿಸಿಪ್ಟ್ ಇತ್ಯಾದಿ ಪದಗಳ ಬಗ್ಗೆ ತಿಳಿಯಿರಿ

ಫೆಬ್ರವರಿ 1ರಂದು ಬಜೆಟ್ ಮಂಡನೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು ಬುಧವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಹಿಂದಿನ ವರ್ಷಗಳಂತಲ್ಲದೆ, ಈ ಬಾರಿ ಬಜೆಟ್ ಅಧಿವೇಶನದ ಎರಡನೇ ದಿನ ಬಜೆಟ್ ಮಂಡನೆಯಾಗಲಿದೆ. ಜನವರಿ 31ರಂದು ಹಣಕಾಸು ಸಚಿವರು ಆರ್ಥಿಕ ಸಮೀಕ್ಷೆ ಬಿಡುಗಡೆ ಮಾಡಲಿದ್ದಾರೆ. ಬಜೆಟ್ ಮಂಡನೆ ಪ್ರಕ್ರಿಯೆಯನ್ನು ಆನ್​ಲೈನ್​ನಲ್ಲಿ ನೋಡಬೇಕಿದ್ದರೆ ಪಿಐಬಿಯ ಅಧಿಕೃತ ಯೂಟ್ಯೂಬ್ ಚಾನೆಲ್​ನಲ್ಲಿ ವೀಕ್ಷಿಸಬಹುದಾಗಿದೆ. ನೇರ ಪ್ರಸಾರವನ್ನು ದೂರದರ್ಶನ ಮತ್ತು ಸಂಸದ್ ಟಿವಿಯಲ್ಲಿ ನೋಡಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:18 pm, Fri, 13 January 23