Apple CEO: ಆ್ಯಪಲ್ ಸಿಇಒ ಟಿಮ್ ಕುಕ್ ವೇತನದಲ್ಲಿ ಶೇ 40ಕ್ಕೂ ಹೆಚ್ಚಿನ ಕಡಿತ
2022ರ ಸೆಪ್ಟೆಂಬರ್ಗೆ ಕೊನೆಗೊಂಡಂತೆ ಟಿಮ್ ಕುಕ್ ಅವರಿಗೆ ವಾರ್ಷಿಕ 99.4 ಕೋಟಿ ಡಾಲರ್ ವೇತನ ನೀಡಲಾಗಿತ್ತು. ಷೇರುದಾರರ ವಾರ್ಷಿಕ ಸಭೆಯ ಬಳಿಕ ಆ್ಯಪಲ್ ಕಂಪನಿಯು ಸಿಇಒ ವೇತನದಲ್ಲಿ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ.
ನವದೆಹಲಿ: ಆ್ಯಪಲ್ (Apple) ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿಮ್ ಕುಕ್ (Tim Cook) ವೇತನದಲ್ಲಿ 2023ನೇ ಸಾಲಿನಲ್ಲಿ ಶೇಕಡಾ 40ಕ್ಕೂ ಹೆಚ್ಚಿನ ಕಡಿತ ಮಾಡಲಾಗಿದ್ದು, 4.9 ಕೋಟಿ ಡಾಲರ್ಗೆ ಇಳಿಕೆ ಮಾಡಲಾಗಿದೆ. ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿದ ವಿವರಗಳಿಂದ ಈ ಮಾಹಿತಿ ತಿಳಿದುಬಂದಿದೆ. ಆದರೆ, ಟಿಮ್ ಕುಕ್ ಅವರಿಗೆ ನೀಡುವ ಷೇರಿನ ಪಾಲನ್ನು ಕಂಪನಿ ಹೆಚ್ಚಿಸಲಿದೆ. ಹೀಗಾಗಿ ಕಂಪನಿಯ ಷೇರುಗಳು ಹೇಗೆ ವಹಿವಾಟು ನಡೆಸುತ್ತವೆ ಎಂಬುದರ ಆಧಾರದಲ್ಲಿ ಹೆಚ್ಚು ಅಥವಾ ಕಡಿಮೆ ಮೊತ್ತ ಕುಕ್ ಅವರಿಗೆ ದೊರೆಯಲಿದೆ.
2022ರ ಸೆಪ್ಟೆಂಬರ್ಗೆ ಕೊನೆಗೊಂಡಂತೆ ಟಿಮ್ ಕುಕ್ ಅವರಿಗೆ ವಾರ್ಷಿಕ 99.4 ಕೋಟಿ ಡಾಲರ್ ವೇತನ ನೀಡಲಾಗಿತ್ತು. ಷೇರುದಾರರ ವಾರ್ಷಿಕ ಸಭೆಯ ಬಳಿಕ ಆ್ಯಪಲ್ ಕಂಪನಿಯು ಸಿಇಒ ವೇತನದಲ್ಲಿ ಕಡಿತ ಮಾಡುವ ನಿರ್ಧಾರಕ್ಕೆ ಬಂದಿದೆ. 2026ರ ಮೊದಲು ನಿವೃತ್ತಿಯಾಗುವುದಿದ್ದಲ್ಲಿ ಅವರಿಗೆ ನೀಡುವ ನಿರ್ಬಂಧಿತ ಷೇರಿನ ಸಂಖ್ಯೆಯಲ್ಲಿಯೂ ಕಡಿತ ಮಾಡಲಾಗಿದೆ. ಕುಕ್ ಅವರೇ ಮಾಡಿದ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆ್ಯಪಲ್ ತಿಳಿಸಿದೆ.
ಇದನ್ನೂ ಓದಿ: Tata Apple stores: ದೇಶದಲ್ಲಿ ನೂರು ವಿಶೇಷ ಆ್ಯಪಲ್ ಸ್ಟೋರ್ ಆರಂಭಿಸಲಿದೆ ಟಾಟಾ ಗ್ರೂಪ್; ವರದಿ
ಆ್ಯಪಲ್ನ ಕಾರ್ಯನಿರ್ವಹಣೆಗೆ ಅನುಗುಣವಾಗಿ ಕುಕ್ ಅವರಿಗೆ ನೀಡಲಾಗುವ ಷೇರಿನ ಪ್ರಮಾಣವನ್ನು 2023ರಲ್ಲಿ ಶೇಕಡಾ 50ರಿಂದ 75ಕ್ಕೆ ಹೆಚ್ಚಿಸಲಾಗಿದೆ. ಮುಂದಿನ ವರ್ಷಗಳಲ್ಲೂ ಷೇರಿನ ಪ್ರಮಾಣವನ್ನು ಇದೇ ರೀತಿಯಲ್ಲಿ ಮುಂದುವರಿಸಲಾಗುವುದು ಎಂದು ಕಂಪನಿ ತಿಳಿಸಿದೆ. 2022ರಲ್ಲಿ ಕುಕ್ ಅವರು 30 ಲಕ್ಷ ಡಾಲರ್ ಮೂಲ ವೇತನದೊಂದಿಗೆ 99.4 ಕೋಟಿ ಡಾಲರ್ ಒಟ್ಟು ವೇತನ ಪಡೆದಿದ್ದರು. 83 ದಶಲಕ್ಷ ಡಾಲರ್ ಮೌಲ್ಯದ ಷೇರುಗಳನ್ನು ಬೋನಸ್ ಆಗಿ ನೀಡಲಾಗಿತ್ತು. ಇದರಿಂದಾಗಿ ಅವರ ಒಟ್ಟು ವೇತನ 9.87 ಕೋಟಿ ಡಾಲರ್ ಆಗಿತ್ತು.
2011ರಲ್ಲಿ ಸ್ಟೀವ್ ಜಾಬ್ಸ್ ಅವರಿಂದ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನಿರಂತರವಾಗಿ ಉತ್ತಮ ಕಾರ್ಯನಿರ್ವಹಣೆ ತೋರುತ್ತಿರುವುದಕ್ಕಾಗಿ ಕುಕ್ ಅವರನ್ನು ಆ್ಯಪಲ್ ಅಭಿನಂದಿಸಿದೆ. ಕುಕ್ ನಾಯಕತ್ವದಲ್ಲಿ ಆ್ಯಪಲ್ ಷೇರುಗಳು ಶೇ 1,212ರಷ್ಟು ರಿಟರ್ನ್ಸ್ ತಂದುಕೊಟ್ಟಿವೆ.