ಯುನೈಟೆಡ್ ಕಿಂಗ್ಡಮ್ ಹಣದುಬ್ಬರವು ಅಕ್ಟೋಬರ್ ತಿಂಗಳಲ್ಲಿ ದಶಕದಲ್ಲೇ ಗರಿಷ್ಠ ಮಟ್ಟವನ್ನು ಮುಟ್ಟಿತು. ಇಂಧನ ವೆಚ್ಚದಲ್ಲಿನ ಏರಿಕೆ ಮತ್ತು ಕೊವಿಡ್-19 ಬಿಕ್ಕಟ್ಟಿನ ಆರಂಭಿಕ ತಿಂಗಳ ಬೆಲೆಗಳ ತೀವ್ರ ಇಳಿಕೆ ನಂತರ ಈ ರೀತಿಯ ಬೆಳವಣಿಗೆ ಆಗಿದೆ. ಬುಧವಾರದಂದು ಬಿಡುಗಡೆ ಆದ ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಈ ಸಂಗತಿಯು ತಿಳಿದುಬಂದಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು ಹೇಳಿರುವಂತೆ, ಗ್ರಾಹಕರ ಬೆಲೆ ಹಣದುಬ್ಬರವು ಹಿಂದಿನ ತಿಂಗಳಿನಲ್ಲಿ ಇದ್ದ ಶೇಕಡಾ 3.1ರಿಂದ ಅಕ್ಟೋಬರ್‌ನಿಂದ 12 ತಿಂಗಳಲ್ಲಿ ಶೇ 4.2ರ ವೇಗವನ್ನು ಪಡೆದಿದಿದೆ. ನಿರೀಕ್ಷೆಗಿಂತ ದೊಡ್ಡದಾದ ಹೆಚ್ಚಳವು ಹಣದುಬ್ಬರವನ್ನು ನವೆಂಬರ್ 2011ರಿಂದ ಈಚೆಗೆ ಗರಿಷ್ಠ ಮಟ್ಟವನ್ನು ತಲುಪುವಂತೆ ಮಾಡಿತು.
ಯುನೈಟೆಡ್ ಕಿಂಗ್ಡಮ್ನ ನಿಯಂತ್ರಕರು ಹೆಚ್ಚುತ್ತಿರುವ ಸಗಟು ಇಂಧನ ವೆಚ್ಚಗಳನ್ನು ಸರಿತೂಗಿಸಲು ರೀಟೇಲ್ ಬೆಲೆಯ ಮಿತಿಯನ್ನು ಹೆಚ್ಚಿಸಿದ ನಂತರ ಮಿಲಿಯನ್ಗಟ್ಟಲೆ ಕುಟುಂಬಗಳಿಗೆ ಅನಿಲ ಮತ್ತು ವಿದ್ಯುತ್ ಬೆಲೆಗಳು ಅಕ್ಟೋಬರ್‌ನಲ್ಲಿ ಶೇ 12ರಷ್ಟು ಜಿಗಿದವು. ಬಳಸಿದ ಕಾರುಗಳು, ಇಂಧನ, ರೆಸ್ಟೋರೆಂಟ್ ಊಟ ಮತ್ತು ಹೋಟೆಲ್ ಕೊಠಡಿಗಳ ಹೆಚ್ಚಿನ ಬೆಲೆಗಳು ಹಣದುಬ್ಬರವನ್ನು ಹೆಚ್ಚಿಸಿವೆ.
“ಕಾರ್ಖಾನೆಗಳು ಉತ್ಪಾದಿಸುವ ಸರಕುಗಳ ಬೆಲೆಗಳು ಮತ್ತು ಕಚ್ಚಾ ವಸ್ತುಗಳ ಬೆಲೆಯು ಗಣನೀಯವಾಗಿ ಏರಿದೆ ಮತ್ತು ಈಗ ಕನಿಷ್ಠ 10 ವರ್ಷಗಳ ಅತ್ಯಧಿಕ ದರದಲ್ಲಿದೆ,” ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ ಮುಖ್ಯ ಅರ್ಥಶಾಸ್ತ್ರಜ್ಞ ಗ್ರಾಂಟ್ ಫಿಟ್ಜ್ನರ್ ಹೇಳಿದ್ದಾರೆ. ಕಳೆದ ವರ್ಷ ಕೆಲವು ಬೆಲೆಗಳಲ್ಲಿ “ನಾಟಕೀಯ ಕುಸಿತ”ವನ್ನು ಪ್ರಚೋದಿಸಿದ ಕೊರೊನಾ ಸಂಬಂಧಿತ ಲಾಕ್‌ಡೌನ್‌ಗಳ ಪರಿಣಾಮಗಳಿಂದ ವಾರ್ಷಿಕ ಹಣದುಬ್ಬರ ಅಂಕಿ-ಅಂಶಗಳು ಪ್ರಭಾವಿತವಾಗಿವೆ ಎಂದು ಒಎನ್‌ಎಸ್ ಎಚ್ಚರಿಸಿದೆ. ಈ ಅಸಾಧಾರಣವಾದ ಕಡಿಮೆ ಬೆಲೆಗಳು ಈಗ 12 ತಿಂಗಳ ಬೆಲೆ ಹೆಚ್ಚಳವನ್ನು ಲೆಕ್ಕಾಚಾರ ಮಾಡಲು ಆರಂಭಿಕ ಹಂತವಾಗಿದೆ. ಇದು ಅಂಕಿಅಂಶಗಳಲ್ಲಿ ಅಲ್ಪಾವಧಿಯ “ವ್ಯತ್ಯಾಸಗಳನ್ನು” ಉಂಟುಮಾಡುತ್ತದೆ.
ಇದನ್ನೂ ಓದಿ: Inflation: ಅಮೆರಿಕದಲ್ಲಿ ಹಣದುಬ್ಬರ ದರ 13 ವರ್ಷಗಳ ಗರಿಷ್ಠ ಮಟ್ಟಕ್ಕೆ, ಒಂದೇ ವರ್ಷದಲ್ಲಿ ಅನಿಲ ದರ ಶೇ 42ರಷ್ಟು ಏರಿಕೆ