
ಭಾರತದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI) ಹಲವು ಕಾರಣಗಳಿಗೆ ಗುರುತರವಾದುದು. ಹಣಕಾಸು ಪಾವತಿ ವ್ಯವಸ್ಥೆಯಲ್ಲೇ ದೊಡ್ಡ ಕ್ರಾಂತಿ ತರುತ್ತಿರುವ ಶ್ರೇಯಸ್ಸು ಅದಕ್ಕೆ ಸಲ್ಲಬೇಕು. ಹಲವು ದಶಕಗಳಿಂದ ಜಾಗತಿಕ ಹಣಕಾಸು ಪಾವತಿ ವ್ಯವಸ್ಥೆಯನ್ನು ಆಳುತ್ತಾ ಬಂದಿರುವ ವೀಸಾ, ಮಾಸ್ಟರ್ ಕಾರ್ಡ್ ಕಂಪನಿಗಳ ಪಾರುಪತ್ಯ ಅಂತ್ಯವಾಗುತ್ತಾ ಎಂದನಿಸುವಷ್ಟರ ಮಟ್ಟಿಗೆ ಭಾರತದ ದೇಶೀಯ ಪೇಮೆಂಟ್ ಸಿಸ್ಟಂ ಬೆಳೆಯುತ್ತಿದೆ. ಇತ್ತೀಚೆಗೆ ಐಎಂಎಫ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಯುಪಿಐ ವಿಶ್ವದಲ್ಲೇ ಅತಿಹೆಚ್ಚು ಪೇಮೆಂಟ್ ಟ್ರಾನ್ಸಾಕ್ಷನ್ ನಡೆಸುತ್ತಿದೆ. ಅಮೆರಿಕದ ವೀಸಾ (VISA) ಕಂಪನಿಯ ದಾಖಲೆಯನ್ನು ಯುಪಿಐ ಮುರಿದುಹಾಕಿದೆ.
ಯುಪಿಐ ಮೂಲಕ ದಿನಕ್ಕೆ 65 ಕೋಟಿ ಪೇಮೆಂಟ್ ಟ್ರಾನ್ಸಾಕ್ಷನ್ಸ್ ನಡೆಯುತ್ತಿವೆ. 2025ರ ಜೂನ್ ತಿಂಗಳಲ್ಲಿ ಈ ಮೈಲಿಗಲ್ಲು ಮುಟ್ಟಿದೆ. ಇದೇ ತಿಂಗಳು 1,839 ಕೋಟಿ ಸಂಖ್ಯೆಯಷ್ಟು ಟ್ರಾನ್ಸಾಕ್ಷನ್ ಅನ್ನು ಯುಪಿಐ ನಿರ್ವಹಣೆ ಮಾಡಿದೆ. ಇಷ್ಟೊಂದು ಸಂಖ್ಯೆಯಲ್ಲಿ ವಿಶ್ವದ ಯಾವ ಪೇಮೆಂಟ್ ಸಿಸ್ಟಂ ಕೂಡ ಟ್ರಾನ್ಸಾಕ್ಷನ್ ಮಾಡಿಲ್ಲ.
ಇದನ್ನೂ ಓದಿ: ಯುಪಿಐ ಚಾರ್ಜ್ಬ್ಯಾಕ್; ಜುಲೈ 15ರಿಂದ ಹೊಸ ನಿಯಮ; ಪೇಮೆಂಟ್ ವ್ಯಾಜ್ಯಕ್ಕೆ ಸಿಗಲಿದೆ ತ್ವರಿತ ಪರಿಹಾರ
ವಿಶ್ವದ ಅತಿದೊಡ್ಡ ಪೇಮೆಂಟ್ ನೆಟ್ವರ್ಕ್ಗಳ ಪೈಕಿ ಇರುವ ವೀಸಾ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆಗಳ ದಾಖಲೆಯನ್ನು ಯುಪಿಐ ಮುರಿದಿದೆ. ವೀಸಾ ಸಂಸ್ಥೆ ಒಂದು ದಿನದಲ್ಲಿ ಸರಾಸರಿಯಾಗಿ 63.9 ಕೋಟಿ ಪೇಮೆಂಟ್ ಟ್ರಾನ್ಸಾಕ್ಷನ್ ನಿರ್ವಹಿಸುತ್ತದೆ. ಮಾಸ್ಟರ್ ಕಾರ್ಡ್ ಮೂಲಕ ಸರಾಸರಿಯಾಗಿ 45 ಕೋಟಿ ಟ್ರಾನ್ಸಾಕ್ಷನ್ ಆಗುತ್ತದೆ. ಭಾರತದ ಶೇ. 80ರಷ್ಟು ಮತ್ತು ವಿಶ್ವದ ಶೇ. 60ರಷ್ಟು ಟ್ರಾನ್ಸಾಕ್ಷನ್ಗಳು ಯುಪಿಐ ಮೂಲಕ ಆಗುತ್ತದೆ ಎನ್ನುವುದು ವಿಶೇಷ.
ಕಾರ್ಡ್ ಪೇಮೆಂಟ್ ಸಿಸ್ಟಂಗಳಾದ ವೀಸಾ ಮತ್ತು ಮಾಸ್ಟರ್ಕಾರ್ಡ್ ಒಂದು ವರ್ಷದಲ್ಲಿ 13.2 ಟ್ರಿಲಿಯನ್ ಡಾಲರ್ ಮತ್ತು 6 ಟ್ರಿಲಿಯನ್ ಡಾಲರ್ ಮೊತ್ತದ ಟ್ರಾನ್ಸಾಕ್ಷನ್ ನಿರ್ವಹಣೆ ಮಾಡುತ್ತವೆ.
ಯೂನಿಯನ್ಪೇ (UnionPay) ಎಂಬುದು ಚೀನಾದಲ್ಲಿ ಇರುವ ಕಾರ್ಡ್ ಪೇಮೆಂಟ್ ಸಂಸ್ಥೆ. ವೀಸಾ ಮತ್ತು ಮಾಸ್ಟರ್ಕಾರ್ಡ್ ಮೀರಿಸಿ ಇದು ವರ್ಷಕ್ಕೆ ಅತಿಹೆಚ್ಚು ಮೊತ್ತದ ಹಣಕಾಸು ಪಾವತಿಯನ್ನು ನಿರ್ವಹಿಸುತ್ತದೆ. ಆದರೆ, ನಿಖರವಾಗಿ ಎಷ್ಟು ಮೊತ್ತ ಎಂಬ ಮಾಹಿತಿ ಲಭ್ಯ ಇಲ್ಲ.
ಇದನ್ನೂ ಓದಿ: ಭಾರತದಲ್ಲಿಯಂಥ ವೇಗದ ಪೇಮೆಂಟ್ ಸಿಸ್ಟಂ ಬೇರೆಲ್ಲೂ ಇಲ್ಲ ಎಂದ ಐಎಂಎಫ್; ಅಮೆರಿಕದಕ್ಕಿಂತ ಹೇಗೆ ಭಿನ್ನ? ಯುಪಿಐ ವಿಶೇಷತೆ ಏನು?
ಇವಕ್ಕೆ ಹೋಲಿಸಿದರೆ ಭಾರತದ ಯುಪಿಐ ಮೂಲಕ ಹತ್ತಿರಹತ್ತಿರ 300 ಬಿಲಿಯನ್ ಡಾಲರ್ ಮೊತ್ತದಷ್ಟು ಮಾತ್ರವೇ ಟ್ರಾನ್ಸಾಕ್ಷನ್ ಆಗುತ್ತದೆ. ಆದರೆ, ಎ ಟು ಎ ಅಥವಾ ಅಕೌಂಟ್ ಟು ಅಕೌಂಟ್ ಹಣ ವರ್ಗಾವಣೆಯಲ್ಲಿ (ATA transfer) ಯುಪಿಐನೇ ಕಿಂಗ್.
ವೀಸಾ ಮತ್ತು ಮಾಸ್ಟರ್ ಕಾರ್ಡ್ ಸಂಸ್ಥೆಗಳು ಭಾರತದಲ್ಲಿ ಅತಿಹೆಚ್ಚು ಬಳಕೆಯಲ್ಲಿರುವ ಕಾರ್ಡ್ ನೆಟ್ವರ್ಕ್. ಭಾರತದ್ದೇ ಸ್ವಂತ ರುಪೇ ಇದ್ದರೂ ವೀಸಾ ಮತ್ತು ಮಾಸ್ಟರ್ ಕಾರ್ಡ್ಗಳು ಅತಿಹೆಚ್ಚು ಬಳಕೆ ಆಗುತ್ತಿವೆ. ಇದರ ನಡುವೆ ಯುಪಿಐ ಕೇವಲ 9 ವರ್ಷ ಅವಧಿಯಲ್ಲಿ ತನ್ನದೇ ನೆಲೆ ಸ್ಥಾಪಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ