ಬ್ಲಿಂಕಿಟ್ ಯಶಸ್ಸಿಗೆ ಉದ್ಯೋಗಿಗಳ ‘ಅತೃಪ್ತಿ’ಯೇ ಕಾರಣವಾ? ಎಟರ್ನಲ್ ಸಿಇಒ ಬಿಚ್ಚಿಟ್ಟ ಸತ್ಯ ಇದು
Success secret of Blinkit: ಜೊಮಾಟೊದ ಸೋದರ ಕಂಪನಿಯಾದ ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಸಂಸ್ಥೆಗಳ ಪೈಕಿ ನಂಬರ್ ಒನ್ ಎನಿಸಿದೆ. ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಅವರು ಷೇರುದಾರರಿಗೆ ಬರೆದ ಪತ್ರದಲ್ಲಿ ಬ್ಲಿಂಕಿಟ್ ಯಶಸ್ಸಿನ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಬ್ಲಿಂಕಿಟ್ ತಂಡಗಳಲ್ಲಿ ಇರುವ ಅತೃಪ್ತಿ ಮನೋಭಾವವು ಯಶಸ್ಸಿಗೆ ಕಾರಣ ಎಂದಿದ್ದಾರೆ.

ನವದೆಹಲಿ, ಜುಲೈ 21: ಹತ್ತು ನಿಮಿಷಗಳಲ್ಲಿ ವಸ್ತುಗಳನ್ನು ಮನೆಗಳಿಗೆ ತಲುಪಿಸುವಂತಹ ಕ್ವಿಕ್ ಕಾಮರ್ಸ್ ಕಂಪನಿಗಳ ಪೈಕಿ ಬ್ಲಿಂಕಿಟ್ (Blinkit) ಅತಿಹೆಚ್ಚು ಯಶಸ್ಸು ಗಳಿಸಿದೆ. ಫಸ್ಟ್ ಮೂವರ್ ಅಡ್ವಾಂಟೇಜಾ? ಅಥವಾ ಬೇರೆ ವಿಶೇಷತೆ ಇದೆಯಾ? ಬ್ಲಿಂಕಿಟ್ ಆಗುವ ಮುನ್ನ ಅದರ ಹೆಸರು ಗ್ರೋಫರ್ಸ್ (Grofers) ಎಂದಿತ್ತು. ಗ್ರೋಫರ್ಸ್ ಭಾರತದ ಮೊದಲ ಕ್ವಿಕ್ ಕಾಮರ್ಸ್ ಕಂಪನಿ. ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ ಆಗಿದ್ದ ಜೊಮಾಟೋ (ಎಟರ್ನಲ್) ಕಂಪನಿ ಗ್ರೋಫರ್ಸ್ ಅನ್ನು ಖರೀದಿಸಿತು. ಅಲ್ಲಿಂದೀಚೆ ಬ್ಲಿಂಕಿಟ್ ನಾಗಾಲೋಟ ನಡೆಸುತ್ತಾ ಬಂದಿದೆ.
ಕ್ವಿಕ್ ಕಾಮರ್ಸ್ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ನಷ್ಟದ ಹೊರೆಯಲ್ಲಿ ಕುಸಿದುಬೀಳುತ್ತದೆ ಎಂದು ಹೇಳುತ್ತಿದ್ದವರ ಭವಿಷ್ಯನುಡಿಗಳನ್ನು ಬ್ಲಿಂಕಿಟ್ ಸುಳ್ಳಾಗಿಸಿದೆ. ಈ ಕಂಪನಿ ಯಶಸ್ಸು ಗಳಿಸಲು ಏನು ಕಾರಣ? ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ಇವತ್ತು ಸೋಮವಾರ ಷೇರುದಾರರಿಗೆ ಬರೆದ ಪತ್ರದಲ್ಲಿ ಕಾರಣ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ಫ್ಯೂಚರ್ ಇರುವ ಬ್ಯುಸಿನೆಸ್; ಸೋಲಾರ್ ಏಜೆನ್ಸಿ ಮತ್ತು ಡೀಲರ್ಶಿಪ್, ಯಾವುದು ಬೆಸ್ಟ್? ಇಲ್ಲಿದೆ ಡೀಟೇಲ್ಸ್
ಸಿಇಒ ಗೋಯಲ್ ಪ್ರಕಾರ, ಬ್ಲಿಂಕಿಟ್ ಪಡೆಯಲ್ಲಿ ಇರುವ ಅತೃಪ್ತ ಸಂಸ್ಕೃತಿಯೇ ಅದರ ಯಶಸ್ಸಿಗೆ ಕಾರಣವಂತೆ. ಅತೃಪ್ತ ಸಂಸ್ಕೃತಿಯಲ್ಲಿ ಖುಷಿ ಪಡುವುದೇನೆಂದು ಭಾವಿಸುತ್ತಿದ್ದರೆ, ಈ ಮುಂದಿನ ಮಾತುಗಳನ್ನು ಗಮನಿಸಿ:
‘ನಮ್ಮ ತಂಡಗಳು ಗೆಲುವನ್ನು ಸಂಭ್ರಮಿಸುವುದೇ ಅಪರೂಪ. ಲೋ ಪ್ರೊಫೈಲ್ನಲ್ಲಿ ಇರಲು ಬಯಸುತ್ತವೆ. ಸಾಧಿಸಿದ್ದು ಶೇ. 1 ಮಾತ್ರವೇ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟಿವೆ. ಇಲ್ಲಿವರೆಗೆ ಏನು ಸಾಧಿಸಿದ್ದೇವೆ ಎಂದು ಹಿಂದಿರುಗಿ ನೋಡದೆ ನಮ್ಮ ಗ್ರಾಹಕರ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಕೊಟ್ಟು ಕೆಲಸ ಮಾಡಲು ಬಯಸುತ್ತೇವೆ’ ಎಂದು ಎಟರ್ನಲ್ ಸಿಇಒ ದೀಪಿಂದರ್ ಗೋಯಲ್ ತಮ್ಮ ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಸ್ಟೋರ್ಗಳ ಮೇಲೆ ಸ್ಟೋರ್ಗಳನ್ನು ಸ್ಥಾಪಿಸುತ್ತಿರುವ ಬ್ಲಿಂಕಿಟ್
ಬ್ಲಿಂಕಿಟ್ ಕೇವಲ 10 ನಿಮಿಷದಲ್ಲಿ ದಿನಸಿ ವಸ್ತುಗಳನ್ನು ಮನೆಗಳಿಗೆ ತಲುಪಿಸುತ್ತದೆ. ಇದಕ್ಕಾಗಿ ಅದು ವಿವಿಧೆಡೆ ಡಾರ್ಕ್ ಸ್ಟೋರ್ಗಳನ್ನು ಸ್ಥಾಪಿಸಿದೆ. ಈ ಡಾರ್ಕ್ ಸ್ಟೋರ್ಗಳು ಒಂದು ರೀತಿಯಲ್ಲಿ ಸಂಗ್ರಹಗಾರವಿದ್ದಂತೆ. ದೇಶಾದ್ಯಂತ 1,544 ಸ್ಟೋರ್ಗಳಿವೆ. ಏಪ್ರಿಲ್ನಿಂದ ಜೂನ್ವರೆಗಿನ ಒಂದೇ ಕ್ವಾರ್ಟರ್ನಲ್ಲಿ 243 ಹೊಸ ಸ್ಟೋರ್ಗಳ ಸ್ಥಾಪನೆಯಾಗಿದೆ. ಡಿಸೆಂಬರ್ ತಿಂಗಳೊಳಗೆ ಸ್ಟೋರ್ಗಳ ಸಂಖ್ಯೆಯನ್ನು 2,000ಕ್ಕೆ ಏರಿಸುವ ಗುರಿ ಬ್ಲಿಂಕಿಟ್ನದ್ದು.
ಇದನ್ನೂ ಓದಿ: PM Kisan: ಅಪ್ಪನಿಂದ ಜಮೀನು ವರ್ಗಾವಣೆಯಾದರೆ ಪಿಎಂ ಕಿಸಾನ್ ಹಣ ನಿಂತುಹೋಗುತ್ತಾ? ಇಲ್ಲಿದೆ ಡೀಟೇಲ್ಸ್
ಗ್ರಾಹಕರ ಸಂಖ್ಯೆಯೂ ಏರಿಕೆ
ಬ್ಲಿಂಕಿಟ್ನಲ್ಲಿ ಆರ್ಡರ್ ಕೊಡುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಕಳೆದ ವರ್ಷದಲ್ಲಿ ವಹಿವಾಟು ನಡೆಸುವ ಗ್ರಾಹಕರ ಸರಾಸರಿ ಮಾಸಿಕ ಸಂಖ್ಯೆ 76 ಲಕ್ಷ ಇತ್ತು. ಈ ಬಾರಿ ಅದು 1.69 ಕೋಟಿಗೆ ಏರಿದೆ. ಆರ್ಡರ್ ವ್ಯಾಲ್ಯೂ ಶೇ. 127ರಷ್ಟು ಏರಿದೆ.
ಬ್ಲಿಂಕಿಟ್, ಜೊಮಾಟೊವನ್ನು ಹೊಂದಿರುವ ಎಟರ್ನಲ್ ಕಂಪನಿಯ ನಿವ್ವಳ ಲಾಭವು 253 ಕೋಟಿ ರೂನಿಂದ 25 ಕೋಟಿ ರೂಗೆ ಇಳಿದಿದೆ. ಹೊಸ ಹೊಸ ಸ್ಟೋರ್ಗಳಿಗೆ ವೆಚ್ಚ ಮಾಡಿದ್ದರಿಂದ ಲಾಭದಲ್ಲಿ ಕುಂಠಿತವಾಗಿರಬಹುದು. ಆದರೆ, ಪ್ರಾಫಿಟ್ ಮಾರ್ಜಿನ್ ಉತ್ತಮಗೊಂಡಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




