UPI New Rules: ಯುಪಿಐ ಟ್ರಾನ್ಸಾಕ್ಷನ್ ಮಿತಿ ಹೆಚ್ಚಳ; ಇಲ್ಲಿದೆ ಡೀಟೇಲ್ಸ್

New UPI transaction limit from 2025 Sep 15th: ಯುಪಿಐ ಪಾವತಿ ವಿಚಾರದಲ್ಲಿ ಕೆಲ ನಿಯಮಗಳನ್ನು ಪರಿಷ್ಕರಿಸಲಾಗಿದೆ. ಇನ್ಷೂರೆನ್ಸ್, ಲೋನ್, ಇಎಂಐ, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿಗೆ ಹೆಚ್ಚು ಹಣ ಪಾವತಿಸಬಹುದು. ಅಂಗಡಿಗಳಲ್ಲಿ ನೀವು ಒಂದೇ ವಹಿವಾಟಿನಲ್ಲಿ 5 ಲಕ್ಷ ರೂ ಪಾವತಿಸಬಹುದು. ದಿನಕ್ಕೆ ಎಷ್ಟು ಮೊತ್ತ ಬೇಕಾದರೂ ಯುಪಿಐನಲ್ಲಿ ಪಾವತಿಸಬಹುದು.

UPI New Rules: ಯುಪಿಐ ಟ್ರಾನ್ಸಾಕ್ಷನ್ ಮಿತಿ ಹೆಚ್ಚಳ; ಇಲ್ಲಿದೆ ಡೀಟೇಲ್ಸ್
ಯುಪಿಐ

Updated on: Sep 15, 2025 | 12:20 PM

ನವದೆಹಲಿ, ಸೆಪ್ಟೆಂಬರ್ 15: ಭಾರತದ ಅತ್ಯಂತ ಜನಪ್ರಿಯ ಪಾವತಿ ಸಿಸ್ಟಂ ಆದ ಯುಪಿಐನ ನಿಯಮಗಳಲ್ಲಿ ಮತ್ತೆ ಬದಲಾವಣೆ ಆಗಿದೆ. ಕೆಲ ವಿಭಾಗಗಳ ಪಾವತಿಗೆ ಟ್ರಾನ್ಸಾಕ್ಷನ್ ಮಿತಿಯನ್ನು (UPI transaction limit) ಹೆಚ್ಚಿಸಲಾಗಿದೆ. ಐದು ಲಕ್ಷ ರೂನಿಂದ ಹಿಡಿದು 10 ಲಕ್ಷ ರೂವರೆಗೆ ಒಂದು ದಿನದ ವಹಿವಾಟು ಮಿತಿಯನ್ನು ಏರಿಸಲಾಗಿದೆ. 2025ರ ಸೆಪ್ಟೆಂಬರ್ 15ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತದೆ. ಇನ್ಷೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸರ್ವಿಸ್​ಗಳಿಗೆ ಹಣ ಪಾವತಿಸಲು ಇದ್ದ ಮಿತಿಯನ್ನು ಏರಿಸಲಾಗಿದೆ.

ಈ ಮಿತಿ ಹೆಚ್ಚಳದೊಂದಿಗೆ ಯುಪಿಐನ ಉಪಯುಕ್ತತೆ ಮತ್ತಷ್ಟು ಹೆಚ್ಚಲಿದೆ. ದೊಡ್ಡ ಮೊತ್ತದ ಹಣ ಪಾವತಿ ಯುಪಿಐ ಮೂಲಕ ಸಾಧ್ಯವಾಗುತ್ತಿರಲಿಲ್ಲ. ಈಗ ಜನರು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಬಳಸಿ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಐಟಿಆರ್ ಫೈಲಿಂಗ್, ಡೆಡ್​ಲೈನ್ ವಿಸ್ತರಿಸಲು ಎಲ್ಲೆಡೆ ಬೇಡಿಕೆ; ಸೆ. 30ರವರೆಗೂ ಕಾಲಾವಕಾಶ ಸಿಗುತ್ತಾ?

ಇನ್ಷೂರೆನ್ಸ್, ಲೋನ್ ಮತ್ತು ಇಎಂಐ

ಈಗ ಹೆಚ್ಚು ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್, ಸಾಲದ ಇಎಂಐ ಪಾವತಿಸಬಹುದು. ಒಮ್ಮೆಗೇ 5,00,000 ರೂವರೆಗೆ ಹಣ ಪಾವತಿಸಬಹುದು. ಒಂದು ದಿನದಲ್ಲಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಪ್ರೀಮಿಯಮ್, ಇಎಂಐಗಳನ್ನು ಕಟ್ಟಬಹುದು. ಈ ಮೊದಲಾದರೆ ಐದು ಲಕ್ಷ ರೂ ಪಾವತಿಸಬೇಕಾದರೆ ಹಲವು ಬಾರಿ ಸಣ್ಣ ಸಣ್ಣ ಮೊತ್ತಗಳನ್ನು ಪಾವತಿಸಬೇಕಿತ್ತು.

ಷೇರು ಮಾರುಕಟ್ಟೆಯಲ್ಲೂ ಪಾವತಿ ಮಿತಿ ಹೆಚ್ಚಳ

ಷೇರು ಮಾರುಕಟ್ಟೆಯಲ್ಲೂ ಹೂಡಿಕೆದಾರರು ಒಮ್ಮೆಗೇ ಐದು ಲಕ್ಷ ರೂ ಹಣ ಪಾವತಿಸಬಹುದು. ಇಲ್ಲಿಯೂ ಕೂಡ ದಿನಕ್ಕೆ 10 ಲಕ್ಷ ರೂವರೆಗೆ ಪಾವತಿಸಲು ಅವಕಾಶ ಇದೆ.

ಕ್ರೆಡಿಟ್ ಕಾರ್ಡ್ ಬಿಲ್

ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ 5 ಲಕ್ಷ ರೂ ಇದ್ದರೆ ಅದನ್ನು ಒಮ್ಮೆಲೇ ಪಾವತಿಸಬಹುದು. ಒಂದು ದಿನದಲ್ಲಿ ಆರು ಲಕ್ಷ ರೂವರೆಗೆ ಪಾವತಿಸಲು ಮಿತಿ ಇರುತ್ತದೆ.

ಇನ್ನು, ಪ್ರಯಾಣಕ್ಕೆ ಸಂಬಂಧಿಸಿದ ಬುಕಿಂಗ್ ಮತ್ತು ವೆಚ್ಚಗಳಿಗೂ ಒಂದೇ ಬಾರಿಗೆ 5,00,000 ರೂವರೆಗೆ ಪಾವತಿಸಲು ಅವಕಾಶ ಇದೆ. ಇಲ್ಲಿ ದಿನದ ಮಿತಿ 10 ಲಕ್ಷ ರೂ ಇದೆ.

ಇದನ್ನೂ ಓದಿ: ಭಾರತ ಹೇಗೆ ಸಾಗಬೇಕು? ಮಲೇಷ್ಯಾವಾ, ಕೊರಿಯಾವಾ? ಭಾರತದ 16 ವರ್ಷದ ಜೀನಿಯಸ್ ಬಾಲಕ ಹೇಳೋದೇನು ಗೊತ್ತಾ?

ಒಡವೆ ಹಾಗೂ ಅಂಗಡಿಗಳಿಗೆ ಪಾವತಿ

ಒಡವೆಗಳನ್ನು ಖರೀದಿಸುವಾಗ ಒಮ್ಮೆಗೇ ಐದು ಲಕ್ಷ ರೂ ಪಾವತಿಸಬಹುದು. ಇದರಲ್ಲಿ ದಿನಕ್ಕೆ 6,00,000 ರೂ ಮಿತಿ ಇದೆ.

ವರ್ತಕರಿಗೆ ಒಂದೇ ವಹಿವಾಟಿನಲ್ಲಿ ಐದು ಲಕ್ಷ ರೂ ಪಾವತಿಸಬಹುದು. ಇಲ್ಲಿ ದಿನದ ಮಿತಿ ನಿಗದಿ ಮಾಡಲಾಗಿಲ್ಲ.

ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ

ವ್ಯಕ್ತಿಯಿಂದ ವ್ಯಕ್ತಿಗೆ ಈ ಮೊದಲು 1 ಲಕ್ಷ ರೂ ಪಾವತಿಸಬಹುದಾಗಿತ್ತು. ಈಗ ಅದೇ ನಿಯಮ ಮುಂದುವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ