AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ

Cash withdrawal by scanning QR code: ಯುಪಿಐ ಸಕ್ರಿಯ ಎಟಿಎಂಗಳಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ 2,000 ರೂಗಳವರೆಗೆ ಕ್ಯಾಷ್ ಪಡೆಯುವ ಸೌಲಭ್ಯ ಇದೆ. ಆದರೆ, ಈಗ ದೇಶಾದ್ಯಂತ ಇರುವ 20 ಲಕ್ಷ ಬ್ಯಾಂಕ್ ಉಪಘಟಕಗಳಲ್ಲಿ ಯುಪಿಐ ಮೂಲಕ ಕ್ಯಾಷ್ ವಿತ್​​ಡ್ರಾ ಮಾಡುವ ಕಾಲ ಬರುತ್ತಿದೆ. ಯುಪಿಐ ರೂಪಿಸಿದ ಎನ್​ಪಿಸಿಐನಿಂದ ಇಂಥದ್ದೊಂದು ಪ್ರಸ್ತಾವ ಆರ್​ಬಿಐಗೆ ಸಲ್ಲಿಕೆಯಾಗಿದೆ.

ಫೋನ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡಿ; ಸರ್ಕಾರದಿಂದ ಹೊಸ ಪ್ರಯತ್ನ
ಯುಪಿಐ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2025 | 5:57 PM

Share

ನವದೆಹಲಿ, ಸೆಪ್ಟೆಂಬರ 15: ಭಾರತದಲ್ಲಿ ಡಿಜಿಟಲ್ ಪಾವತಿ ಸ್ವರೂಪ ಬದಲಾಗುತ್ತಲೇ ಇದೆ. ಯುಪಿಐ ಪಾವತಿ (UPI payment) ವ್ಯವಸ್ಥೆಯಲ್ಲಿ ಸುಧಾರಣೆಗಳು ಹಾಗೂ ಅದರ ಬಳಕೆ ವ್ಯಾಪ್ತಿ ಹೆಚ್ಚುತ್ತಲೇ ಇರುತ್ತದೆ. ಆನ್​ಲೈನ್​ನಲ್ಲಿ ಹಣ ಪಾವತಿ ಮಾಡಲು ಯುಪಿಐ ಬಳಕೆ ಆಗುತ್ತಿದೆ. ಇದೀಗ ಯುಪಿಐ ಆಫ್ಲೈನ್ ಟ್ರಾನ್ಸಾಕ್ಷನ್​ಗೂ ಬಳಕೆಯಾಗಲಿದೆ. ಬ್ಯಾಂಕುಗಳಲ್ಲಿ ಯುಪಿಐ ಆ್ಯಪ್​ನಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ವಿತ್​ಡ್ರಾ ಮಾಡುವ ಸೌಲಭ್ಯ ಒದಗಿಸುವ ಚಿಂತನೆ ನಡೆದಿದೆ.

ಮೊಬೈಲ್ ಫೋನ್​ಗಳಿಂದ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಕ್ಯಾಷ್ ಪಡೆಯುವ ಸೌಲಭ್ಯ ನಿರ್ಮಿಸಲು ಅನುವು ಮಾಡಿಕೊಡಬೇಕೆಂದು ಎನ್​ಪಿಸಿಐ ಆರ್​ಬಿಐ ಬಳಿ ಮನವಿ ಮಾಡಿದೆ ಎಂದು ವರದಿಯೊಂದರಲ್ಲಿ ಹೇಳಲಾಗಿದೆ. ಬಹಳಷ್ಟು ವ್ಯಾಪಕವಾಗಿರುವ ಬ್ಯಾಂಕುಗಳ ಉಪಘಟಕಗಳಲ್ಲಿ ಈ ಸೌಲಭ್ಯ ನಿರ್ಮಿಸಲು ಯೋಜಿಸಲಾಗಿದೆ.

ಇದನ್ನೂ ಓದಿ: ತಿಂಗಳಿಗೆ 1 ಲಕ್ಷ ರೂ ಆದಾಯ ಪಡೆಯಲು ಎಷ್ಟು ಹೂಡಿಕೆ ಅಗತ್ಯ?

ಗ್ರಾಮೀಣ ಹಾಗೂ ದೂರ ಪ್ರದೇಶಗಳಲ್ಲಿ ಇಂಥ ಬ್ಯಾಂಕ್ ಘಟಕಗಳು ಅಥವಾ ಬ್ಯುಸಿನೆಸ್ ಕರೆಸ್ಪಾಂಡೆಂಟ್​ಗಳು ಅಸ್ತಿತ್ವದಲ್ಲಿವೆ. ಒಂದು ಅಂದಾಜು ಪ್ರಕಾರ 20 ಲಕ್ಷ ಬಿಸಿಗಳು ದೇಶಾದ್ಯಂತ ಇವೆ. ಇವೆಲ್ಲದರಲ್ಲೂ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಅಳವಡಿಕೆಯಾದರೆ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ಸದ್ಯ ದೇಶದ ಕೆಲವೇ ಕೆಲವು ಆಯ್ದ ಎಟಿಎಂಗಳಲ್ಲಿ ಯುಪಿಐ ಕ್ಯಾಷ್ ವಿತ್​ಡ್ರಾಯಲ್ ಸೌಲಭ್ಯ ಇದೆ. ಇದು ಬಿಟ್ಟರೆ ಆಧಾರ್ ಫಿಂಗರ್ ಪ್ರಿಂಟ್ ಮೂಲಕ ಹಣ ವಿತ್​ಡ್ರಾ ಮಾಡುವ ಅವಕಾಶ ಇದೆ. ಆದರೆ, ಇವೆರಡೂ ವ್ಯವಸ್ಥೆಯಲ್ಲಿ ಮಿತಿ ಇದೆ. ಯುಪಿಐ ಎನೇಬಲ್ ಆದ ಎಟಿಎಂಗಳಲ್ಲಿ ನೀವು ನಗರಗಳಲ್ಲಿ 1,000 ರೂವರೆಗೆ ವಿತ್​ಡ್ರಾ ಮಾಡಬಹುದು. ಗ್ರಾಮೀಣ ಭಾಗಗಳಲ್ಲಿ 2,000 ರೂ ವಿತ್​ಡ್ರಾ ಮಾಡಬಹುದು. ಬಯೋಮೆಟ್ರಿಕ್ ಅಥೆಂಟಿಕೇಶನ್ ಕೆಲವೊಮ್ಮೆ ಕೆಲಸ ಮಾಡದೇ ಹೋಗಬಹುದು.

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳ ಮೇಲೆ ಹಣದ ಹೊಳೆ; ಭರಪೂರ ಲಾಭ ತರುವ ಇದರ ಮೇಲೆ ಹೂಡಿಕೆ ಹೇಗೆ?

ಸದ್ಯ ಎನ್​ಪಿಸಿಐ ಮಾಡಿರುವ ಪ್ರಸ್ತಾವದ ಪ್ರಕಾರ, ಬ್ಯಾಂಕುಗಳ ಉಪಘಟಕಗಳಲ್ಲಿ ಇರುವ ಕ್ಯುಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಒಮ್ಮೆಗೆ 10,000 ರೂ ವಿತ್​ಡ್ರಾ ಮಾಡಲು ಅವಕಾಶ ಕೊಡಬೇಕು. ಒಂದು ಟ್ರಾನ್ಸಾಕ್ಷನ್​ನಿಂದ ಮತ್ತೊಂದು ಟ್ರಾನ್ಸಾಕ್ಷನ್​ಗೆ 30 ನಿಮಿಷ ಅಂತರ ಇರಬೇಕು ಎನ್ನುವ ಪ್ರಸ್ತಾವ ಇದೆ.

ಎಟಿಎಂ ಕಾರ್ಡ್ ಮರೆತಿರುವವರು, ಅಥವಾ ಕಾರ್ಡ್ ಇಲ್ಲದೇ ಇರುವವರು, ಮತ್ತು ಸಮೀಪದಲ್ಲಿ ಎಟಿಎಂಗಳು ಇಲ್ಲದಿರುವವರಿಗೆ ಈ ಕ್ಯುಆರ್ ಕೋಡ್ ಸಿಸ್ಟಂ ಉಪಯುಕ್ತ ಎನಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ