ಅಮೆರಿಕದಲ್ಲಿ ಸದ್ಯಕ್ಕಿಲ್ಲ ಬಡ್ಡಿದರ ಕಡಿತ; ಈ ವರ್ಷ ಮೂರು ಇಳಿಕೆಯ ಸುಳಿವು ನೀಡಿದ ಸೆಂಟ್ರಲ್ ಬ್ಯಾಂಕ್

|

Updated on: Mar 21, 2024 | 10:10 AM

US Federal Reserve Keeps Lending rates Unchanged: ಅಮೆರಿಕದ ಫೆಡರಲ್ ರಿಸರ್ವ್ ತನ್ನ ಸಾಲದ ಬಡ್ಡಿದರದ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. 23 ವರ್ಷಗಳ ಗರಿಷ್ಠ ಮಟ್ಟವಾದ ಶೇ. 5.25ರಿಂದ ಶೇ. 5.50ರ ಶ್ರೇಣಿಯ ಬಡ್ಡಿದರ ಉಳಿಸಲು ನಿರ್ಧರಿಸಲಾಗಿದೆ. ಫೆಡ್ ರಿಸರ್ವ್​ನ ಈ ನಿರ್ಧಾರ ನಿರೀಕ್ಷಿತವೇ ಆಗಿದೆ. ಆದರೆ, 2024ರಲ್ಲಿ ಮೂರು ಬಾರಿ ಬಡ್ಡಿದರ ಕಡಿತಗೊಳಿಸುವ ಸುಳಿವನ್ನು ಸೆಂಟ್ರಲ್ ಬ್ಯಾಂಕ್ ನೀಡಿದೆ. 2024ರ ವರ್ಷಾಂತ್ಯದಲ್ಲಿ ಬಡ್ಡಿದರ ಶೇ. 4.50ರಿಂದ ಶೇ. 4.75ರ ಶ್ರೇಣಿಗೆ ಇಳಿಯಬಹುದು ಎಂಬ ನಿರೀಕ್ಷೆಯನ್ನು ಅದು ಇಟ್ಟಿದೆ.

ಅಮೆರಿಕದಲ್ಲಿ ಸದ್ಯಕ್ಕಿಲ್ಲ ಬಡ್ಡಿದರ ಕಡಿತ; ಈ ವರ್ಷ ಮೂರು ಇಳಿಕೆಯ ಸುಳಿವು ನೀಡಿದ ಸೆಂಟ್ರಲ್ ಬ್ಯಾಂಕ್
ಅಮೆರಿಕದ ಫೆಡರಲ್ ರಿಸರ್ವ್
Follow us on

ನವದೆಹಲಿ, ಮಾರ್ಚ್ 21: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ (US Fed Reserve) ನಿರೀಕ್ಷೆಯಂತೆ ಬಡ್ಡಿದರಗಳ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ. ಸಾಲದ ಬಡ್ಡಿದರವನ್ನು ಶೇ. 5.25ರಿಂದ ಶೇ. 5.50ರ ಶ್ರೇಣಿಯಲ್ಲಿ ಮುಂದುವರಿಸಿದೆ. ಸತತ ಐದನೇ ಬಾರಿ ಫೆಡರಲ್ ರಿಸರ್ವ್ ಸಭೆಯಲ್ಲಿ ದರ ಬದಲಾವಣೆ ಮಾಡಲಾಗಿಲ್ಲ. ಕಳೆದ 23 ವರ್ಷಗಳಲ್ಲೇ ಇದು ಗರಿಷ್ಠ ಬಡ್ಡಿದರದ (lending rates) ಮಟ್ಟವೂ ಹೌದು. ಮುಖ್ಯ ವಿಚಾರ ಎಂದರೆ ಈ 2024ರ ವರ್ಷದಲ್ಲಿ ಮೂರು ಬಾರಿ ದರ ಕಡಿತಗೊಳಿಸುವ ಸುಳಿವನ್ನು ಸೆಂಟ್ರಲ್ ಬ್ಯಾಂಕ್ ನೀಡಿದೆ. ಅಂದರೆ, ಡಿಸೆಂಬರ್​ನೊಳಗೆ ನಡೆಯಬಹುದಾದ ನಾಲ್ಕೈದು ಸಭೆಯಲ್ಲಿ ಮೂರು ಸಲ ಬಡ್ಡಿದರ ಇಳಿಸುವ ನಿರ್ಧಾರ ಮಾಡುವ ಸಾಧ್ಯತೆ ಇದೆ. ಆದರೆ ಅದೆಲ್ಲವೂ ಅಮೆರಿಕದಲ್ಲಿ ಹಣದುಬ್ಬರದ ಇಳಿಕೆಯ ಮೇಲೆ ಅವಲಂಬಿತವಾಗಿದೆ.

ಭಾರತದಲ್ಲಿ ಬಡ್ಡಿದರ ಮತ್ತು ಹಣದುಬ್ಬರಕ್ಕೆ ಹೋಲಿಸಿದರೆ ಅಮೆರಿಕದಲ್ಲಿ ಕಡಿಮೆ. ಅಲ್ಲಿ ಹಣದುಬ್ಬರ ಶೇ. 3.2ರಷ್ಟಿದೆ. ಆದರೆ, ಅಲ್ಲಿನ ಆರ್ಥಿಕತೆಗೆ ಇದು ಹೆಚ್ಚಿನ ಮಟ್ಟವಾಗಿದೆ. ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವುದು ಆ ದೇಶ ಇಟ್ಟಿರುವ ಗುರಿ. ಅದು ಆ ಮಟ್ಟಕ್ಕೆ ಇಳಿಯುವವರೆಗೂ ಬಡ್ಡಿದರ ಕಡಿಮೆ ಮಾಡುವ ಸಾಹಸಕ್ಕೆ ಕೈ ಹಾಕದೇ ಹೋಗಬಹುದು.

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ

ಬಡ್ಡಿದರ ಕಡಿಮೆ ಮಾಡಿದರೆ ಏನು ಸಮಸ್ಯೆ?

ಒಂದು ಆರ್ಥಿಕತೆಗೆ ಬಡ್ಡಿದರ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯ ಹಾಗೂ ಸರಳ ಲೆಕ್ಕಾಚಾರದಲ್ಲಿ, ಹಣದುಬ್ಬರ ಹೆಚ್ಚಿದ್ದ ಸಂದರ್ಭದಲ್ಲಿ ಬ್ಯಾಂಕ್ ಬಡ್ಡಿದರವನ್ನೂ ಹೆಚ್ಚಿಸಲಾಗುತ್ತದೆ. ಜನರು ಹೆಚ್ಚು ಖರ್ಚು ಮಾಡದಂತೆ ನಿಯಂತ್ರಿಸಿದರೆ ಬೆಲೆ ಏರಿಕೆ ಕುಗ್ಗುತ್ತದೆ ಎನ್ನುವ ತರ್ಕ ಅದು. ಹಾಗೆಯೇ, ಬ್ಯಾಂಕ್ ಬಡ್ಡಿದರ ಕಡಿಮೆ ಮಾಡಿದರೆ ಜನರು ಹೆಚ್ಚೆಚ್ಚು ಖರ್ಚು ಮಾಡಲು ಪ್ರೇರೇಪಿಸುತ್ತದೆ. ಇದರಿಂದ ಆರ್ಥಿಕತೆ ಸರಾಗಗೊಳ್ಳುತ್ತದೆ ಎಂಬುದು ಲೆಕ್ಕಾಚಾರ.

ಅಮೆರಿಕದಲ್ಲಿ ಈಗ ಆರ್ಥಿಕತೆ ಮಂದ ವೇಗದಲ್ಲಿ ಸಾಗುತ್ತಿದೆ. ಹಣದುಬ್ಬರ ಹೆಚ್ಚಿನ ಮಟ್ಟದಲ್ಲಿ ಇದೆ. ಹೀಗಾಗಿ, ಇದು ಆ ದೇಶಕ್ಕೆ ಮತ್ತು ಅಲ್ಲಿನ ಹಣಕಾಸು ನೀತಿ ರೂಪಕರಿಗೆ ಇಬ್ಬಂದಿಯ ಸ್ಥಿತಿ. ಅಮೆರಿಕ ಮಾತ್ರವಲ್ಲ ಭಾರತವೂ ಸೇರಿದಂತೆ ವಿಶ್ವದ ಹಲವು ದೇಶಗಳಿಗೆ ಒದಗಿಬಂದಿರುವ ಉಭಯ ಸಂಕಟ ಇದು.

ಇದನ್ನೂ ಓದಿ: ಎಂಜಿ ಮೋಟಾರ್ ಜೊತೆ ಜೆಎಸ್​ಡಬ್ಲ್ಯು ಜಂಟಿ ವ್ಯವಹಾರ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಜಿಎಂ ಎಲೆಕ್ಟ್ರಿಕ್ ಕಾರುಗಳು

ಭಾರತದ ಮೇಲೇನು ಪರಿಣಾಮ?

ಸಾಮಾನ್ಯವಾಗಿ ಅಮೆರಿಕದಲ್ಲಿ ಆಗುವ ಯಾವುದೇ ಹಣಕಾಸು ಮತ್ತು ಆರ್ಥಿಕ ಬದಲಾವಣೆಗಳು ಭಾರತೀಯ ಷೇರು ಮಾರುಕಟ್ಟೆಯನ್ನು ಪ್ರಭಾವಿಸುತ್ತವೆ. ಅಮೆರಿಕದಲ್ಲಿ ಈ ಬಾರಿ ಬಡ್ಡಿದರದ ಯಥಾಸ್ಥಿತಿ ಪಾಲಿಸಬಹುದು ಎನ್ನುವ ನಿರೀಕ್ಷೆ ಇತ್ತಾದ್ದರಿಂದ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯತ್ಯಯಗಳಾಗಿಲ್ಲ. ಆದರೆ, ಜಾಗತಿಕವಾಗಿ ಚಿನ್ನದ ಬೆಲೆ ಗಣನೀಯವಾಗಿ ಹೆಚ್ಚಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ