ಎಂಜಿ ಮೋಟಾರ್ ಜೊತೆ ಜೆಎಸ್ಡಬ್ಲ್ಯು ಜಂಟಿ ವ್ಯವಹಾರ: ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಜಿಎಂ ಎಲೆಕ್ಟ್ರಿಕ್ ಕಾರುಗಳು
JSW MG Motor India Pvt Ltd: ಭಾರತದ ಜೆಎಸ್ಡ್ಲ್ಯು ಗ್ರೂಪ್ ಈಗ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ಚೀನಾದ ಎಸ್ಎಐಸಿ ಮಾಲಕತ್ವದ ಎಂಜಿ ಮೋಟಾರ್ಸ್ ಜೊತೆ ಜೆಎಸ್ಡಬ್ಲ್ಯು ಕೈ ಜೋಡಿಸಿದೆ. 5,000 ಕೋಟಿ ರೂ ಹೂಡಿಕೆ ಮಾಡಲಿರುವ ಜೆಎಸ್ಡಬ್ಲ್ಯು, ಗುಜರಾತ್ನ ಹಲೋಲ್ನಲ್ಲಿರುವ ಎಂಜಿಎಂನ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಹೆಚ್ಚಿಸಲಿದೆ. ಸದ್ಯ ವರ್ಷಕ್ಕೆ 1 ಲಕ್ಷ ವಾಹನ ಉತ್ಪಾದನೆಯ ಸಾಮರ್ಥ್ಯ ಇದೆ. ಇದನ್ನು 3 ಲಕ್ಷಕ್ಕೆ ಏರಿಸುವ ಯೋಜನೆ ಹಾಕಲಾಗಿದೆ.
ನವದೆಹಲಿ, ಮಾರ್ಚ್ 20: ಉಕ್ಕಿನ ಉತ್ಪಾದನೆಗೆ ಹೆಸರುವಾಸಿಯಾಗಿರುವ ಜೆಎಸ್ಡಬ್ಲ್ಯು ಗ್ರೂಪ್ (JSW group) ಈಗ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಭರ್ಜರಿಯಾಗಿ ಪ್ರವೇಶ ಮಾಡುತ್ತಿದೆ. ಬ್ರಿಟನ್ ಮೂಲದ ಎಂಜಿ ಮೋಟಾರ್ ಸಂಸ್ಥೆ (MG Motor) ಜೊತೆ ಜೆಎಸ್ಡಬ್ಲ್ಯು ಗ್ರೂಪ್ ಜಂಟಿ ವ್ಯವಹಾರ (joint venture) ಶುರು ಮಾಡಿದ್ದು, ಎರಡೂ ಸೇರಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಲು ಯೋಜಿಸಿವೆ. ಈ ವರ್ಷ ಡಿಸೆಂಬರ್ನೊಳಗೆ ಎರಡು ಹೊಸ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆ ಆಗಲಿವೆ. ಪ್ರತೀ ಆರು ತಿಂಗಳಿಗೆ ಕನಿಷ್ಠ ಒಂದಾದರೂ ಕಾರ್ ಮಾಡಲ್ ಅನ್ನು ತಯಾರಿಸಿ ಬಿಡುಗಡೆ ಮಾಡುವುದು ಜೆಎಸ್ಡಬ್ಲ್ಯೂ ಗ್ರೂಪ್ನ ಪ್ಲಾನ್ ಆಗಿದೆ.
ಈ ಜಂಟಿ ವ್ಯವಹಾರದ ಸಂಸ್ಥೆಯ ಹೆಸರು ಜೆಎಸ್ಡಬ್ಲ್ಯು ಎಂಜಿ ಮೋಟಾರ್ ಇಂಡಿಯಾ ಪ್ರೈ ಲಿ ಎಂದು ಇಡಲಾಗಿದೆ. ಗುಜರಾತ್ನ ಹಲೋಲ್ನಲ್ಲಿ ಇದರ ಘಟಕ ಇರುತ್ತದೆ. ಎಂಜಿ ಮೋಟಾರ್ಸ್ ವರ್ಷಕ್ಕೆ 1 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈಗ ಜೆಎಸ್ಡಬ್ಲ್ಯು ಸೇರ್ಪಡೆಯೊಂದಿಗೆ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 3 ಲಕ್ಷ ಯೂನಿಟ್ಗೆ ಹೆಚ್ಚಲಿದೆ.
ಇದನ್ನೂ ಓದಿ: ಕೇವಲ ಒಂದು ಲಕ್ಷ ಇನ್ವೆಸ್ಟ್ಮೆಂಟ್ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್ವಿಡಿಯಾ ಮ್ಯಾಜಿಕ್
ಬಹಳ ಕಡಿಮೆ ಬೆಲೆಗೆ ಕಾರುಗಳ ತಯಾರಿಕೆ
ಜೆಎಸ್ಡಬ್ಲ್ಯು ಎಂಜಿ ಮೋಟಾರ್ಸ್ ಸಂಸ್ಥೆ ಪ್ರೀಮಿಯಮ್ ಮತ್ತು ಮೇನ್ಸ್ಟ್ರೀಮ್ ಎರಡೂ ಕೆಟಗರಿಯ ಕಾರುಗಳನ್ನು ತಯಾರಿಸಲಿದೆ. ಕಡಿಮೆ ಬೆಲೆಗೆ ಗುಣಮಟ್ಟದ ಉತ್ಪನ್ನ ತರಲಿದ್ದು, ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ತಮ್ಮ ಕಂಪನಿ ಮುಂಚೂಣಿಯಲ್ಲಿ ಇರುತ್ತದೆ ಎಂದು ಜೆಎಸ್ಡಬ್ಲ್ಯೂ ಗ್ರೂಪ್ನ ಪಾರ್ಥ್ ಜಿಂದಾಲ್ ಹೇಳುತ್ತಾರೆ.
ಎಂಜಿ ಮೋಟಾರ್ಸ್ ಸಂಸ್ಥೆ ಜಾಗತಿಕವಾಗಿ ಪ್ರೀಮಿಯಮ್ ವಿಭಾಗದಲ್ಲಿ ಒಳ್ಳೆಯ ಮಾಡಲ್ಗಳನ್ನು ಹೊಂದಿದೆ. ಇವುಗಳನ್ನು ಭಾರತದ ಮಾರುಕಟ್ಟೆಗೆ ತರುವ ಆಲೋಚನೆಯೂ ಜೆಎಸ್ಡಬ್ಲ್ಯುಗೆ ಇದೆ.
ಈ ಜಂಟಿ ವ್ಯವಹಾರದಲ್ಲಿ ಜೆಎಸ್ಡಬ್ಲ್ಯು 5,000 ಕೋಟಿ ರೂ ಹೂಡಿಕೆ ಮಾಡಲು ನಿರ್ಧರಿಸಿದೆ. ಹೊಸ ಸಂಸ್ಥೆಗೆ ಜೆಎಸ್ಡಬ್ಲ್ಯು ಗ್ರೂಪ್ನಿಂದ ಒಬ್ಬರು ಛೇರ್ಮನ್ ಆಗಿರುತ್ತಾರೆ. ಮಂಡಳಿಯು ಎಸ್ಎಐಸಿಯದ್ದಾಗಿರುತ್ತದೆ.
ಎಂಜಿ ಮೋಟಾರ್ಸ್ ಸಂಸ್ಥೆ 20ನೇ ಶತಮಾನದ 20ರ ದಶಕದಲ್ಲಿ ಆರಂಭವಾಗಿದೆ. ಮಾರಿಸ್ ಗ್ಯಾರೇಜಸ್ ಇದರ ಮೂಲ ಹೆಸರು. ಬಳಿಕ ಇದರ ಮಾಲಿಕತ್ವ ಬದಲಾಗುತ್ತಾ ಹೋಗಿದ್ದು, 2006ರಿಂದ ಚೀನೀ ಕಂಪನಿಗಳ ಮಾಲಿಕತ್ವದಲ್ಲಿದೆ. ಪ್ರಸಕ್ತ, ಚೀನಾದ ಸರ್ಕಾರಿ ಸ್ವಾಮ್ಯದ ಎಸ್ಎಐಸಿ ಮೋಟಾರ್ ಕಾರ್ಪೊರೇಶನ್ ಎಂಜಿ ಮೋಟಾರ್ಸ್ನ ಮಾಲೀಕ ಸಂಸ್ಥೆಯಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ