ಇವತ್ತಿನ ಯುವಕರು ಉದ್ಯೋಗಾಕಾಂಕ್ಷಿಯಲ್ಲ, ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಾರೆ: ಸ್ಟಾರ್ಟಪ್ ಮಹಾಕುಂಭದಲ್ಲಿ ಪಿಎಂ ಮೋದಿ ಹೇಳಿಕೆ
PM Narendra Modi spoke at Startup Mahakumbh: ಇವತ್ತಿನ ಯುವಜನಾಂಗದವರು ಉದ್ಯೋಗಾಕಾಂಕ್ಷಿಯ ಮಾನಸಿಕತೆಯಿಂದ ಬದಲಾಗಿದ್ದು ಈಗ ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ನಗರಿಯಲ್ಲಿ ಸರ್ಕಾರದ ವತಿಯಿಂದ ಆಯೋಜಿಸಲಾದ ಸ್ಟಾರ್ಟಪ್ ಮಹಾಕುಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿ ಶೇ. 45ರಷ್ಟು ಸ್ಟಾರ್ಟಪ್ಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದೂ ಪ್ರಧಾನಿ ತಿಳಿಸಿದ್ದಾರೆ.
ನವದೆಹಲಿ, ಮಾರ್ಚ್ 20: ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ (startup ecosystem) ಪ್ರಬಲವಾಗಿ ಬೆಳೆಯಲು ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಲ್ಲಿಯ ಭಾರತ್ ಮಂಟಪಂನಲ್ಲಿ ಮೊನ್ನೆಯಿಂದ (ಮಾ. 18) ನಡೆಯುತ್ತಿರುವ ಸ್ಟಾರ್ಟಪ್ ಮಹಾಕುಂಭ (startup mahakumbh) ಎಂಬ ಸ್ಟಾರ್ಟಪ್ ಮೇಳದಲ್ಲಿ ಪ್ರಧಾನಿಗಳು (PM Narendra Modi) ಮಾತನಾಡುತ್ತಿದ್ದರು. ‘ಭಾರತದಲ್ಲಿ ಸ್ಟಾರ್ಟಪ್ ಪರಿಸರ ಅದ್ವಿತೀಯ ವೇಗದಲ್ಲಿ ಬೆಳೆಯುತ್ತಿದೆ. ಯುವಕರು ಈ ಬೆಳವಣಿಗೆಯ ಹಿಂದಿನ ಮುಖ್ಯ ಶಕ್ತಿಯಾಗಿದ್ದಾರೆ. ಸ್ಟಾರ್ಟಪ್ಗಳ ಬೆಳವಣಿಗೆ ಮೆಟ್ರೋ ನಗರಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಅದೀಗ ಸಾಮಾಜಿಕ ಸಂಸ್ಕೃತಿಯಾಗಿದೆ’ ಎಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಯುವಕರ ಉದ್ಯಮಶೀಲತೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದ ಪ್ರಧಾನಿಗಳು, ಯುವಕರ ಮಾನಸಿಕತೆ ಈಗ ಬದಲಾಗಿದೆ. ಉದ್ಯೋಗಾಕಾಂಕ್ಷಿಗಳಾಗಿದ್ದ ಯುವಕರು ಈಗ ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಿದ್ದಾರೆ ಎಂದಿದ್ದಾರೆ.
ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ
ಭಾರತ ಅಭಿವೃದ್ಧಿಶೀಲ ದೇಶವಾಗಲು ರೂಪುರೇಖೆ ಸಿದ್ಧಪಡಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 2047ರಷ್ಟರಲ್ಲಿ ಭಾರತ ಮುಂದುವರಿದ ದೇಶವಾಗಬೇಕು ಎನ್ನುವ ಗುರಿಯನ್ನು ಸರ್ಕಾರ ಇಟ್ಟಿದೆ. ಈ ವಿಷಯವನ್ನು ಸ್ಟಾರ್ಟಪ್ ಮಹಾಕುಂಭದಲ್ಲಿ ಪ್ರಧಾನಿಗಳು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಇಪಿಎಫ್ ಖಾತೆಯನ್ನು ಎಷ್ಟು ಬಾರಿ ಮಾರ್ಪಡಿಸಬಹುದು? ಯಾವ್ಯಾವ ವಿವರ ಎಷ್ಟೆಷ್ಟು ಸಲ ಬದಲಿಸಲು ಸಾಧ್ಯ? ಇಲ್ಲಿದೆ ಮಾಹಿತಿ
ಮಹಿಳೆಯರ ಪಾತ್ರ ಗುರುತಿಸಿದ ಪ್ರಧಾನಿ
ಭಾರತದ ಸ್ಟಾರ್ಟಪ್ ಸಂಸ್ಕೃತಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವ ಸಂಗತಿಯನ್ನೂ ಪ್ರಧಾನಿ ಈ ಸಂದರ್ಭದಲ್ಲಿ ಗುರುತಿಸಿದ್ದಾರೆ. ಭಾರತದ ಶೇ. 45ರಷ್ಟು ಸ್ಟಾರ್ಟಪ್ಗಳನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.
ಏನಿದು ಸ್ಟಾರ್ಟಪ್ ಮಹಾಕುಂಭ್?
ದೇಶದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಸ್ಟಾರ್ಟಪ್ಗಳಿಗೆ ಉತ್ತೇಜಿಸಲು ಸರ್ಕಾರವೇ ಸ್ಟಾರ್ಟಪ್ ಮಹಾಕುಂಭವನ್ನು ಆಯೋಜಿಸಿದೆ. ಮಾರ್ಚ್ 18ರಂದು ಆರಂಭವಾದ ಈ ಸ್ಟಾರ್ಟಪ್ ಮೇಳ ಇವತ್ತು ಮುಗಿಯುತ್ತದೆ. ಸರ್ಕಾರದ ಜೊತೆಗೆ ಪ್ರಮುಖ ಉದ್ಯಮ ಸಂಘಟನೆಗಳು ಈ ಕಾರ್ಯಕ್ರಮದ ಆಯೋಜನೆಯಲ್ಲಿ ಕೈಜೋಡಿಸಿವೆ.
ಇದನ್ನೂ ಓದಿ: ಹಣ ಮಾಡುವ ಆಸೆಯಿಂದ ಉದ್ದಿಮೆ ಸ್ಥಾಪಿಸಿದರೆ ಸೋಲುತ್ತೀರಿ: ಜೊಮಾಟೊ ಸಿಇಒ ದೀಪಿಂದರ್ ಗೋಯಲ್
ಎರಡು ಸಾವಿರ ಸ್ಟಾರ್ಟಪ್ಗಳು, ನೂರಕ್ಕೂ ಹೆಚ್ಚು ಯೂನಿಕಾರ್ನ್ಗಳು, ಒಂದು ಸಾವಿರಕ್ಕೂ ಹೆಚ್ಚು ಹೂಡಿಕೆದಾರರು, ಮುನ್ನೂರಕ್ಕೂ ಹೆಚ್ಚು ಉತ್ತೇಜಕರು, ಮೂರು ಸಾವಿರಕ್ಕೂ ಹೆಚ್ಚು ಕಾನ್ಫರೆನ್ಸ್, ಹತ್ತಕ್ಕೂ ಹೆಚ್ಚು ದೇಶಗಳ ನಿಯೋಗಗಳು, ಮೂರು ಸಾವಿರ ಭವಿಷ್ಯದ ಉದ್ದಿಮೆದಾರರು, ಐವತ್ತು ಸಾವಿರಕ್ಕೂ ಹೆಚ್ಚು ಬಿಸಿನೆಸ್ ವಿಸಿಟರ್ಗಳು ಈ ಸ್ಟಾರ್ಟಪ್ ಮಹಾಕುಂಭದಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಮಾಹಿತಿ ನೀಡಲಾಗಿದೆ.
ಮೂರು ದಿನಗಳ ಕಾಲ ಈ ಮೇಳದಲ್ಲಿ ಬಿಸಿನೆಸ್ಗೆ ಸಂಬಂಧಿಸಿ ಸಾಕಷ್ಟು ಚಿಂತನ ಮಂಥನ, ವಿಚಾರ ವಿನಿಮಯಗಳು, ಚರ್ಚಾಗೋಷ್ಠಿಗಳು ನಡೆದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ