ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ

US invites ISRO to join NASA in its Moon Base project: ಅಮೆರಿಕದ ನಾಸಾ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ತನ್ನ ಮಹತ್ವಾಕಾಂಕ್ಷೆಯ 'ಮೂನ್ ಬೇಸ್' (ಚಂದ್ರನಲ್ಲಿ ಮಾನವ ನೆಲೆ) ಯೋಜನೆಗೆ ಸೇರ್ಪಡೆಯಾಗಲು ಅಧಿಕೃತ ಆಹ್ವಾನ ನೀಡಿದೆ. ಬೆಂಗಳೂರಿನ ಇಸ್ರೋ ಕಚೇರಿಯಲ್ಲಿ ನಡೆದ ಭಾರತ ಅಮೆರಿಕ ಜಂಟಿ ಕಾರ್ಯಪಡೆ ಸಭೆಯಲ್ಲಿ ನಾಸಾದಿಂದ ಈ ಆಹ್ವಾನ ಬಂದಿದೆ.

ಚಂದ್ರನಲ್ಲಿ ಮಾನವನ ವಸಾಹತು; ಅಮೆರಿಕದ ಮೂನ್ ಬೇಸ್ ಯೋಜನೆಗೆ ನಾಸಾ ಜೊತೆ ಕೈಜೋಡಿಸಲು ಇಸ್ರೋಗೆ ಆಹ್ವಾನ
ಚಂದ್ರ
Image Credit source: PTI

Updated on: Aug 12, 2026 | 2:59 PM

ಬೆಂಗಳೂರು, ಆಗಸ್ಟ್ 12: ಚಂದ್ರನ ಮೇಲೆ ಮಾನವನ ಶಾಶ್ವತ ನೆಲೆಯನ್ನು ನಿರ್ಮಿಸುವ ಹಾಗೂ ಭವಿಷ್ಯದ ಮಂಗಳ ಗ್ರಹದ (Mars) ಸಂಶೋಧನೆಗಳಿಗೆ ಅಡಿಪಾಯ ಹಾಕುವ ನಾಸಾದ ಬೃಹತ್ ಯೋಜನೆಗೆ ಇಸ್ರೋವನ್ನು ಜೊತೆಗೂಡಿಸಿಕೊಳ್ಳಲು ಅಮೆರಿಕ ಮುಂದಾಗಿದೆ. ಇದು ಭಾರತದ ಪಾಲಿಗೆ ಬಹಳ ಮಹತ್ವದ ಸಂಗತಿ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಸಾಧಿಸುತ್ತಿರುವ ಅಭಿವೃದ್ಧಿಗೆ ಸಿಕ್ಕಿರುವ ಪ್ರಮುಖ ಜಾಗತಿಕ ಮನ್ನಣೆ ಇದೆನಿಸಿದೆ. ಬೆಂಗಳೂರಿನಲ್ಲಿ ನಡೆದ 9ನೇ ‘ಭಾರತ-ಯುಎಸ್ ನಾಗರಿಕ ಬಾಹ್ಯಾಕಾಶ ಜಂಟಿ ಕಾರ್ಯಪಡೆ’ (India-US CSJWG) ಸಭೆಯಲ್ಲಿ ನಾಸಾ ಈ ಆಹ್ವಾನವನ್ನು ನೀಡಿದೆ.

ಇಸ್ರೋ ಪ್ರಧಾನ ಕಚೇರಿಯಲ್ಲಿ ನಿನ್ನೆ ನಡೆದ ಈ ಸಭೆಯಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಹಾಗೂ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೋ ಗೋರ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಆರ್ಟೆಮಿಸ್ ಒಪ್ಪಂದ ವಿಸ್ತರಣೆ

ಈ ಆಹ್ವಾನವು ಭಾರತ ಮತ್ತು ಅಮೆರಿಕ ನಡುವಿನ ‘ಆರ್ಟೆಮಿಸ್ ಒಪ್ಪಂದ’ದ (Artemis Accords) ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಬಾಹ್ಯಾಕಾಶ ಸಂಶೋಧನೆಗೆ ಸಂಬಂಧಿಸಿದ ವೈಜ್ಞಾನಿಕ ದತ್ತಾಂಶಗಳನ್ನು (Scientific Data Sharing) ಪರಸ್ಪರ ಮುಕ್ತವಾಗಿ ಹಂಚಿಕೊಳ್ಳಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ಇದನ್ನೂ ಓದಿ: ಹಿಮಾಚಲದಲ್ಲಿ ಪೆಟ್ರೋಲ್, ಡೀಸಲ್ ಮೇಲೆ ವಿಧವೆ ಅನಾಥರ ಕಲ್ಯಾಣ ಸೆಸ್; ವ್ಯಾಟ್, ಸೆಸ್​ಗಳಿಂದಾಗಿ ಇಂಧನ ದುಬಾರಿ

ಚಂದ್ರನ ದಕ್ಷಿಣ ಧ್ರುವದಲ್ಲಿ ‘ಮೂನ್ ಬೇಸ್’; ಯಾಕೆ?

ನಾಸಾದ ‘ಮೂನ್ ಬೇಸ್’ ಯೋಜನೆಯು ಚಂದ್ರನ ದಕ್ಷಿಣ ಧ್ರುವದ ಬಳಿ (Lunar South Pole) ಮಾನವ ಕುಲದ ಮೊದಲ ಖಾಯಂ ನೆಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಚಂದ್ರನ ಮೇಲೆ ಗಗನಯಾತ್ರಿಗಳು ವಾಸಿಸಲು, ಸಂಶೋಧನೆ ನಡೆಸಲು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇದು ವೇದಿಕೆಯಾಗಲಿದೆ.

ಚಂದ್ರನ ದಕ್ಷಿಣ ಧ್ರುವ ಭಾಗವು ಸದಾ ನೆರಳಲ್ಲೇ ಇರುವ ಜಾಗ. ಇಲ್ಲಿ ವಿಪರೀತ ತಣ್ಣನೆಯ ಜಾಗ. ಇಲ್ಲಿ ನೀರಿನ ಮಂಜುಗಡ್ಡೆ ಇರುವ ಸಾಧ್ಯತೆ ದಟ್ಟವಾಗಿದೆ. ಮಾನವನ ನೆಲೆ ನಿರ್ಮಿಸಿ, ವಿವಿಧ ಪ್ರಯೋಗಗಳನ್ನು ಮಾಡಲು ಈ ಜಾಗ ಹೇಳಿ ಮಾಡಿಸಿದ್ದಾಗಿದೆ ಎಂಬುದು ಹೆಚ್ಚಿನ ವಿಜ್ಞಾನಿಗಳ ಅನಿಸಿಕೆ.

ಭಾರತವನ್ನು ಈ ಯೋಜನೆಗೆ ಆಹ್ವಾನಿಸಿದ್ದು ಯಾಕೆ?

ಅಮೆರಿಕದ ಈ ಮೂನ್ ಬೇಸ್ ಯೋಜನೆಯಲ್ಲಿ ಸುಮಾರು 70 ದೇಶಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ತೊಡಗಿಕೊಂಡಿವೆ. ಆದರೆ, ಭಾರತ ಸ್ವತಂತ್ರವಾಗಿ ಬಾಹ್ಯಾಕಾಶ ಪರಿಶೋಧನೆಯಲ್ಲಿರುವ ದೇಶವಾಗಿದೆ. ಸ್ಪೇಸ್ ತಂತ್ರಜ್ಞಾನದಲ್ಲಿ ಸ್ವತಂತ್ರವಾಗಿ ಪರಿಣತಿ ಪಡೆದಿದೆ. ಚಂದ್ರನ ನೆಲಕ್ಕೆ ಈಗಾಗಲೇ ನೌಕೆಯನ್ನು ಕಳುಹಿಸಿದೆ. ಮನುಷ್ಯರನ್ನು ಕಳುಹಿಸುವ ಪ್ಲಾನ್ ಕೂಡ ಹಾಕಿದೆ. ಭಾರತೀಯ ವಿಜ್ಞಾನಿಗಳ ಬಾಹ್ಯಾಕಾಶ ಜ್ಞಾನವು ಮತ್ತು ತಂತ್ರಜ್ಞಾನವು ನಾಸಾದ ಮೂನ್ ಬೇಸ್ ಯೋಜನೆಗೆ ಅನುಕೂಲವಾಗುವಂತೂ ಹೌದು. ಕೆಲವೇ ದೇಶಗಳಿಗೆ ಮಾತ್ರ ಈ ಪರಿಣಿತಿ ಇರುವುದು.

ಇದನ್ನೂ ಓದಿ: ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?

ಚೀನಾದಿಂದ ಪರ್ಯಾಯ ಗುಂಪು

ಇನ್ನೊಂದೆಡೆ, ಅಮೆರಿಕದ ಮೂನ್ ಬೇಸ್​ಗೆ ಪರ್ಯಾಯವಾಗಿ ಚೀನಾ ಕೂಡ ಚಂದ್ರ ಯೋಜನೆಗಳನ್ನು ಹಮ್ಮಿಕೊಂಡಿದೆ. ಚೀನಾಗೆ ರಷ್ಯಾ ಜೊತೆಯಾಗಿದೆ. ಎರಡನೇ ವಿಶ್ವ ಮಹಾಯುದ್ಧ ಬಳಿಕ ಅಮೆರಿಕ ಮತ್ತು ಸೋಷಿಯತ್ ರಷ್ಯಾ ನಡುವೆ ಇದ್ದಂತಹ ಶೀತಲ ಸಮರ ಈಗ ಅಮೆರಿಕ ಮತ್ತು ಚೀನಾ ಮಧ್ಯೆ ಶುರುವಾದಂತಿದೆ. ಈ ಸಮರವು ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರಗಳಿಗೆ ಎಡೆ ಮಾಡಿಕೊಡಲೂಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us