ಟಾಟಾ ಸನ್ಸ್ ಛೇರ್ಮನ್ ಎನ್ ಚಂದ್ರಶೇಖರನ್ ರಾಜೀನಾಮೆ; ಅವರು ಕೆಳಗಿಳಿಯಲು ಏನು ಕಾರಣ?
Tata Sons Chairman N Chandrasekaran resigns: ಟಾಟಾ ಸನ್ಸ್ ಛೇರ್ಮನ್ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ನೀಡಿದ್ದಾರೆ. 2027ರ ಫೆಬ್ರುವರಿಯವರೆಗೂ ಅವರ ಅಧಿಕಾರಾವಧಿ ಇದ್ದು ನಂತರ ನಿರ್ಗಮಿಸಲಿದ್ದಾರೆ. ಟಾಟಾ ಸನ್ಸ್ ಆಡಳಿತ ಮಂಡಳಿಯು ಅವರ ಅಧಿಕಾರಾವಧಿಯನ್ನು 5 ವರ್ಷ ವಿಸ್ತರಿಸಲು ಒಪ್ಪಿತಾದರೂ ಒಬ್ಬರೇ ಒಬ್ಬ ಮಂಡಳಿ ಸದಸ್ಯ ವಿರೋಧಿಸಿದ್ದರು. ಇದು ಅವರ ರಾಜೀನಾಮಗೆ ಕಾರಣವಾಗಿದೆ.

ನವದೆಹಲಿ, ಆಗಸ್ಟ್ 12: ಟಾಟಾ ಸಮೂಹದ ಪ್ರಮುಖ ಹೋಲ್ಡಿಂಗ್ ಕಂಪನಿಯಾದ ಟಾಟಾ ಸನ್ಸ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್ (N Chandrasekaran) ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ತಮ್ಮ ಪ್ರಸ್ತುತ ಅವಧಿ ಮುಗಿಯುವ ಫೆಬ್ರವರಿ 2027 ರವರೆಗೆ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ನಾಲ್ಕು ದಶಕಗಳಿಂದ ಟಾಟಾ ಗ್ರೂಪ್ನಲ್ಲಿ ಇರುವ, ಮತ್ತು ಕಳೆದ 9 ವರ್ಷದಿಂದ ಟಾಟಾ ಸನ್ಸ್ ಛೇರ್ಮನ್ ಆಗಿರುವ ಅವರು ಹಲವು ದಾಖಲೆ, ಮೈಲಿಗಲ್ಲು, ಗೌರವಗಳನ್ನು ಗಿಟ್ಟಿಸಿದ್ದಾರೆ. ಟಾಟಾ ಮನೆತನಕ್ಕೆ ಸೇರದ ವ್ಯಕ್ತಿಯೊಬ್ಬರು ಟಾಟಾ ಸನ್ಸ್ (Tata Sons) ಛೇರ್ಮನ್ ಆಗಿದ್ದು ಅವರೇ ಮೊದಲು. ಟಾಟಾ ಗ್ರೂಪ್ನಲ್ಲಿ ಒಂದು ವಿಶೇಷ ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ.
ಎನ್ ಚಂದ್ರಶೇಖರನ್ ರಾಜೀನಾಮೆಗೆ ಕಾರಣವೇನು?
ಟಾಟಾ ಸನ್ಸ್ ಮತ್ತು ಟಾಟಾ ಟ್ರಸ್ಟ್ಸ್ ನಡುವಿನ ಆಡಳಿತಾತ್ಮಕ ಭಿನ್ನಾಭಿಪ್ರಾಯಗಳು ಈ ನಿರ್ಧಾರಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಟಾಟಾ ಟ್ರಸ್ಟ್ಸ್ ಅಧ್ಯಕ್ಷರಾದ ನೋಯೆಲ್ ಟಾಟಾ ಅವರೊಂದಿಗಿನ ಕೆಲ ಭಿನ್ನಾಭಿಪ್ರಾಯಗಳು ಚಂದ್ರಶೇಖರನ್ ಅವರನ್ನು ರಾಜೀನಾಮೆ ನಿರ್ಧಾರಕ್ಕೆ ನೂಕಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಕೆಲಸ ಬಿಟ್ಟ ಆರು ಮಂದಿಯ ಹುಚ್ಚುತನದಲ್ಲಿ ಆರಂಭವಾಗಿತ್ತು ಎಚ್ಸಿಎಲ್; ಕಾರು ಮಾರಿ ಕಟ್ಟಿದ ಕಂಪನಿಯ ಕಥೆ ಇದು…
ವರದಿಯ ಪ್ರಕಾರ, ಕಳೆದ ಫೆಬ್ರವರಿಯಲ್ಲೇ ಚಂದ್ರಶೇಖರನ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ಟಾಟಾ ಸನ್ಸ್ ಮುಂದೂಡಿತ್ತು. ಚಂದ್ರಶೇಖರನ್ ಅವರನ್ನು ಮುಂದುವರಿಸಲು ನೋಯೆಲ್ ಟಾಟಾ ಕೆಲ ಆಕ್ಷೇಪಣೆಗಳನ್ನು ಹೊಂದಿದ್ದರು. ಕೆಲ ಷರತ್ತುಗಳನ್ನೂ ಮುಂದಿಟ್ಟಿದ್ದರು. ಟಾಟಾ ಸನ್ಸ್ ಕಂಪನಿಯನ್ನು ಪಬ್ಲಿಕ್ ಲಿಸ್ಟೆಡ್ ಕಂಪನಿಯಾಗಿ ಮಾಡಬಾರದು ಎಂಬುದು ಒಂದು ಷರತ್ತು. ಇದಕ್ಕೆ ಸಮ್ಮತಿಸಲು ಚಂದ್ರಶೇಖರನ್ ಸಿದ್ಧರಿರಲಿಲ್ಲ. ಹೀಗಾಗಿ, ಅವರನ್ನು ಟಾಟಾ ಸನ್ಸ್ ಛೇರ್ಮನ್ ಆಗಿ ಮುಂದುವರಿಸಲು ನೋಯಲ್ ಟಾಟಾ ಒಪ್ಪಿರಲಿಲ್ಲ.
ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್ಸ್ನ ಛೇರ್ಮನ್ ಆಗಿದ್ದಾರೆ. ಟಾಟಾ ಗ್ರೂಪ್ ಅಡಿಯಲ್ಲಿರುವ ಮೂವತ್ತಕ್ಕೂ ಹೆಚ್ಚು ಕಂಪನಿಗಳನ್ನು ಟಾಟಾ ಸನ್ಸ್ ನಿಯಂತ್ರಿಸುತ್ತದೆ. ಈ ಟಾಟಾ ಸನ್ಸ್ನಲ್ಲಿ ಶೇ. 66 ಪಾಲು ಹೊಂದಿರುವುದು ಟಾಟಾ ಟ್ರಸ್ಟ್ಸ್. ಹೀಗಾಗಿ, ನೋಯಲ್ ಟಾಟಾ ಅವರು ಟಾಟಾ ಸನ್ಸ್‌ನ ಮ್ಯಾನೇಜ್ಮೆಂಟ್ ವಿಚಾರದಲ್ಲಿ ಪ್ರಮುಖ ಪಾತ್ರಧಾರಿಯಾಗಿರುತ್ತಾರೆ.
ಟಾಟಾ ಗ್ರೂಪ್ನಲ್ಲಿ ಎನ್. ಚಂದ್ರಶೇಖರನ್ ಅವರ ಸುದೀರ್ಘ ಪಯಣ
- 1987: ಟಾಟಾ ಸಮೂಹದೊಂದಿಗೆ ವೃತ್ತಿ ಜೀವನ ಆರಂಭ.
- 2009: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನ ಸಿಇಒ ಆಗಿ ನೇಮಕ.
- 2017: ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಟಿಸಿಎಸ್ (TCS), ಟಾಟಾ ಮೋಟಾರ್ಸ್ ಮತ್ತು ಏರ್ ಇಂಡಿಯಾ ಸೇರಿದಂತೆ ಸಮೂಹದ 30 ಕ್ಕೂ ಹೆಚ್ಚು ಕಂಪನಿಗಳು ಟಾಟಾ ಸನ್ಸ್ ನಿಯಂತ್ರಣದಲ್ಲಿವೆ. ಈಗ ಹೊಸ ಹೊಸ ಯೋಜನೆಗಳನ್ನು ಟಾಟಾ ಗ್ರೂಪ್ ಕೈಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕಂಪನಿಗೆ ನಾಯಕತ್ವ ಬಹಳ ಅಗತ್ಯ ಇದೆ. ಸಂಸ್ಥೆಗೆ ಹೊಸ ಛೇರ್ಮನ್ ಅನ್ನು ಬೇಗ ನೇಮಕ ಮಾಡಿ ಎಂದು ಚಂದ್ರಶೇಖರನ್ ಮನವಿ ಮಾಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




