ಎಚ್ಎಎಲ್ ಮತ್ತು ಎಲ್ ಅಂಡ್ ಟಿ ನಿರ್ಮಿತ ಪಿಎಸ್ಎಲ್ವಿ ರಾಕೆಟ್ ಮುಂದಿನ ವರ್ಷ ಉಡಾವಣೆ: ಇಸ್ರೋ ಛೇರ್ಮನ್ ನಾರಾಯಣನ್
ಇಸ್ರೋಯೇತರ ಸಂಸ್ಥೆಗಳು ಮೊದಲ ಬಾರಿ ನಿರ್ಮಿಸಿರುವ ಪಿಎಸ್ಎಲ್ವಿ ರಾಕೆಟ್ ಅನ್ನು 2027ರ ಮೊದಲ ಕ್ವಾರ್ಟರ್ನಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ. ಇಸ್ರೋ ಛೇರ್ಮನ್ ಡಾ| ವಿ ನಾರಾಯಣನ್ ಈ ಮಾಹಿತಿ ನೀಡಿದ್ದಾರೆ. ಮಾನವನನ್ನು ಗಗನಕ್ಕೆ ಕಳುಹಿಸುವ ಗಗನಯಾನ್-1 ಯೋಜನೆಯ ಕೆಲಸಗಳು ಸಾಗುತ್ತಿವೆ ಎಂದೂ ಈ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷರು ತಿಳಿಸಿದ್ದಾರೆ.

ನವದೆಹಲಿ, ನವೆಂಬರ್ 24: ಎಚ್ಎಎಲ್ ಮತ್ತು ಎಲ್ ಅಂಡ್ ಟಿ ಜಂಟಿಯಾಗಿ ನಿರ್ಮಿಸಿರುವ ಪಿಎಸ್ಎಲ್ವಿ ರಾಕೆಟ್ ಅನ್ನು 2027ರ ಮೊದಲ ಕ್ವಾರ್ಟರ್ನಲ್ಲಿ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಛೇರ್ಮನ್ ಡಾ| ವಿ. ನಾರಾಯಣನ್ ತಿಳಿಸಿದ್ದಾರೆ. ಇಸ್ರೋ ಹೊರತಾದ ಸಂಸ್ಥೆಯೊಂದು ನಿರ್ಮಿಸಿರುವ ಮೊದಲ ಪಿಎಸ್ಎಲ್ವಿ ರಾಕೆಟ್ ಅದಾಗಿದೆ. ಹೀಗಾಗಿ, ಈ ರಾಕೆಟ್ ಉಡಾವಣೆಯು ಎಲ್ಲರ ಗಮನ ಸೆಳೆಯುತ್ತಿದೆ.
ಭಾರತದಲ್ಲಿ ಸೆಟಿಲೈಟ್ ಉಡಾವಣೆಗೆ ಬಳಸುವ ಪಿಎಸ್ಎಲ್ವಿ, ಜಿಎಸ್ಎಲ್ವಿ ರಾಕೆಟ್ಗಳೆಲ್ಲವನ್ನೂ ಇಸ್ರೋ ಸಂಸ್ಥೆಯೇ ನಿರ್ಮಿಸುತ್ತಿತ್ತು. ಈ ನಿರ್ಮಾಣದಲ್ಲಿ ವಿವಿಧ ಉದ್ಯಮಗಳು ಬಿಡಿಭಾಗಗಳನ್ನು ಪೂರೈಸುತ್ತಿದ್ದವು. ಈಗ ಪಿಎಸ್ಎಲ್ವಿ ರಾಕೆಟ್ ತಂತ್ರಜ್ಞಾನವನ್ನು ಉದ್ಯಮಗಳಿಗೆ ನೀಡಲಾಗಿದೆ.
ಎಚ್ಎಎಲ್ ಮತ್ತು ಎಲ್ ಅಂಡ್ ಟಿ ಕಂಪನಿಗಳಿರುವ ಕನ್ಸಾರ್ಟಿಯಂಗೆ 5 ಪಿಎಸ್ಎಲ್ವಿ ರಾಕೆಟ್ ನಿರ್ಮಿಸುವ ಗುತ್ತಿಗೆ ನೀಡಲಾಗಿದೆ. ಇಸ್ರೋದ ಕಮರ್ಷಿಯಲ್ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು 860 ಕೋಟಿ ರೂಗೆ ಈ ಗುತ್ತಿಗೆ ಕೊಟ್ಟಿದೆ. ಈ ಕನ್ಸಾರ್ಟಿಯಂನಿಂದ ಮೊದಲ ಪಿಎಸ್ಎಲ್ವಿ ರಾಕೆಟ್ ಸಿದ್ಧವಾಗುತ್ತಿದೆ. ಇಸ್ರೋ ಛೇರ್ಮನ್ ಅವರ ಪ್ರಕಾರ, ಈ ರಾಕೆಟ್ನ ಉಡಾವಣೆಯನ್ನು ಮುಂದಿನ ವರ್ಷದ ಮೊದಲ ಕ್ವಾರ್ಟರ್ನಲ್ಲಿ ನಿರೀಕ್ಷಿಸಬಹುದು.
ಇದನ್ನೂ ಓದಿ: ಜೆನ್ಸೆನ್ ಹುವಾಂಗ್ ಮತ್ತೆ ಸಿಇಒ ಸ್ಥಾನಕ್ಕೆ ಮರಳಿದ್ದು, ವಿಶ್ವ ಮಾರುಕಟ್ಟೆ ಇತಿಹಾಸದಲ್ಲೇ ಮಹತ್ವದ ನಿರ್ಧಾರ: ಉದಯ್ ಕೋಟಕ್
ಪಿಎಸ್ಎಲ್ವಿ ರಾಕೆಟ್ ವಿಶ್ವಾಸಾರ್ಹ…
ಪಿಎಸ್ಎಲ್ವಿ ರಾಕೆಟ್ ಇಸ್ರೋದ ಮಹತ್ವದ ರಾಕೆಟ್ ಎನಿಸಿದೆ. ಇಸ್ರೋ 1993ರಲ್ಲಿ ಮೊದಲ ಪಿಎಸ್ಎಲ್ವಿ ರಾಕೆಟ್ ನಿರ್ಮಿಸಿತು. ಇದರ ತೂಕ 320 ಟನ್. ಇದು 1,750 ಕಿಲೋ ಪೇಲೋಡ್ ಅಥವಾ ಸರಕುಗಳನ್ನು ಗಗನಕ್ಕೆ ಹೊತ್ತೊಯ್ಯಬಲ್ಲುದು. 600 ಕಿಮೀ ಎತ್ತರದ ಭೂ ಕಕ್ಷೆಯವರೆಗೂ ಇದು ಹೋಗಿ ಪೇಲೋಡ್ ಅನ್ನು ಸೇರಿಸಬಲ್ಲುದು.
ಮಾನವನನ್ನು ಗಗನಕ್ಕೆ ಕಳುಹಿಸುವ ಭಾರತದ ಪ್ರಯತ್ನ ಎಲ್ಲಿಗೆ ಬಂತು?
ಮಾನವನನ್ನು ಗಗನಕ್ಕೆ ಕಳುಹಿಸುವ ಗಗನಯಾನ ಯೋಜನೆ ಬಗ್ಗೆ ಇಸ್ರೋ ಅಧ್ಯಕ್ಷರು ಅಪ್ಡೇಟ್ ನೀಡಿದ್ದಾರೆ. ಆರ್ಬಿಟಲ್ ಮಾಡಲ್ ನಿರ್ಮಾಣವು ಅಂತಿಮ ಹಂತದಲ್ಲಿದೆ ಎಂದು ಮಾಹಿತಿ ನೀಡಿರುವ ಅವರು, ಈ ಮಿಷನ್ ಪೂರ್ಣಗೊಳಿಸಲು ಬಹಳಷ್ಟು ಕೆಲಸಗಳಾಗಬೇಕಿರುವುದನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಟೋಬರ್‌ನಲ್ಲಿ ಎಂಜಿನಿಯರಿಂಗ್ ರಫ್ತು ಶೇ.36 ಏರಿಕೆ: 12.74 ಶತಕೋಟಿ ಡಾಲರ್ ತಲುಪಿದ ರಫ್ತು ಮೌಲ್ಯ
ಮನುಷ್ಯನನ್ನು ಗಗನಕ್ಕೆ ಕಳುಹಿಸಿ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬರಬೇಕಾದ ಇಕೋಸಿಸ್ಟಂ ಸ್ವಲ್ಪವೂ ಅಸ್ತಿತ್ವದಲ್ಲಿಲ್ಲ. ಎಲ್ಲವನ್ನೂ ಪೂರ್ಣವಾಗಿ ನಿರ್ಮಿಸಬೇಕು. ಆ ಕೆಲಸ ಆಗುತ್ತಿದೆ. ಎಐ ಶಕ್ತವಾದ ಹ್ಯೂಮನಾಯ್ಡ್ ರೋಬೋವನ್ನು ಗಗನಯಾನದಲ್ಲಿ ಕಳುಹಿಸಲಾಗುತ್ತಿದೆ. ಆ ರೋಬೋವನ್ನೂ ಸಂಪೂರ್ಣವಾಗಿ ಇಲ್ಲಿಯೇ ನಿರ್ಮಿಸಲಾಗುತ್ತಿದೆ ಎಂದು ಡಾ. ವಿ. ನಾರಾಯಣನ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




