
ಬಹುತೇಕ ನಾವೆಲ್ಲರೂ ಶಾಲೆಗಳಲ್ಲಿ ಓದುವಾಗ ಇಂಗ್ಲೀಷ್ ಸಬ್ಜೆಕ್ಟ್ನಲ್ಲಿ ‘ಒನ್ ಎ ಪೆನ್ನಿ, ಟು ಎ ಪೆನ್ನಿ ಹಾಟ್ ಕ್ರಾಸ್ ಬನ್ಸ್’ (One a penny, two a penny, hot cross buns) ಎನ್ನುವ ಪದ್ಯ ಓದಿರುತ್ತೇವೆ. ಈ ಸಾಲಿನಲ್ಲಿ ಬರುವ ಬನ್ ಉಳಿದುಕೊಂಡಿದೆ. ಪೆನ್ನಿ ಕೈಬಿಟ್ಟು ಹೋಗುತ್ತಿದೆ. ಅಮೆರಿಕದ ಹಣಕಾಸು ವ್ಯವಸ್ಥೆಯಲ್ಲಿ 232 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಪೆನ್ನಿ ನಾಣ್ಯ (Penny) ಇದೇ ಕೊನೆಯ ತಯಾರಿಕೆ ಕಂಡಿದೆ. ಇದರ ಬಳಕೆ ಬಹುತೇಕ ಅಂತ್ಯಗೊಂಡಂತಾಗಿದೆ. ಎರಡೂಕಾಲು ಶತಮಾನದ ಇತಿಹಾಸ ಇರುವ ಪೆನ್ನಿ ಇನ್ಮುಂದೆ ಕಾಯಿನ್ ಕಲೆಕ್ಟರ್ಗಳ ಸರಕುಗಳಾಗಲಿವೆ.
1792ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ನಾಣ್ಯಗಳ ಮುದ್ರಣ ನಡೆಯಿತು. 1793ರಲ್ಲಿ ಮೊದಲ ಪೆನ್ನಿ ನಾಣ್ಯ ಮುದ್ರಣ ಕಂಡಿತು. 232 ವರ್ಷಗಳ ನಂತರ ಇದೀಗ ಫಿಲಡೆಲ್ಫಿಯಾದಲ್ಲಿರುವ ಯುಎಸ್ ಮಿಂಟ್ ಫ್ಯಾಕ್ಟರಿಯಲ್ಲಿ ಕೊನೆಯ ಪೆನ್ನಿ ಉತ್ಪಾದನೆ ಮಾಡಲಾಗಿದೆ. ಇದರೊಂದಿಗೆ, ಅಮೆರಿಕ ದೇಶವು ತನ್ನ ಪೆನ್ನಿ ನಾಣ್ಯದ ಇತಿಹಾಸಕ್ಕೆ ಅಧಿಕೃತವಾಗಿ ತೆರೆ ಎಳೆದಿದೆ.
ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ
ಒಂದು ಪೆನ್ನಿ ನಾಣ್ಯ ತಯಾರಿಸಲು 4 ಪೆನ್ನಿ ವೆಚ್ಚ ಆಗುತ್ತಿದೆ. ಜೊತೆಗೆ, ಅದರ ಬಳಕೆಯ ಅಗತ್ಯತೆಯೂ ಕೂಡ ಇಲ್ಲ. ಹೀಗಾಗಿ, ಪೆನ್ನಿ ಮುದ್ರಿಸುವ ಕೆಲಸವನ್ನು ನಿಲ್ಲಿಸಲು ಟ್ರಂಪ್ ಸರ್ಕಾರ ನಿರ್ಧರಿಸಿದೆ. ‘ನಾವು ತೆರಿಗೆಪಾವತಿದಾರರ 56 ಮಿಲಿಯನ್ ಡಾಲರ್ ಹಣವನ್ನು ಉಳಿಸುತ್ತಿದ್ದೇವೆ’ ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಬ್ರಾಂಡಾನ್ ಬೀಚ್ ಹೇಳಿದ್ದಾರೆ.
ಭಾರತದ ರುಪಾಯಿಗೆ 100 ಪೈಸೆ ಇರುವಂತೆ, ಅಮೆರಿಕದಲ್ಲಿ ಒಂದು ಡಾಲರ್ಗೆ 100 ಸೆಂಟ್ ಇರುತ್ತವೆ. ಇದಕ್ಕಾಗಿ ಅಲ್ಲಿ 4 ವಿವಿಧ ನಾಣ್ಯಗಳಿವೆ. ಪೆನ್ನಿ, ನಿಕಲ್, ಡೈಮ್ ಮತ್ತು ಕ್ವಾರ್ಟರ್ ನಾಣ್ಯಗಳಿವೆ. ಪೆನ್ನಿಯ ಮೌಲ್ಯ 1 ಸೆಂಟ್. ಅಂದರೆ 100 ಪೆನ್ನಿ ಸೇರಿಸಿದರೆ 1 ಡಾಲರ್. ನಮ್ಮಲ್ಲಿ 1 ಪೈಸೆಯಂತೆ.
ಇನ್ನು, ನಿಕಲ್ ಮೌಲ್ಯ 5 ಸೆಂಟ್. 20 ನಿಕಲ್ ನಾಣ್ಯ ಸೇರಿಸಿದರೆ 1 ಡಾಲರ್ ಆಗುತ್ತದೆ. ಡೈಮ್ ನಾಣ್ಯದ ಮೌಲ್ಯ 10 ಸೆಂಟ್. 10 ಡೈಮ್ ಸೇರಿಸಿದರೆ 1 ಡಾಲರ್ ಆಗುತ್ತದೆ. ಕ್ವಾರ್ಟರ್ ನಾಣ್ಯದ ಮೌಲ್ಯ 25 ಸೆಂಟ್. 4 ಕ್ವಾರ್ಟರ್ ನಾಣ್ಯ ಸೇರಿಸಿದರೆ 1 ಡಾಲರ್ ಆಗುತ್ತದೆ.
ಇಲ್ಲಿ ಪೆನ್ನಿ ನಾಣ್ಯಗಳು ತಾಮ್ರ ಬಣ್ಣದಿಂದ ಕೂಡಿರುತ್ತವೆ. ಉಳಿದ ಮೂರು ನಾಣ್ಯಗಳು ಸಿಲ್ವರ್ ಬಣ್ಣದ್ದಾಗಿರುತ್ತವೆ.
ಇದನ್ನೂ ಓದಿ: ಬ್ಯಾಂಕುಗಳ ಇಂಟರ್ನೆಟ್ ಡೊಮೈನ್ ಬದಲಾಗಿದೆ ಗಮನಿಸಿ… ಡಾಟ್ ಕಾಮ್ ಇರಲ್ಲ, ಕೋ ಡಾಟ್ ಇನ್ ಕೂಡ ಇರಲ್ಲ
ಅಮೆರಿಕದಲ್ಲಿ ಪೆನ್ನಿ ಮುದ್ರಣ ನಿಲ್ಲಿಸಲಾಯಿತಾದರೂ ಅವುಗಳ ಬಳಕೆ ಮುಂದುವರಿಯುತ್ತದೆ. ಅಂದರೆ, ಅವು ಚಲಾವಣೆಗೆ ಮಾನ್ಯವಾಗಿರುತ್ತವೆ. ಸದ್ಯ ಈ ದೇಶದಲ್ಲಿ 250 ಬಿಲಿಯನ್ ಪೆನ್ನಿಗಳು ಚಲಾವಣೆಯಲ್ಲಿವೆ. 250 ಬಿಲಿಯನ್ ಎಂದರೆ 25,000 ಕೋಟಿ ಪೆನ್ನಿಗಳು. ಇವುಗಳ ಮೌಲ್ಯ 250 ಕೋಟಿ ಡಾಲರ್ ಆಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ