ಬ್ಯಾಂಕುಗಳ ಇಂಟರ್ನೆಟ್ ಡೊಮೈನ್ ಬದಲಾಗಿದೆ ಗಮನಿಸಿ… ಡಾಟ್ ಕಾಮ್ ಇರಲ್ಲ, ಕೋ ಡಾಟ್ ಇನ್ ಕೂಡ ಇರಲ್ಲ
Know why banks in India change their website domain to bank.in: ಭಾರತದ ಬ್ಯಾಂಕುಗಳ ವೆಬ್ಸೈಟ್ಗಳ ಡೊಮೈನ್ ಅನ್ನು ಡಾಟ್ ಕಾಮ್, ಡಾಟ್ ಕೋ ಡಾಟ್ ಇನ್ನಿಂದ ಡಾಟ್ ಬ್ಯಾಂಕ್ ಡಾಟ್ ಇನ್ಗೆ ಬದಲಾಗಿದೆ. ಗ್ರಾಹಕರ ಸುರಕ್ಷತೆ ಮತ್ತು ವೆಬ್ಸೈಟ್ನ ಭದ್ರತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಅಕ್ಟೋಬರ್ 31ರೊಳಗೆ ಬ್ಯಾಂಕುಗಳು ಡೊಮೈನ್ ಬದಲಿಸಬೇಕು ಎಂದು ಆರ್ಬಿಐ ಸೂಚಿಸಿತ್ತು.

ನವದೆಹಲಿ, ನವೆಂಬರ್ 13: ಭಾರತದ ಪ್ರಮುಖ ಬ್ಯಾಂಕುಗಳ ಅಧಿಕೃತ ವೆಬ್ಸೈಟುಗಳ ಡೊಮೈನ್ ಬದಲಾಗಿದೆ. ಡಾಟ್ ಕಾಮ್ (.com) ಅಥವಾ ಡಾಟ್ ಕೋ ಡಾಟ್ ಇನ್ (.co.in) ಎಂದಿದ್ದ ಈ ಬ್ಯಾಂಕುಗಳ ಡೊಮೈನ್ ಈಗ ಡಾಟ್ ಬ್ಯಾಂಕ್ ಡಾಟ್ ಇನ್ (.bank.in) ಎಂದು ಬದಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನದ ಮೇರೆಗೆ ಪ್ರಮುಖ ಬ್ಯಾಂಕುಗಳು ತಮ್ಮ ವೆಬ್ಸೈಟ್ಗಳ ಡೊಮೈನ್ ಅನ್ನು ಬದಲಾಯಿಸಿಕೊಂಡಿವೆ. 2025ರ ಅಕ್ಟೋಬರ್ 31ರೊಳಗೆ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ಗಳ ಡೊಮೈನ್ ಅನ್ನು ಬ್ಯಾಂಕ್ ಡಾಟ್ ಇನ್ಗೆ ವರ್ಗಾಯಿಸುವಂತೆ ಎಲ್ಲಾ ಬ್ಯಾಂಕುಗಳಿಗೆ ಆರ್ಬಿಐ ನಿರ್ದೇಶನ ನೀಡಿತ್ತು. ಅದರಂತೆ, ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಪಿಎನ್ಬಿ ಮೊದಲಾದ ಹಲವು ಬ್ಯಾಂಕುಗಳ ವೆಬ್ಸೈಟ್ನ ಡೊಮೈನ್ ಬದಲಾಗಿದೆ.
ವಂಚಕರ ಜಾಲಕ್ಕೆ ಸಿಲುಕದಿರಲೆಂದು ಆರ್ಬಿಐನಿಂದ ಈ ಕ್ರಮ
ಡಾಟ್ ಕಾಮ್, ಡಾಟ್ ಕೋ ಡಾಟ್ ಇನ್ ಡೊಮೈನ್ಗಳು ಸಾರ್ವತ್ರಿಕವಾಗಿ ಲಭ್ಯ ಇರುವಂತಹ ಡೊಮೈನ್ಗಳಾಗಿವೆ. ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳ ಹೆಸರನ್ನು ಸ್ವಲ್ಪ ತಿರುಚಿ ವಂಚಕರು ನಕಲಿ ವೆಬ್ಸೈಟ್ ಸೃಷ್ಟಿಸುತ್ತಿದ್ದರು. ಉದಾಹರಣೆಗೆ, hdfcbank.com ಎಂದಿದ್ದನ್ನು hbfcbank.com ಎಂದು ಮಾಡಬಹುದಿತ್ತು. ನಕಲಿ ವೆಬ್ಸೈಟ್ ತೆರೆದರೆ ಥೇಟ್ ಅಸಲಿ ವೆಬ್ಸೈಟನ್ನೇ ಹೋಲುವಂತಿರುತ್ತದೆ. ಹೀಗೆ, ಅಮಾಯಕರನ್ನು ಸೆಳೆದು ಅವರಿಂದ ಹಣ ದೋಚುವ ಅವಕಾಶ ಇರುತ್ತದೆ. ಇಂಥದ್ದನ್ನು ತಪ್ಪಿಸಲು ಡಾಟ್ ಬ್ಯಾಂಕ್ ಡಾಟ್ ಇನ್ ಎನ್ನುವ ಡೊಮೈನ್ಗೆ ವಿಳಾಸ ವರ್ಗಾಯಿಸಲು ಆರ್ಬಿಐ ಸೂಚಿಸಿದೆ.
ಇದನ್ನೂ ಓದಿ: 12,000 ಕೋಟಿ ರೂ ಮನಿ ಲಾಂಡರಿಂಗ್ ಆರೋಪ; ಜೇಪೀ ಇನ್ಫ್ರಾಟೆಕ್ನ ಮನೋಜ್ ಗೌರ್ ಬಂಧನ
ಬ್ಯಾಂಕ್ ಡಾಟ್ ಇನ್ (.bank.in) ಡೊಮೈನ್ನಿಂದ ಏನು ಉಪಯೋಗ?
ಡಾಟ್ ಬ್ಯಾಂಕ್ ಡಾಟ್ ಇನ್ ಡೊಮೈನ್ ಅನ್ನು ಆರ್ಬಿಐನಿಂದ ಮಾನ್ಯ ಮಾಡಲ್ಪಟ್ಟ ಹಣಕಾಸು ಸಂಸ್ಥೆಗಳಿಗೆ ಮಾತ್ರ ನೀಡಲಾಗುತ್ತದೆ. ಯಾರೆಂದವರು ಈ ಡೊಮೈನ್ ಅನ್ನು ಪಡೆಯಲು ಆಗುವುದಿಲ್ಲ. ನೊಂದಾಯಿತ ಬ್ಯಾಂಕುಗಳು ಮಾತ್ರವೇ ಈ ಡೊಮೈನ್ ಪಡೆಯಲು ಅವಕಾಶ ಇರುತ್ತದೆ. ಇದರಿಂದ ಅಪರಾಧಿಗಳು ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ದುರುಪಯೋಗಿಸಿಕೊಳ್ಳುವುದು ಕಡಿಮೆಗೊಳ್ಳಬಹುದು.
ಬ್ಯಾಂಕುಗಳ ಹೆಸರಿನಲ್ಲಿ ನಕಲಿ ವೆಬ್ಸೈಟ್ಗಳನ್ನು ರಚಿಸುವುದು ಸುಲಭದ ಕೆಲಸವಾಗಿತ್ತು. ಮೇಲ್ನೋಟಕ್ಕೆ ಬೇಗ ಕಾಣದಷ್ಟು ಮಾತ್ರ ವ್ಯತ್ಯಾಸ ಇರುತ್ತದೆ. ಹೀಗಾಗಿ, ಬಹಳಷ್ಟು ಜನರು ಮೋಸ ಹೋಗುತ್ತಿದ್ದರು. ನಕಲಿ ವೆಬ್ಸೈಟ್ ಎಂದು ಅರಿಯದೆ ಜನರು ತಮ್ಮ ಯೂಸರ್ ನೇಮ್, ಪಾಸ್ವರ್ಡ್, ಪ್ಯಾನ್ ನಂಬರ್, ಆಧಾರ್ ನಂಬರ್, ಮೊಬೈಲ್ ನಂಬರ್ ಇತ್ಯಾದಿ ವಿವರನ್ನು ನೀಡಿದಾಗ, ಅವು ವಂಚಕರ ಕೈಗೆ ಸಿಕ್ಕು, ದುರ್ಬಳಕೆ ಆಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ
ಈಗ ಬ್ಯಾಂಕ್ನ ಪೋರ್ಟಲ್ನ ವಿಳಾಸದಲ್ಲಿ ಬ್ಯಾಂಕ್ ಡಾಟ್ ಇನ್ ಎನ್ನುವ ಡೊಮೈನ್ ಇದೆಯಾ ಎಂದು ಗಮನಿಸಿ, ಮುಂದಿನ ವಹಿವಾಟು ನಡೆಸಲು ಮುಂದಾಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




