ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ
Karnataka Bank's Rs 1,00,000 crore fat finger error: ಕರ್ಣಾಟಕ ಬ್ಯಾಂಕ್ ಎರಡು ವರ್ಷದ ಹಿಂದೆ ತಪ್ಪಾದ ಅಕೌಂಟ್ಗೆ ಒಂದು ಲಕ್ಷ ಕೋಟಿ ರೂ ಹಣವನ್ನು ವರ್ಗಾಯಿಸಿದ ಘಟನೆ ಬೆಳಕಿಗೆ ಬಂದಿದೆ. ನಿಷ್ಕ್ರಿಯ ಖಾತೆಗೆ ವರ್ಗಾವಣೆ ಆದ ಆ ಹಣವನ್ನು ರಿವರ್ಸ್ ಮಾಡಲು 3 ಗಂಟೆ ಬೇಕಾಯಿತು. ಈ ಪ್ರಮಾದವನ್ನು ಬ್ಯಾಂಕ್ನ ಆಡಳಿತ ಮಂಡಳಿ ಗಮನಕ್ಕೆ ತರಲು 6 ತಿಂಗಳಾಯಿತು. ಈ ಆಂತರಿಕ ವ್ಯವಸ್ಥೆಯ ದೌರ್ಬಲ್ಯವು ಆರ್ಬಿಐನ ದೃಷ್ಟಿ ನೆಡುವಂತೆ ಮಾಡಿದೆ.

ಬೆಂಗಳೂರು, ನವೆಂಬರ್ 13: ಇವತ್ತು ಬೆಳಗ್ಗೆಯಿಂದ ಕರ್ಣಾಟಕ ಬ್ಯಾಂಕ್ (Karnataka Bank) ಟ್ರೆಂಡಿಂಗ್ಗೆ ಬಂದಿದೆ. ಸಿಬ್ಬಂದಿಯ ಸಣ್ಣ ಅಚಾತುರ್ಯದಿಂದ ಸಂಭವಿಸಿದ ಒಂದು ತಪ್ಪು ಈಗ ಬ್ಯಾಂಕ್ನ ಕಾರ್ಯಾಚರಣೆ ನಿರ್ವಹಣಾ ವ್ಯವಸ್ಥೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಕರ್ಣಾಟಕ ಬ್ಯಾಂಕ್ ಸುಮಾರು 1,00,000 ಕೋಟಿ ರೂ ಹಣವನ್ನು ತಪ್ಪಾಗಿ ಬೇರೊಂದು ಅಕೌಂಟ್ಗೆ ವರ್ಗಾವಣೆ ಮಾಡಲಾಗಿತ್ತು. ಅಂದೇ ಅದನ್ನು ಹಿಂಪಡೆಯಲಾಯಿತು. ಈ ರೀತಿ ತಪ್ಪಾಗುವುದು ಸಹಜ. ಇದನ್ನು ಬ್ಯಾಂಕಿಂಗ್ ವಲಯದಲ್ಲಿ ಫ್ಯಾಟ್ ಫಿಂಗರ್ ಎರರ್ (Fat Finger Error) ಎನ್ನುತ್ತಾರೆ. ಕೈತಪ್ಪಿ ಆಗುವ ದೋಷ. ಆದರೆ, ಪ್ರಶ್ನೆ ಎದ್ದಿರುವುದು ಕರ್ಣಾಟಕ ಬ್ಯಾಂಕ್ನ ಸಿಬ್ಬಂದಿ ಈ ಅಚಾತುರ್ಯ ಘಟನೆಯನ್ನು ಸ್ಪಂದಿಸಿದ ವೇಗ ಮತ್ತು ರೀತಿ ಬಗ್ಗೆ. ಮನಿ ಕಂಟ್ರೋಲ್ ವೆಬ್ಸೈಟ್ ಈ ಎಕ್ಸ್ಕ್ಲೂಸಿವ್ ಸುದ್ದಿಯನ್ನು ಪ್ರಕಟಿಸಿದೆ. ಈ ಬಗ್ಗೆ ಬ್ಯಾಂಕ್ನಿಂದ ಅಧಿಕೃತ ಹೇಳಿಕೆ ಬಂದಿಲ್ಲ.
1,00,000 ಕೋಟಿ ರೂ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ…
2023ರ ಆಗಸ್ಟ್ 9ರಂದು ಸಂಜೆ 5:17ಕ್ಕೆ ಕರ್ನಾಟಕ ಬ್ಯಾಂಕ್ನ ಸಿಬ್ಬಂದಿ 1,00,000 ಕೋಟಿ ರೂ ಅನ್ನು ಎಸ್ಬಿ ಖಾತೆಗೆ ವರ್ಗಾವಣೆ ಮಾಡಿದ್ದರು. ಆ ತಪ್ಪು ಗೊತ್ತಾಗಿ ಅದನ್ನು ವಾಪಸ್ ಪಡೆಯುವಷ್ಟರಲ್ಲಿ ರಾತ್ರಿ 8:09 ಆಗಿ ಹೋಗಿತ್ತು. ಹತ್ತಿರಹತ್ತಿರ 3 ಗಂಟೆ ಕಾಲ ಅಷ್ಟು ದೊಡ್ಡ ಮೊತ್ತವು ತಪ್ಪಾದ ಖಾತೆಗೆ ಹೋಗಿಬಿಟ್ಟಿತ್ತು.
ಕರ್ಣಾಟಕ ಬ್ಯಾಂಕ್ನ ಅದೃಷ್ಟಕ್ಕೆ, ತಪ್ಪಾಗಿ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ. ಡಾರ್ಮಂಟ್ ಅಕೌಂಟ್ ಆಗಿದ್ದರಿಂದ ಸರಿಹೋಯಿತು. ಬ್ಯಾಂಕುಗಳಲ್ಲಿ ಈ ರೀತಿ ಅಚಾತುರ್ಯದಿಂದ ತಪ್ಪಾದ ಅಕೌಂಟ್ಗೆ ಹಣ ವರ್ಗಾವಣೆ ಆಗುವುದುಂಟು. ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸುವುದುಂಟು. ಇಲ್ಲಿ ಕರ್ಣಾಟಕ ಬ್ಯಾಂಕ್ ಈ ತಪ್ಪನ್ನು ಗ್ರಹಿಸಿ ಸರಿಪಡಿಸುವಷ್ಟರಲ್ಲಿ 3 ಗಂಟೆ ಆಗಿತ್ತು. ಒಂದು ವೇಳೆ ಸಕ್ರಿಯ ಖಾತೆಯಾಗಿದ್ದು, ಖಾತೆದಾರರು ಹಣವನ್ನು ಏನು ಬೇಕಾದರೂ ಮಾಡಿಕೊಳ್ಳಬಹುದಿತ್ತು.
ಇದನ್ನೂ ಓದಿ: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು
ಬ್ಯಾಂಕ್ ಗ್ರಾಹಕರ ಇಡೀ ಹಣವೇ ವರ್ಗಾವಣೆ ಆಗಿತ್ತು…
ಕರ್ಣಾಟಕ ಬ್ಯಾಂಕ್ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಗಳು ಒಟ್ಟು 1,04,807 ಕೋಟಿ ರೂ. ತಪ್ಪಾಗಿ ವರ್ಗಾವಣೆ ಆದ ಹಣವೂ ಹತ್ತಿರ ಹತ್ತಿರ ಇಷ್ಟೇ ಮೊತ್ತ. ಇಡೀ ಗ್ರಾಹಕರ ಹಣವೇ ತಪ್ಪಾದ ಅಕೌಂಟ್ಗೆ ವರ್ಗಾವಣೆ ಆಗಿತ್ತು ಎಂಬುದು ಸೋಜಿಗ. ಈ ಹಣ ಕಳೆದುಹೋಗಿದ್ದರೆ ಬ್ಯಾಂಕ್ ದಿವಾಳಿ ಏಳಬಹುದಿತ್ತು.
ಆರು ತಿಂಗಳ ಬಳಿಕ ಮಂಡಳಿ ಗಮನಕ್ಕೆ ಬಂದ ಅಚಾತುರ್ಯ…
ಕರ್ಣಾಟಕ ಬ್ಯಾಂಕ್ನಲ್ಲಿ ತಪ್ಪು ಸರಿಪಡಿಸಿಕೊಳ್ಳಲು ಆ ಮೂರು ಗಂಟೆ ವಿಳಂಬವಾಗಿದ್ದು ಒಂದೆಡೆ ಇದ್ದರೆ, ಇಡೀ ಘಟನೆಯನ್ನು ಬ್ಯಾಂಕ್ನ ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿಯ ಗಮನಕ್ಕೆ ತರಲು ಆರು ತಿಂಗಳು ಬೇಕಾಯಿತು. ಘಟನೆ ನಡೆದದ್ದ 2023ರ ಆಗಸ್ಟ್ 9ರಂದು. ಬ್ಯಾಂಕ್ನ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗವು ಈ ಘಟನೆ ಬಗ್ಗೆ ಕಮಿಟಿಯ ಗಮನಕ್ಕೆ ತಂದಿದ್ದು 2024ರ ಮಾರ್ಚ್ 4ರಂದು. ಅಂದರೆ ಆರು ತಿಂಗಳವರೆಗೂ ಬ್ಯಾಂಕ್ನ ಮ್ಯಾನೇಜ್ಮೆಂಟ್ಗೆ ಈ ಪ್ರಮಾದ ಗೊತ್ತೇ ಆಗಿರಲಿಲ್ಲ. ಇದು ವಾಸ್ತವವಾಗಿ ಆತಂಕಪಡುವ ಸಂಗತಿ.
ವಿಳಂಬ ಇಷ್ಟಕ್ಕೇ ಸೀಮಿತವಾಗಿಲ್ಲ. ಮಂಡಳಿಯು ಈ ಘಟನೆ ಬಗ್ಗೆ ವರದಿ ಸಲ್ಲಿಸಿ, ಪ್ರಮಾಣೀಕೃತ ಲೆಕ್ಕಪರಿಶೋಧಕರಿಂದ ಬ್ಯಾಂಕ್ನ ಐಟಿ ಸಿಸ್ಟಂಗಳನ್ನು ಆಡಿಟ್ ಮಾಡಿಸಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಮಾಡಿ ಆ ದೋಷವನ್ನು ಸರಿಪಡಿಸಲು ಮತ್ತಷ್ಟು ತಿಂಗಳುಗಳು ಗತಿಸಿದ್ದವು.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
ಬ್ಯಾಂಕ್ನ ಆಂತರಿಕ ವ್ಯವಸ್ಥೆ ಬಗ್ಗೆ ಆರ್ಬಿಐ ಕೂಡ ಆತಂಕಪಟ್ಟಿದೆ. ಒಂದು ವೇಳೆ ಅಷ್ಟು ಬೃಹತ್ ಹಣ ವರ್ಗಾವಣೆ ಆಗಿದ್ದು ಇನಾಪರೇಟಿವ್ ಅಕೌಂಟ್ಗೆ ಅಲ್ಲವಾಗಿದ್ದರೆ ಎಂಥ ಅನಾಹುತವಾಗುತ್ತಿತ್ತು ಎಂಬ ಪ್ರಶ್ನೆ ಇದೆ. ಕರ್ಣಾಟಕ ಬ್ಯಾಂಕ್ನ ಮ್ಯಾನೇಜ್ಮೆಂಟ್ ನಾಲ್ಕೈದು ಹಿರಿಯ ಅಧಿಕಾರಿಗಳು ಈ ಘಟನೆಗೆ ದೋಷಿಗಳೆಂದು ಗುರುತಿಸಿ, ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:33 pm, Thu, 13 November 25




