AI Content Regulations: ಎಐ ಸೃಷ್ಟಿತ ಕಂಟೆಂಟ್; ಸೋಷಿಯಲ್ ಮೀಡಿಯಾಗಳಿಗೆ ಜವಾಬ್ದಾರಿ; ಬರಲಿದೆ ಹೊಸ ಕಾನೂನು
Social Media AI Policy: ಡೀಪ್ಫೇಕ್ ಕಂಟೆಂಟ್ಗಳು ಅಮಾಯಕ ಜನರನ್ನು ವಂಚಿಸುವ ಕೆಲಸ ಮಾಡುತ್ತಿವೆ. ಬಹಳ ಜನರು ಇಂಥ ವಂಚಕರ ಜಾಲಕ್ಕೆ ಬಿದ್ದು ಮೋಸ ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕು ಸರ್ಕಾರ ಕರಡು ನಿಯಮಗಳನ್ನು ರೂಪಿಸಿದೆ. ಈ ನಿಯಮಗಳನ್ನು ಸಾಕಷ್ಟು ಪರಾಮರ್ಶೆಗೆ ಒಳಪಡಿಸಿ, ಕಾನೂನು ತಿದ್ದುಪಡಿ ಮಾಡಲು ಸರ್ಕಾರ ಅಣಿಯಾಗಿದೆ.

ನವದೆಹಲಿ, ನವೆಂಬರ್ 12: ಡೀಪ್ಫೇಕ್ ವಿಡಿಯೋಗಳ (Deepfake Videos) ಹಾವಳಿ ವಿಪರೀತವಾಗಿ ಹೆಚ್ಚುತ್ತಿದೆ. ಸೆಲಬ್ರಿಟಿಗಳ ಧ್ವನಿಯನ್ನೋ, ದೃಶ್ಯವನ್ನೋ ನಕಲು ಮಾಡಿ, ತಿರುಚಿ ತೋರಿಸಿ ವಂಚಿಸುತ್ತಿರುವ ಪ್ರಕರಣಗಳು ಬಹಳಷ್ಟಿವೆ. ರಶ್ಮಿಕಾ ಮಂದಣ್ಣರ ಬಾತ್ರೂಮ್ ವಿಡಿಯೋ, ನರೇಂದ್ರ ಮೋದಿ ಅವರ ಭಾಷಣದ ತುಣುಕು ಹೀಗೆ ನಿತ್ಯವೂ ಹಲವಾರು ಡೀಪ್ಫೇಕ್ ವಿಡಿಯೋಗಳು ಎಐ ಮೂಲಕ ಜನರೇಟ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿವೆ. ನಿರ್ಮಲಾ ಸೀತಾರಾಮನ್ ಅವರ ಡೀಪ್ಫೇಕ್ ವಿಡಿಯೋದ ಮೆಸೇಜ್ ನೋಡಿ ಬೆಂಗಳೂರಿನ ಮಹಿಳೆಯೊಬ್ಬಳು 43 ಲಕ್ಷ ರೂ ಕಳೆದುಕೊಂಡ ಘಟನೆ ಕಳೆದ ವಾರ ಬೆಳಕಿಗೆ ಬಂದಿತ್ತು. ಇಂಥ ಹಾವಳಿ ತಪ್ಪಿಸಲು ಸರ್ಕಾರ ಕಠಿಣ ಕಾಯ್ದೆ ರೂಪಿಸುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಎಐ ಸೃಷ್ಟಿತ ಕಂಟೆಂಟ್ಗಳಿಗೆ ನಿರ್ಬಂಧಗಳನ್ನು ಹಾಕುವ ಕರಡು ನಿಯಮಗಳನ್ನು ಸರ್ಕಾರ ರೂಪಿಸಿದೆ. 2021ರ ಮಾಹಿತಿ ತಂತ್ರಜ್ಞಾನ ಮಧ್ಯಂತರ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ನಿಯಮಗಳಿಗೆ ತಿದ್ದುಪಡಿ ತರುವ ಈ ಕರಡು ನಿಯಮಗಳ ಬಗ್ಗೆ ಸಲಹೆ, ಟೀಕೆ, ಟಿಪ್ಪಣಿಗಳನ್ನು ಸರ್ಕಾರ ಆಹ್ವಾನಿಸಿದೆ.
ಇದನ್ನೂ ಓದಿ: ನಿರ್ಮಲಾ ಸೀತಾರಾಮನ್ ಸಹಿ ನಕಲು ಮಾಡಿ ಮಹಿಳೆಯೊಬ್ಬಳಿಂದ ಕೋಟಿ ರೂ ವಸೂಲಿ ಮಾಡಿದ ದುಷ್ಕರ್ಮಿಗಳು
ಎಐ ಸೃಷ್ಟಿತ ಕಂಟೆಂಟ್ ಕುರಿತ ಸರ್ಕಾರದ ಕರಡು ನಿಯಮಗಳು ಏನಿವೆ?
ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಇತ್ಯಾದಿ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳು ತಮ್ಮಲ್ಲಿ ಕಂಟೆಂಟ್ ಅಪ್ಲೋಡ್ ಮಾಡುವ ಜನರಿಂದ ಡಿಕ್ಲರೇಶನ್ ಪಡೆಯಬೇಕು. ಅಂದರೆ, ಈ ಕಂಟೆಂಟ್ ಕೃತಕವಾಗಿ ಸೃಷ್ಟಿಸಲಾಗಿದ್ದಾ ಅಲ್ಲವಾ ಎಂದು ಬಳಕೆದಾರರಿಂದಲೇ ದೃಢೀಕರಣ ಪಡೆಯಬೇಕು ಎನ್ನುತ್ತದೆ ಡ್ರಾಫ್ಟ್ನ ಒಂದು ನಿಯಮ.
ಎಐ ಸೃಷ್ಟಿತ ಕಂಟೆಂಟ್ ಇದ್ದರೆ ಅದು ನೋಡುಗರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಲೇಬಲ್ ಮಾಡಿರಬೇಕು, ವಾಟರ್ಮಾರ್ಕ್ಗಳನ್ನು ಹಾಕಿರಬೇಕು. ದೃಶ್ಯ ಕಂಟೆಂಟ್ ಆಗಿದ್ದರೆ ಪರದೆಯ ಶೇ. 10ರಷ್ಟು ಜಾಗದಲ್ಲಿ ಆ ಲೇಬಲ್ ಕಾಣುವಂತಿರಬೇಕು. ಆಡಿಯೋ ಕಂಟೆಂಟ್ ಆಗಿದ್ದರೆ ಒಟ್ಟೂ ಅವಧಿಯ ಮೊದಲ ಶೇ. 10ರಷ್ಟು ಅವಧಿಯಲ್ಲಿ ಈ ಲೇಬಲ್ ಪ್ರದರ್ಶಿತವಾಗಬೇಕು ಎಂದು ಈ ಕರಡು ನಿಯಮಗಳು ಹೇಳುತ್ತವೆ.
ಇದನ್ನೂ ಓದಿ: ಟ್ರೈನ್ನಲ್ಲಿ ಮಕ್ಕಳಿಗೆ ಟಿಕೆಟ್; ವಿನಾಯಿತಿ, ವಯಸ್ಸು, ಸೀಟು, ನಿರ್ಬಂಧ ಇತ್ಯಾದಿ ವಿವರ
ಈ ಕರಡು ನಿಯಮಗಳು ಜಾರಿಗೆ ಬಂದಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗುವ ಪ್ರತಿಯೊಂದು ಎಐ ಸೃಷ್ಟಿತ ಇಮೇಜ್ ಮತ್ತು ವಿಡಿಯೋಗಳಲ್ಲಿ, ಅದು ಎಐ ಜನರೇಟೆಡ್ ಕಂಟೆಂಟ್ ಎಂಬ ವಿಚಾರವನ್ನು ನೋಡುಗರಿಗೆ ಸ್ಪಷ್ಟವಾಗಿ ಗೊತ್ತಾಗುವ ರೀತಿಯಲ್ಲಿ ಲೇಬಲ್ ಮಾಡಿರಲಾಗುತ್ತದೆ. ಇದರಿಂದ ಜನರು ಮೋಸವಾಗುವುದು ತಪ್ಪುತ್ತದೆ.
ಹಾಗೆಯೇ, ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಿಗೂ ಹೆಚ್ಚಿನ ಜವಾಬ್ದಾರಿ ಕೊಡಲಾಗುತ್ತಿದೆ. ಜನರು ಎಐ ಸೃಷ್ಟಿತ ಕಂಟೆಂಟ್ ಎಂಬುದನ್ನು ಮುಚ್ಚಿಟ್ಟು, ಅದನ್ನು ಅಪ್ಲೋಡ್ ಮಾಡಬಹುದು. ಈ ಪ್ಲಾಟ್ಫಾರ್ಮ್ಗಳು ತಮ್ಮಲ್ಲಿರುವ ತಂತ್ರಜ್ಞಾನ ಬಳಸಿ, ಅಪ್ಲೋಡ್ ಆಗುವ ಕಂಟೆಂಟ್ ಎಐ ಜನರೇಟ್ ಆಗಿರುವಂಥವಾ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




