ಗಣಿಗಾರಿಕೆಯ ವ್ಯವಹಾರ ನಡೆಸುವ ಪ್ರಮುಖ ಕಂಪೆನಿಯಾದ ವೇದಾಂತ ಲಿಮಿಟೆಡ್ ಪ್ರತಿ ಷೇರಿಗೆ ರೂ. 18.50ರ ಮೊದಲ ಮಧ್ಯಂತರ ಲಾಭಾಂಶವನ್ನು ಘೋಷಣೆ ಮಾಡಿದೆ. ಸೆಪ್ಟೆಂಬರ್ 1ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ಖಾತ್ರಿ ಪಡಿಸಲಾಗಿದೆ ಎಂದು ಕಂಪೆನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. “ಸೆಪ್ಟೆಂಬರ್ 01, 2021ರಂದು ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು, ಈಕ್ವಿಟಿ ಷೇರಿಗೆ ಮಧ್ಯಂತರ ಡಿವಿಡೆಂಡ್ (ರೂ. 18.50) ಘೋಷಿಸಿದೆ,” ಎಂದು ವೇದಾಂತ ಲಿಮಿಟೆಡ್ ತಿಳಿಸಿದೆ.
ಈ ಹಿಂದೆ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ)ಗೆ ಸಲ್ಲಿಸಲಾದ ನಿಯಂತ್ರಕ ಫೈಲಿಂಗ್‌ನಲ್ಲಿ, ವೇದಾಂತವು ಈ ಡಿವಿಡೆಂಡ್‌ಗಾಗಿ ಈಕ್ವಿಟಿ ಷೇರುದಾರರ ಹಕ್ಕನ್ನು ನಿರ್ಧರಿಸುವ ಉದ್ದೇಶದ ದಾಖಲೆಯ ದಿನಾಂಕವನ್ನು (Record Date) “ಸೆಪ್ಟೆಂಬರ್ 9, 2021 ಗುರುವಾರ ಎಂದು ನಿಗದಿಪಡಿಸಲಾಗಿದೆ.”
ಸೆಪ್ಟೆಂಬರ್ 3, 2021ರ ವರೆಗೆ ಎಲ್ಲ ಅಂಗೀಕೃತ ವ್ಯಕ್ತಿಗಳು ಕಂಪೆನಿಯ ಸೆಕ್ಯೂರಿಟಿಗಳಲ್ಲಿ ವ್ಯವಹರಿಸಲು ಟ್ರೇಡಿಂಗ್ ವಿಂಡೋ ಮುಚ್ಚಿರುತ್ತದೆ ಎಂದು ಕಂಪೆನಿಯು ಬಿಎಸ್‌ಇಗೆ ತಿಳಿಸಿದೆ. 2021-22ರ ಆರ್ಥಿಕ ವರ್ಷದ ಮೊದಲ ಮಧ್ಯಂತರ ಲಾಭಾಂಶವನ್ನು ಅನುಮೋದಿಸಲು ನಿರ್ದೇಶಕರ ಮಂಡಳಿಯು ಪರಿಗಣಿಸುತ್ತದೆ ಎಂದು ಕಂಪೆನಿಯು ಘೋಷಿಸಿದ ನಂತರ ಆಗಸ್ಟ್ 30ರಂದು ವೇದಾಂತದ ಷೇರುಗಳು ಸುಮಾರು ಶೇ 3ರಷ್ಟು ಏರಿತು. ಕಳೆದ ವರ್ಷದಲ್ಲಿ ವೇದಾಂತದ ಸ್ಟಾಕ್ ಬೆಲೆಯು ಶೇ 132ಕ್ಕಿಂತಲೂ ಹೆಚ್ಚಾಗಿದೆ. 2021ರಲ್ಲಿ ಇಲ್ಲಿಯವರೆಗೆ ಷೇರು ಮೌಲ್ಯವು ಶೇ 85ರಷ್ಟು ಹೆಚ್ಚಾಗಿದೆ ಮತ್ತು ಕಳೆದ ಒಂದು ವಾರದಲ್ಲಿ ಸುಮಾರು ಶೇ 9ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Unlisted Shares: ಅನ್ಲಿಸ್ಟೆಡ್ ಷೇರುಗಳ ಖರೀದಿ, ವಹಿವಾಟು ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ
(Vedanta Announced First Interim Dividend Of Rs 18.50)