Updated on:Sep 01, 2021 | 1:39 PM
ಈ ತಿಂಗಳು, ಅಂದರೆ ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಬೇಕಾದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ಐದು ಜವಾಬ್ದಾರಿಗಳು ಇಲ್ಲಿವೆ. ಒಂದು ವೇಳೆ ಈ ಗಡುವನ್ನು ಮೀರಿದಲ್ಲಿ ದಂಡ ಪಾವತಿಸಬೇಕಾದ ಸನ್ನಿವೇಶ ಉದ್ಭವಿಸಬಹುದು. ಯಾವುದು ಆ 5 ಜವಾಬ್ದಾರಿಗಳು ಎಂಬ ವಿವರ ನಿಮ್ಮೆದುರು ಇದೆ.
ಐಟಿಆರ್ ಫೈಲಿಂಗ್ ವಯಕ್ತಿಕ ತೆರಿಗೆದಾರರಿಗೆ 2020-21ರ ಹಣಕಾಸು ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು 30 ಸೆಪ್ಟೆಂಬರ್ 2021 ಕೊನೆಯ ದಿನಾಂಕವಾಗಿದೆ. ಕೊವಿಡ್- 19 ಬಿಕ್ಕಟ್ಟಿನ ನಡುವೆ, ಅದರ ಹಿಂದಿನ ಸಾಮಾನ್ಯ ಗಡುವಾದ 31ನೇ ಜುಲೈನಿಂದ ವಿಸ್ತರಿಸಲಾಗಿತ್ತು. ಐಟಿಆರ್ ಫೈಲಿಂಗ್‌ನ 30ರ ಸೆಪ್ಟೆಂಬರ್ ಗಡುವನ್ನು ನೀವು ತಪ್ಪಿಸಿಕೊಂಡರೆ, 5,000 ರೂಪಾಯಿ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಒಂದು ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 5 ಲಕ್ಷ ರೂಪಾಯಿಯನ್ನು ಮೀರದಿದ್ದರೆ ವಿಳಂಬ ಶುಲ್ಕವು 1,000 ರೂಪಾಯಿ ಮೀರುವುದಿಲ್ಲ.
ಮುಂದಿನ ತಿಂಗಳಿನಿಂದ (1 ಅಕ್ಟೋಬರ್, 2021) ನಿಮ್ಮ ಬ್ಯಾಂಕ್ ಖಾತೆಯಿಂದ ಆಟೋ-ಡೆಬಿಟ್ ಪಾವತಿಗೆ ಎರಡು ಅಂಶಗಳ ದೃಢೀಕರಣದ ಅಗತ್ಯವಿದೆ. ಹಾಗಾಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ದಾಖಲೆಗಳಲ್ಲಿ ಅಪ್‌ಡೇಟ್ ಮಾಡಿರುವುದು ಮುಖ್ಯವಾಗಿದೆ. ಆಟೋ-ಡೆಬಿಟ್ ಆರ್ಡರ್ ಅನ್ನು ಸಾಮಾನ್ಯವಾಗಿ ಮ್ಯೂಚುವಲ್ ಫಂಡ್ SIPಗಳಿಗೆ ನೀಡಲಾಗುತ್ತದೆ. ಅಕ್ಟೋಬರ್ 1ರಿಂದ ಆರ್‌ಬಿಐ ದೃಢೀಕರಣದ ಹೆಚ್ಚುವರಿ ಅಂಶವನ್ನು ಕಡ್ಡಾಯಗೊಳಿಸಿದೆ. ಐದು ದಿನಗಳ ಮುಂಚಿತವಾಗಿ ಮತ್ತು ನಿಮ್ಮ ಮೊಬೈಲ್ ಸಂಖ್ಯೆಗೆ ಪಾವತಿ ದಿನಾಂಕಕ್ಕೆ ಕನಿಷ್ಠ 24 ಗಂಟೆಗಳ ಮೊದಲು ಬ್ಯಾಂಕ್ ಸಂವಹನವನ್ನು ಕಳುಹಿಸಬೇಕಾಗುತ್ತದೆ.
ಡಿಮ್ಯಾಟ್ ಖಾತೆಗಳು ಅಥವಾ ಟ್ರೇಡಿಂಗ್ ಖಾತೆಗಳನ್ನು ಹೊಂದಿರುವ ಹೂಡಿಕೆದಾರರು ಸೆಪ್ಟೆಂಬರ್ 30ರೊಳಗೆ "Know Your Custome"(ಕೆವೈಸಿ) ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದಾರೆ. ಹಾಗೆ ಮಾಡದಿದ್ದರೆ ಖಾತೆಗಳನ್ನು ನಿಷ್ಕ್ರಿಯಗೊಳಿಸಬಹುದು.
ಪ್ಯಾನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಲು ಕೊನೆಯ ದಿನಾಂಕ 30 ಸೆಪ್ಟೆಂಬರ್, 2021. ಗಡುವು ಮುಗಿದ ನಂತರ ಆಧಾರ್‌ಗೆ ಜೋಡಣೆ ಮಾಡದ ಎಲ್ಲ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗುತ್ತವೆ. ಬ್ಯಾಂಕ್ ಖಾತೆ ತೆರೆಯಲು ಮತ್ತು ಇತರ ಹಣಕಾಸು ವಹಿವಾಟು ನಡೆಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.
ಸೆಪ್ಟೆಂಬರ್‌ನಿಂದ ನಿಮ್ಮ ಆಧಾರ್ ಅನ್ನು ಯೂನಿವರ್ಸಲ್ ಅಕೌಂಟ್ ನಂಬರ್ (UAN)ಗೆ ಜೋಡಣೆ ಮಾಡಿದರೆ ಮಾತ್ರ ಉದ್ಯೋಗದಾತರು ಭವಿಷ್ಯ ನಿಧಿ (PF) ಖಾತೆಗೆ ತಮ್ಮ ಕೊಡುಗೆಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ. ಕಾರ್ಮಿಕ ಭವಿಷ್ಯ ನಿಧಿ ಒಕ್ಕೂಟ (ಇಪಿಎಫ್‌ಒ) ಸಾಮಾಜಿಕ ಭದ್ರತೆ ಸಂಹಿತೆ 2020ರ ಸೆಕ್ಷನ್ 142ಕ್ಕೆ ತಿದ್ದುಪಡಿ ತಂದಿದ್ದು, ಸೇವೆಗಳನ್ನು ಪಡೆಯಲು, ಇತರ ಅನುಕೂಲಕ್ಕಾಗಿ, ಪಾವತಿ ಪಡೆಯಲು ಇತ್ಯಾದಿಗಳಿಗೆ ಈ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಪಿಎಫ್ ಖಾತೆದಾರರು ತಮ್ಮ ಆಧಾರ್ ಅನ್ನು ತಮ್ಮ ಯುಎಎನ್‌ಗೆ ಜೋಡಣೆ ಮಾಡಿದ್ದರೆ ಮಾತ್ರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸದೆ, ಉದ್ಯೋಗಿ ಅಥವಾ ಉದ್ಯೋಗದಾತರ ಕೊಡುಗೆಯನ್ನು ಪಿಎಫ್ ಖಾತೆಗಳಲ್ಲಿ ಜಮಾ ಮಾಡಲಾಗುವುದಿಲ್ಲ.
Published On - 1:37 pm, Wed, 1 September 21