ಉದ್ಯಮಿ ರತನ್ ಟಾಟಾಗೆ ಭಾರತ-ಇಸ್ರೇಲ್ ವಾಣಿಜ್ಯ ಮಂಡಳಿಯಿಂದ ಗೌರವ
ಭಾರತ, ಇಸ್ರೇಲ್ ಮತ್ತು ಪ್ಯಾಲೆಸ್ತನ್ ನಡುವೆ ಉತ್ತಮ ಸಂಬಂಧಕ್ಕೆ ಅವರು ಕಾರಣರಾಗಿದ್ದಾರೆ. ಈ ಗೌರವಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಇಸ್ರೇಲ್-ಭಾರತದ ವಾಣಿಜ್ಯ ಮಂಡಳಿಯ ಅಧ್ಯಕ್ಷ ರವಿವ್ ಬೈರೊನ್ ತಿಳಿಸಿದ್ದಾರೆ.
ದೆಹಲಿ: ಸುಸ್ಥಿರ ಅಭಿವೃದ್ಧಿ ಮತ್ತು ಶಾಂತಿ ಸಾಧಿಸುವ ನೆಲೆಯಲ್ಲಿ ಹೊಸ ಆವಿಷ್ಕಾರಗಳನ್ನು ಬೆಂಬಲಿಸಿದೆ ಭಾರತದ ಜನಪ್ರಿಯ ಉದ್ಯಮಿ ರತನ್ ಟಾಟಾಗೆ ಇಂಡೋ-ಇಸ್ರೇಲ್ ವಾಣಿಜ್ಯ ಮಂಡಳಿ ‘ಗ್ಲೋಬಲ್ ವಿಷನರಿ ಆಫ್ ಸಸ್ಟೈನೆಬಲ್ ಬ್ಯುಸಿನೆಸ್ ಅಂಡ್ ಪೀಸ್’ ಪ್ರಶಸ್ತಿ ನೀಡಿ ಗೌರವಿಸಲಿದೆ. ರತನ್ ಟಾಟಾ ಒಡೆತನದ ಟಾಟಾ ಗ್ರೂಪ್ಗೆ ಡಿ.21ರಂದು ದುಬೈನಲ್ಲಿ ನಡೆಯುವ ವರ್ಚುಯಲ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಲಭಿಸಲಿದೆ.
ಕಾರ್ಯಕ್ರಮದಲ್ಲಿ ಭಾರತ, ಇಸ್ರೇಲ್ ಮತ್ತು ಯುಎಇನ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ರತನ್ ಟಾಟಾ ಕೆಲವಾರು ಬಾರಿ ಇಸ್ರೇಲ್ಗೆ ಭೇಟಿ ನೀಡಿದ್ದಾರೆ. ಭಾರತ, ಇಸ್ರೇಲ್ ಮತ್ತು ಪ್ಯಾಲೆಸ್ತೇನಿನ ಉತ್ತಮ ಸಂಬಂಧಕ್ಕೆ ಅವರು ಕಾರಣರಾಗಿದ್ದಾರೆ. ಈ ಗೌರವಕ್ಕೆ ಅವರು ಅರ್ಹರಾಗಿದ್ದಾರೆ ಎಂದು ಇಸ್ರೇಲ್-ಭಾರತದ ವಾಣಿಜ್ಯ ಮಂಡಳಿಯ ಅಧ್ಯಕ್ಷ ರವಿವ್ ಬೈರೊನ್ ತಿಳಿಸಿದ್ದಾರೆ.
ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾವಹಾರಿಕ ಸಂಬಂಧವನ್ನು ಬಲಗೊಳಿಸುವಲ್ಲಿ ಈ ಸಮಾರಂಭವು ಪ್ರಮುಖ ಪಾತ್ರ ವಹಿಸಲಿದೆ. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪಡೆದಿರುವ 82ರ ಹರೆಯದ ರತನ್ ಟಾಟಾ ಈ ಕಾರ್ಯಕ್ರಮದಲ್ಲಿ ಗೌರವ ಪಡೆಯಲಿದ್ದಾರೆ.
ಯುಎಇ ಮತ್ತು ಬಹ್ರೇನ್ ದೇಶಗಳಲ್ಲಿ ಹಲವಾರು ಭಾರತೀಯರಿದ್ದಾರೆ. ಉನ್ನತ ಹುದ್ದೆ ಮತ್ತು ಉತ್ತಮ ಗೌರವವನ್ನೂ ಅವರು ಸಂಪಾದಿಸಿದ್ದಾರೆ. ಆದ್ದರಿಂದ, ಗಲ್ಫ್, ಭಾರತ ಮತ್ತು ಇಸ್ರೇಲ್ನ ಸಂಬಂಧ ಬಲಪಡಿಸುವ ನಿಟ್ಟಿನಲ್ಲೂ ನಾವು ಶ್ರಮಿಸಬಹುದು ಎಂದು ರವಿವ್ ಬೈರೊನ್ ಹೇಳಿದ್ದಾರೆ.
Published On - 7:49 pm, Fri, 18 December 20