‘ಸುಮ್ಮನೆ ಕೆಲಸಕ್ಕೆ ಸೇರಿಸಿಕೊಂಡು ತಪ್ಪಾಯ್ತು’; ಶೇ. 33ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದ ವರ್ಜಿಯೋ

|

Updated on: Oct 25, 2023 | 2:06 PM

Virgio Layoffs: ಫ್ಯಾಷನ್ ಕಂಪನಿ ವರ್ಜಿಯೋದಲ್ಲಿ 20 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಕಾಸ್ಟ್ ಕಟಿಂಗ್​ಗಾಗಿ ವರ್ಜಿಯೋ ಈ ಕ್ರಮ ಕೈಗೊಂಡಿದೆ. ಉನ್ನತ ಮಟ್ಟದ ಹುದ್ದೆಗಳಲ್ಲೂ ಬದಲಾವಣೆಗಳಾಗಿವೆ. ಹಾಗೆಯೇ, ಉನ್ನತ ಹುದ್ದೆಗಳಿಗೆ ಹೊಸ ನೇಮಕಾತಿಯೂ ಆಗಿದೆ. ಒಟ್ಟಾರೆ ಸಿಬ್ಬಂದಿ ಸಂಖ್ಯೆ ಕಡಿಮೆಗೊಂಡಿದೆ. ತಂಡದ ಸರಾಸರಿ ವಯಸ್ಸೂ ಕಡಿಮೆ ಆಗಿದೆ.

ಸುಮ್ಮನೆ ಕೆಲಸಕ್ಕೆ ಸೇರಿಸಿಕೊಂಡು ತಪ್ಪಾಯ್ತು; ಶೇ. 33ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದ ವರ್ಜಿಯೋ
ಅಮರ್ ನಗರಂ
Follow us on

ನವದೆಹಲಿ, ಅಕ್ಟೋಬರ್ 25: ಭಾರತದ ಪ್ರಮುಖ ಫ್ಯಾಷನ್ ಬ್ರ್ಯಾಂಡ್ ಮಿನ್​ತ್ರಾದ (Myntra) ಮಾಜಿ ಸಿಇಒ ಅಮರ್ ನಗರಂ ಸ್ಥಾಪಿಸಿದ ವರ್ಜಿಯೋ (Virgio) ಕಂಪನಿಯಲ್ಲಿ ಶೇ. 33ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಫ್ಯಾಷನ್ ಕ್ಷೇತ್ರದ ಈ ಕಂಪನಿಯಲ್ಲಿ 20 ಮಂದಿಯನ್ನು ಲೇ ಆಫ್ (layoffs) ಮಾಡಲಾಗಿದೆ. ಅವರಲ್ಲಿ ಹೆಚ್ಚಿನವರು ಉನ್ನತ ಸ್ಥಾನದಲ್ಲಿದ್ದವರೇ ಆಗಿರುವುದು ವಿಶೇಷ. ಕಾಸ್ಟ್ ಕಟಿಂಗ್​ಗಾಗಿ ವರ್ಜಿಯೋ ಈ ಕ್ರಮ ಕೈಗೊಂಡಿದೆ. ಹೀಗಾಗಿ, ಹೆಚ್ಚು ಸಂಬಳ ಪಡೆಯುವ ಹಿರಿಯರನ್ನು ಕೆಲಸದಿಂದ ತೆಗೆಯಲಾಗಿರಬಹುದು.

‘ನೇಮಕಾತಿ ವೇಳೆ ಕೆಲ ತಪ್ಪುಗಳಾಗಿವೆ. ಆದಷ್ಟೂ ಬೇಗ ಅದನ್ನು ಸರಿಪಡಿಸಲು ವರ್ಜಿಯೋ ನಿರ್ಧರಿಸಿತು,’ ಎಂದು ಮೂಲವೊಂದರ ಹೇಳಿಕೆಯನ್ನು ಉಲ್ಲೇಖಿಸಿ ಮನಿಕಂಟ್ರೋಲ್ ವರದಿ ಮಾಡಿದೆ.

ಕೆಲಸದಿಂದ ತೆಗೆದಿರುವ ಉದ್ಯೋಗಿಗಳು ಕಳಪೆ ಪ್ರತಿಭೆಗಳಲ್ಲ. ಆದರೆ, ವರ್ಜಿಯೋ ಇರುವ ಈಗಿನ ಹಂತಕ್ಕೆ ಇವರು ಸರಿಹೊಂದುತ್ತಿರಲಿಲ್ಲ ಎಂದು ವರ್ಜಿಯೋ ಮೂಲಗಳು ಹೇಳಿವೆ ಎನ್ನಲಾಗಿದೆ. ಆದರೆ, ವರ್ಜಿಯೊ ಕಂಪನಿಯಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆ, 15ನೇ ಕಂತಿನ ಹಣ ಬಿಡುಗಡೆ ಯಾವಾಗ? ಆಧಾರ್ ಪ್ರಕಾರ ನಿಮ್ಮ ಹೆಸರು ಬದಲಿಸುವುದು ಹೇಗೆ?

ವರ್ಜಿಯೋದ ಉನ್ನತ ಹುದ್ದೆಗಳಲ್ಲಿ ಹೆಚ್ಚು ಸಂಚಲನವಾಗಿದೆ. ಖಾಲಿ ಉಳಿದ ಕೆಲ ಹುದ್ದೆಗಳಿಗೆ ನೇಮಕಾತಿಯನ್ನೂ ಮಾಡಲಾಗಿದೆ. ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡಲಾಗಿದೆ.

ವರ್ಜಿಯೋದ ಸೋರ್ಸಿಂಗ್ ಮತ್ತು ಡಿಸೈನ್ ವಿಭಾಗದ ಮುಖ್ಯ ಸ್ಥಾನಕ್ಕೆ ರಾಜೇಶ್ ನಾರ್ಕರ್ ಬದಲು ಪ್ರಾಚಿ ಶರ್ಮಾ ಅವರನ್ನು ಸೇರಿಸಲಾಗಿದೆ. ಪ್ರಾಚಿ ಅವರು ಕ್ಯಾಲ್ವಿನ್ ಕ್ಲೇನ್, ಟಾಮಿ ಹಿಲ್​ಫಿಗರ್ ಮೊದಲಾದ ಪ್ರಮುಖ ಬ್ರ್ಯಾಂಡ್ ಕಂಪನಿಗಳಲ್ಲಿ ಕೆಲಸ ಮಾಡಿದ್ದವರು.

ಇನ್ನು, ವರ್ಜಿಯೋದ ಮಾರ್ಕೆಟಿಂಗ್ ಹೆಡ್ ಸ್ಥಾನಕ್ಕೆ ಸಚಿನ್ ಟಂಡನ್ ಬದಲು ಹಂಸಾ ನಿಗಮ್ ಅವರನ್ನು ನೇಮಕ ಮಾಡಲಾಗಿದೆ. ತಂತ್ರಜ್ಞಾನ ವಿಭಾಗದಲ್ಲಿ ನಿಶಾಂತ್ ಖುರಾನ ಅವರನ್ನು ಕೈಬಿಟ್ಟು ಸುಯಶ್ ಮೋಟಾರ್ವರ್ ಅವರನ್ನು ನೇಮಕ ಮಾಡಲಾಗಿದೆ. ಇನ್ನು, ಪ್ರಾಡಕ್ಟ್ ಟೀಮ್​ನ ನೇತೃತ್ವ ವಹಿಸಿದ್ದ ನೀಲೇಶ್ ಸೋನಿ ಸ್ಥಾನಕ್ಕೆ ಆಶೀಶ್ ರಾಂಕ ಅವರನ್ನು ನೇಮಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಬೈಜುಸ್ ಸಿಎಫ್​ಒ ಅಜಯ್ ಗೋಯಲ್ ರಾಜೀನಾಮೆ; ನಿತಿನ್ ಗೋಲಾನಿಗೆ ಜವಾಬ್ದಾರಿ

ಈಗ ನಿರ್ಗಮಿತವಾಗಿರುವ ಎಲ್ಲಾ ನಾಲ್ಕು ಉನ್ನತ ಹುದ್ದೆಯವರು ಈ ಹಿಂದೆ ಮಿನ್​ತ್ರಾದಲ್ಲಿ ಅಮರ್ ನಗರಂ ಅವರ ಸಹೋದ್ಯೋಗಿಗಳಾಗಿದ್ದವರು.

ಸದ್ಯ ವರ್ಜಿಯೋ ಸಂಸ್ಥೆಗೆ ಅಕ್ಸೆಲ್, ಪ್ರೋಸಸ್, ಆಲ್ಫಾ ವೇವ್ ಮತ್ತಿತರ ಕಂಪನಿಗಳಿಂದ 300 ಕೋಟಿ ರೂಗೂ ಹೆಚ್ಚು ಬಂಡವಾಳ ಪಡೆದಿದೆ. ಕುನಾಲ್ ಶಾ, ಬಿನ್ನಿ ಬನ್ಸಾಲ್, ಮುಕೇಶ್ ಬನ್ಸಾಲ್, ಭವೀಶ್ ಅಗರ್ವಾಲ್ ಮೊದಲಾದ ಹೂಡಿಕೆದಾರರೂ ವರ್ಜಿಯೋಗೆ ನೆರವಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ