
ಬೆಂಗಳೂರು, ಏಪ್ರಿಲ್ 9: ಜಿಯೋ, ಏರ್ಟೆಲ್ ಬಳಿಕ ವೊಡಫೋನ್ ಐಡಿಯಾ (Vodafone Idea) ಕೂಡ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ 5ಜಿ ಸರ್ವಿಸ್ ಆ್ಯಕ್ಟಿವೇಟ್ ಮಾಡಿದೆ. ಕಳೆದ ತಿಂಗಳಷ್ಟೇ ವೊಡಾಫೋನ್ ಐಡಿಯಾ ಕಮರ್ಷಿಯಲ್ 5ಜಿ ಸೇವೆಗಳನ್ನು ಬಿಡುಗಡೆ ಮಾಡಿತ್ತು. ಈಗ ಬೆಂಗಳೂರು ಸೇರಿದಂತೆ 11 ನಗರಗಳ ಕ್ರಿಕೆಟ್ ಸ್ಟೇಡಿಯಂಗಳಲ್ಲಿ 5ಜಿ ಸರ್ವಿಸ್ ವಿಸ್ತರಿಸಲಾಗಿದೆ. ಐಪಿಎಲ್ ಪ್ರೇಕ್ಷಕರಿಗೆ ಈಗ ಸ್ಟೇಡಿಯಂನಲ್ಲಿ ಬಹಳ ವೇಗದ ಇಂಟರ್ನೆಟ್ ಕನೆಕ್ಟಿವಿಟಿ ಸಿಗಲಿದೆ. ರಿಲಾಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳು ದೇಶಾದ್ಯಂತ 5ಜಿ ಸೇವೆ ಚಾಲನೆಗೊಳಿಸಿವೆ. ಎಲ್ಲಾ ಕ್ರಿಕೆಟ್ ಸ್ಟೇಡಿಯಂಗಳಲ್ಲೂ ಏರ್ಟೆಲ್, ಜಿಯೋ ಬಳಕೆದಾರರು 5ಜಿ ಇಂಟರ್ನೆಟ್ ಪಡೆಯಬಹುದು. ಈಗ ವಿಐ ಬಳಕೆದಾರರಿಗೂ ಕೂಡ 5ಜಿ ಸೇವೆ ಸಿಗುತ್ತದೆ.
ವೊಡಾಫೋನ್ ಐಡಿಯಾ ಬಳಕೆದಾರರು 5ಜಿ ಇಂಟರ್ನೆಟ್ ಸೇವೆ ಪಡೆಯಬೇಕಾದರೆ ಅವರ ಮೊಬೈಲ್ 5ಜಿಯದ್ದಾಗಿರಬೇಕು. ತಮ್ಮ ನೆಟ್ವರ್ಕ್ ಸೆಟ್ಟಿಂಗ್ ಅನ್ನು 5ಜಿಗೆ ಬದಲಿಸಿಕೊಂಡರೆ ಸ್ಟೇಡಿಯಂನಲ್ಲಿ 5ಜಿಯ ವೇಗದ ಇಂಟರ್ನೆಟ್ ಪಡೆಯಲು ಸಾಧ್ಯ.
ಇದನ್ನೂ ಓದಿ: ಇನ್ಮುಂದೆ ಆಧಾರ್ ಕಾರ್ಡ್ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ; ಕೇಂದ್ರ ಸರ್ಕಾರದಿಂದ ಹೊಸ ಆ್ಯಪ್ ಬಿಡುಗಡೆ
ಐಪಿಎಲ್ ಪಂದ್ಯಗಳು ನಡೆಯುವ ವೇಳೆ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿರುತ್ತಾರೆ. ಈ ವೇಳೆ ಇಂಟರ್ನೆಟ್ ಬಳಕೆ ಬಹಳ ಅಧಿಕ ಮಟ್ಟದಲ್ಲಿರುತ್ತದೆ. ಸಾಮಾನ್ಯ ನೆಟ್ವರ್ಕ್ನಿಂದ ಈ ಬೇಡಿಕೆ ಈಡೇರಿಸಲು ಕಷ್ಟ. ಹೀಗಾಗಿ, ಇನ್ಫ್ರಾಸ್ಟ್ರಕ್ಚರ್ ಹೆಚ್ಚಿಸಬೇಕಾಗುತ್ತದೆ. ಹೆಚ್ಚುವರಿ 5ಜಿ ನೆಟ್ವರ್ಕ್ ಸೈಟ್ಗಳನ್ನು ಅಳವಡಿಸಬೇಕಾಗುತ್ತದೆ. ಬಿಟಿಎಸ್, ಮಿಮೋ ಇತ್ಯಾದಿ ಹೊಸ ಸುಧಾರಿತ ತಂತ್ರಜ್ಞಾನಗಳ ಅಳವಡಿಕೆ ಮಾಡಬೇಕಾಗುತ್ತದೆ.
ವೊಡಾಫೋನ್ ಐಡಿಯಾ ಸಂಸ್ಥೆ ಎಲ್ಲಾ 11 ಕ್ರಿಕೆಟ್ ಸ್ಟೇಡಿಯಂಗಳಲ್ಲೂ ಹೆಚ್ಚುವರಿ 5ಜಿ ಸೈಟ್ಗಳನ್ನು ನಿರ್ಮಿಸಿದೆ. ಈವರೆಗೆ 44 5ಜಿ ನೆಟ್ವರ್ಕ್ ಸೈಟ್ಗಳಿದ್ದುವು. ಈಗ ಹೆಚ್ಚುವರಿಯಾಗಿ 53 ಹೊಸ ಸೈಟ್ಗಳನ್ನು ನಿರ್ಮಿಸಲಾಗಿದೆ. 9 ಸೆಲ್ ಆನ್ ವ್ಹೀಲ್ಸ್ ಯೂನಿಟ್ಗಳನ್ನು ಸ್ಟೇಡಿಯಂ ಸುತ್ತ ನಿಯೋಜಿಸಲಾಗಿದೆ. ಇವೆಲ್ಲಾ ಕ್ರಮಗಳಿಂದ ವೊಡಾಫೋನ್ ಐಡಿಯಾದ ಮೊಬೈಲ್ ಬಳಕೆದಾರರು ಯಾವುದೇ ತಡೆ ಇಲ್ಲದ 5ಜಿ ಇಂಟರ್ನೆಟ್ ಪಡೆಯಲು ಸಾಧ್ಯವಾಗುತ್ತದೆ.
11 ನಗರಗಳಲ್ಲಿನ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ವಿಐ 5ಜಿ ಇಂಟರ್ನೆಟ್ ಲಭ್ಯ ಇದೆಯಾದರೂ ಆ ನಗರಗಳ ಬೇರೆಡೆ ಸದ್ಯಕ್ಕೆ 5ಜಿ ಸೇವೆ ಇರೋದಿಲ್ಲ. ಮುಂಬೈ ನಗರಕ್ಕೆ ಮಾತ್ರ ಅದು ಈಗ ಲಭ್ಯ ಇದೆ. ಹಂತ ಹಂತವಾಗಿ ಬೇರೆ ಬೇರೆ ನಗರಗಳಲ್ಲಿ ವಿಐ 5ಜಿ ನೆಟ್ವರ್ಕ್ ವಿಸ್ತರಣೆ ಆಗಲಿದೆ. ಮುಂಬೈ ಬಳಿಕ ದೆಹಲಿ, ಪಂಜಾಬ್ ಮತ್ತು ಬಿಹಾರದಲ್ಲಿ, ಆ ನಂತರ ಕರ್ನಾಟಕದಲ್ಲಿ ವಿಐ 5ಜಿ ಚಾಲನೆಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ಏರ್‌ಟೆಲ್-ಜಿಯೋ-ವಿಐ, ನಿಮ್ಮ ಪ್ರದೇಶದಲ್ಲಿ ಯಾವ ನೆಟ್‌ವರ್ಕ್ ಉತ್ತಮವಾಗಿದೆ?, ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ