ಟ್ರಂಪ್‌ಗೆ ಚೀನಾ ತಿರುಗೇಟು; ಅಮೆರಿಕದ ಎಲ್ಲಾ ಆಮದು ಮೇಲೆ ಶೇ. 84 ಸುಂಕ ವಿಧಿಸಿದ ಬೀಜಿಂಗ್
ಅಮೆರಿಕದ ಸರಕುಗಳ ಮೇಲೆ ಶೇ. 84ರಷ್ಟು ಸುಂಕದೊಂದಿಗೆ ಚೀನಾ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ತಿರುಗೇಟು ನೀಡಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಚೀನಾದ ಆಮದುಗಳ ಮೇಲೆ ಶೇ. 104ರಷ್ಟು ಸುಂಕವನ್ನು ವಿಧಿಸಿದ ಒಂದು ದಿನದ ನಂತರ ಚೀನಾ ಅಮೆರಿಕದ ಸರಕುಗಳ ಮೇಲೆ ಶೇ. 84ರಷ್ಟು ಸುಂಕವನ್ನು ಘೋಷಿಸಿದ್ದರಿಂದ ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧ ತೀವ್ರವಾಗಿ ಹೆಚ್ಚಾಗಿದೆ.

ಬೀಜಿಂಗ್, ಏಪ್ರಿಲ್ 9: ಚೀನಾ ಅಮೆರಿಕದ ಸರಕುಗಳ ಆಮದುಗಳ ಮೇಲೆ ಶೇ. 84ರಷ್ಟು ಸುಂಕವನ್ನು ಘೋಷಿಸಿದೆ. ಯುನೈಟೆಡ್ ಸ್ಟೇಟ್ಸ್ (United States) ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದ ಮಧ್ಯೆ, ಬೀಜಿಂಗ್ ಡೊನಾಲ್ಡ್ ಟ್ರಂಪ್ (Donald Trump) ಅವರ 104 ಪ್ರತಿಶತ ಸುಂಕಗಳಿಗೆ ಪ್ರತೀಕಾರವಾಗಿ ಅಮೆರಿಕದ ಎಲ್ಲಾ ಸರಕುಗಳ ಮೇಲೆ ಶೇ. 84 ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸಿದೆ. ಈ ಮೂಲಕ ಇಂದು ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧವು ಹೊಸ ಉತ್ತುಂಗಕ್ಕೇರಿದೆ. ಇದು ಎರಡೂ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಚೀನಾದ ಆಮದುಗಳ ಮೇಲೆ ಶೇ. 104ರಷ್ಟು ಸುಂಕವನ್ನು ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ಶಾಕ್ ನೀಡಿದ್ದರು. ಅದಕ್ಕೆ ಇದೀಗ ಚೀನಾ ತಿರುಗೇಟು ನೀಡಿದೆ. ಮುಯ್ಯಿಗೆ ಮುಯ್ಯಿ ಎಂಬಂತೆ ಚೀನಾ ಅಮೆರಿಕಕ್ಕೆ ಬಿಸಿ ಮುಟ್ಟಿಸಿದೆ.
ಅಮೆರಿಕದ ಸರಕುಗಳ ಮೇಲಿನ ಬೀಜಿಂಗ್‌ನ ಪ್ರತೀಕಾರದ ಸುಂಕ ದರವು ಹಿಂದೆ ಘೋಷಿಸಲಾದ 34 ಪ್ರತಿಶತದಿಂದ ಹೆಚ್ಚಾಗಿದೆ. ಅಮೆರಿಕದ ಸರಕುಗಳ ಮೇಲೆ ಹೊಸದಾಗಿ ವಿಧಿಸಲಾದ ಸುಂಕಗಳು ಏಪ್ರಿಲ್ 10ರಿಂದ ಜಾರಿಗೆ ಬರಲಿವೆ ಎಂದು ಚೀನಾದ ಹಣಕಾಸು ಸಚಿವಾಲಯ ಘೋಷಿಸಿದೆ. ಹಾಗೇ, ಚೀನಾದ ವಾಣಿಜ್ಯ ಸಚಿವಾಲಯವು 12 ಅಮೇರಿಕನ್ ಸಂಸ್ಥೆಗಳನ್ನು ತನ್ನ ರಫ್ತು ನಿಯಂತ್ರಣ ಪಟ್ಟಿಗೆ ಸೇರಿಸಿದೆ ಮತ್ತು 6 ಅಮೇರಿಕನ್ ಕಂಪನಿಗಳನ್ನು ತನ್ನ “ವಿಶ್ವಾಸಾರ್ಹವಲ್ಲದ ಘಟಕ”ದ ಪಟ್ಟಿಯ ಭಾಗವಾಗಿ ಗೊತ್ತುಪಡಿಸಿದೆ. ಏಪ್ರಿಲ್ 10ರಿಂದ ಅಮೆರಿಕದ ಸರಕುಗಳ ಮೇಲೆ ಈ ಹೆಚ್ಚುವರಿ ಸುಂಕಗಳನ್ನು ವಿಧಿಸಲಾಗುವುದು ಎಂದು ಚೀನಾ ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಅಮೆರಿಕದ ಸರಕುಗಳಿಗೆ ಚೀನಾದಿಂದಲೂ ಶೇ. 34 ಪ್ರತಿಸುಂಕ ಹೇರಿಕೆ; ಎಲ್ಲಿಯವರೆಗೆ ಹೋಗುತ್ತೆ ಈ ಟ್ರೇಡ್ ವಾರ್?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 60 ದೇಶಗಳ ಮೇಲಿನ ಹೊಸ ಸುಂಕಗಳು ಅಮೆರಿಕದ ಸಮಯ ಬುಧವಾರ ಮಧ್ಯರಾತ್ರಿಯ ನಂತರ ಜಾರಿಗೆ ಬಂದಿದೆ. ಚೀನಾ ಅಮೆರಿಕದ ಸರಕುಗಳ ಮೇಲೆ ಸುಂಕ ಘೋಷಿಸುತ್ತಿದ್ದಂತೆ ಯುಎಸ್ ಸ್ಟಾಕ್ ಸೂಚ್ಯಂಕ ಭವಿಷ್ಯಗಳು ಸಹ ತೀವ್ರ ಕುಸಿತವನ್ನು ಅನುಭವಿಸಿದೆ.
ಟ್ರಂಪ್ ಚೀನಾದ ಸರಕುಗಳ ಮೇಲೆ ಸುಂಕಗಳನ್ನು ಘೋಷಿಸಿದ ನಂತರ, ಚೀನಾ ಕಳೆದ ವಾರ ಏಪ್ರಿಲ್ 10ರಿಂದ ಎಲ್ಲಾ ಯುಎಸ್ ಸರಕುಗಳ ಮೇಲೆ ಶೇ. 34ರಷ್ಟು ಹೆಚ್ಚುವರಿ ಸುಂಕವನ್ನು ವಿಧಿಸುವುದಾಗಿ ಘೋಷಿಸಿತ್ತು. ಬೀಜಿಂಗ್ ಮಧ್ಯಮ ಮತ್ತು ಭಾರವಾದ ಅಪರೂಪದ ಭೂಮಿಯ ರಫ್ತುಗಳನ್ನು ನಿಯಂತ್ರಿಸುವುದಾಗಿಯೂ ಹೇಳಿತ್ತು. ಇವು ಕಂಪ್ಯೂಟರ್ ಚಿಪ್ಸ್ ಮತ್ತು ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಂತಹ ಹೈಟೆಕ್ ಉತ್ಪನ್ನಗಳಲ್ಲಿ ಬಳಸಲಾಗುವ ವಸ್ತುಗಳು. ಇದೀಗ ಈ ಸುಂಕವನ್ನು ಚೀನಾ ಶೇ. 84ಕ್ಕೆ ಏರಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Wed, 9 April 25