ನವದೆಹಲಿ: ಅಮೆರಿಕದ ಎಂಟರ್ಟೈನ್ಮೆಂಟ್ ದೈತ್ಯ ವಾಲ್ಟ್ ಡಿಸ್ನೀ (Walt Disney) ಉದ್ಯೋಗಿಗಳ ವಜಾಗೊಳಿಸುವ ತನ್ನ ಭರಾಟೆ ಮುಂದುವರಿಸುತ್ತಿದೆ. ಫೆಬ್ರುವರಿ ತಿಂಗಳಲ್ಲಿ 7,000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದ ವಾಲ್ಟ್ ಡಿಸ್ನಿ ಇದೀಗ ಮತ್ತೊಂದು ಸುತ್ತಿನ ವಜಾ ಕಾರ್ಯಕ್ಕೆ (Layoffs) ನಿಂತಿದೆ. ಈ ಬಾರಿ 4,000ದಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಬ್ಲೂಮ್ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ. ವಾಲ್ಟ್ ಡಿಸ್ನಿಯ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಶೇ. 15ರಷ್ಟು ಮಂದಿಯನ್ನು ಮನೆಗೆ ಕಳುಹಿಸಲು ಡಿಸ್ನಿ ಮ್ಯಾನೇಜ್ಮೆಂಟ್ ನಿರ್ಧರಿಸಿರುವುದು ತಿಳಿದುಬಂದಿದೆ. ಈಗಾಗಲೇ ಕೆಲಸದಿಂದ ತೆಗೆದುಹಾಕಬಹುದಾದ ಉದ್ಯೋಗಿಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ಫೆಬ್ರುವರಿ 24ರಿಂದಲೇ ನೋಟೀಸ್ ಕೊಡಲಾಗಲಿದೆ ಎಂದೂ ವರದಿ ಹೇಳುತ್ತಿದೆ.
ವಾಲ್ಟ್ ಡಿಸ್ನಿಯ ಟಿವಿ, ಸಿನಿಮಾ, ಥೀಮ್ ಪಾರ್ಕ್, ಕಾರ್ಪೊರೆಟ್ ಪೊಸಿಶನ್ ಮೊದಲಾದ ವಿಭಾಗಳಲ್ಲಿ ಲೇ ಆಫ್ ಮಾಡಲಾಗುತ್ತಿದೆ. ಡಿಸ್ನಿ ಕಾರ್ಯನಿರ್ವಹಿಸುವ ಎಲ್ಲಾ ಪ್ರದೇಶಗಳೂ ಈ ಜಾಬ್ ಕಟ್ ಬಾಧಿಸಲಿದೆ.
ಉದ್ಯೋಗಿಕಡಿತ ಪ್ರಕ್ರಿಯೆಯಲ್ಲಿರುವ ಎಲ್ಲಾ ಕಂಪನಿಗಳಂತೆ ವಾಲ್ಟ್ ಡಿಸ್ನಿ ಕೂಡ ಆರ್ಥಿಕ ದುಸ್ಥಿತಿಯ ಕಾರಣಕ್ಕೆ ವೆಚ್ಚ ಕಡಿತಗೊಳಿಸುವ ದೃಷ್ಟಿಯಿಂದ ಸಿಬ್ಬಂದಿ ಸಂಖ್ಯೆ ಕಡಿಮೆಗೊಳಿಸುತ್ತಿದೆ.
ವಾಲ್ಟ್ ಡಿಸ್ನಿಯ ಒಟ್ಟಾರೆ ವ್ಯವಹಾರದಲ್ಲಿ 5.5 ಬಿಲಿಯನ್ ಡಾಲರ್ನಷ್ಟು (ಸುಮಾರು 45,000 ಕೋಟಿ ರೂ) ಹಣ ಒಂದು ವರ್ಷಕ್ಕೆ ವೆಚ್ಚವಾಗುತ್ತಿದೆ. ಆದಾಯ ಕಡಿಮೆ ಆಗಿರುವುದರಿಂದ ವೆಚ್ಚವನ್ನೂ ಕಡಿಮೆಗೊಳಿಸುವುದಾಗಿ ವಾಲ್ಟ್ ಡಿಸ್ನಿ ಕಂಪನಿ ಹೇಳಿಕೊಂಡಿದೆ. ಕಳೆದ ವರ್ಷದ ಸೆಪ್ಟೆಂಬರ್ ಅಂತ್ಯದ ಕ್ವಾರ್ಟರ್ನಲ್ಲಿ ಡಿಸ್ನಿಯ ಸ್ಟ್ರೀಮಿಂಗ್ ಬ್ಯುಸಿನೆಸ್ನಲ್ಲಿ 1.47 ಬಿಲಿಯನ್ ಡಾಲರ್ ನಷ್ಟ ಅನುಭವಿಸಿತ್ತು. ಹೀಗಾಗಿ, ಉದ್ಯೋಗಕಡಿತದ ಪರ್ವ ಆರಂಭ ಮಾಡಿದೆ. ಈ ವರ್ಷದ ಆರಂಭದಲ್ಲಿ ಡಿಸ್ನಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಸಂಖ್ಯೆ 2,20,000 ಇತ್ತು. ಇದರಲ್ಲಿ 7,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಸುತ್ತಿರುವುದಾಗಿ ವಾಲ್ಟ್ ಡಿಸ್ನಿ ಫೆಬ್ರುವರಿಯಲ್ಲಿ ಘೋಷಿಸಿತ್ತು. ಏಪ್ರಿಲ್ನಲ್ಲಿ 4,000 ಡಿಸ್ನಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಗಳು ಮಾರ್ಚ್ನಲ್ಲಿ ಪ್ರಕಟವಾಗಿದ್ದವು. ಈಗ ಅದು ನಿಜವಾಗುತ್ತಿದೆ.
ವಾಲ್ಟ್ ಡಿಸ್ನಿ ತನ್ನ ವ್ಯವಹಾರ ಗುರಿಯನ್ನು ಪರಿಷ್ಕರಿಸಿದೆ. ಅದಕ್ಕೆ ತಕ್ಕಂತೆ ಸಂಘಟನೆಯಲ್ಲಿ ಬದಲಾವಣೆ ತರುತ್ತಿದೆ. ಜನರಲ್ ಎಂಟರ್ಟೈನ್ಮೆಂಟ್ ಬದಲು ಫ್ರಾಂಚೈಸಿ ಪ್ರಾಪರ್ಟಿಗಳು ಮತ್ತು ಜನಪ್ರಿಯ ಬ್ರ್ಯಾಂಡ್ಗಳತ್ತ ಹೆಚ್ಚು ಗಮನ ಕೊಡುತ್ತಿದೆ. ಹೀಗಾಗಿ, ಡಿಸ್ನಿಯ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ಹೆಚ್ಚು ಜಾಬ್ ಕಟ್ ಆಗುತ್ತಿದೆ.
ಇನ್ನು, ವಾಲ್ಟ್ ಡಿಸ್ನಿ ಕಂಪನಿ ತನ್ನ ಸ್ಟ್ರೀಮಿಂಗ್ ಬ್ಯುಸಿನೆಸ್ ಬದಲು ಆನ್ಲೈನ್ ವಿಡಿಯೋ ಪ್ಲಾಟ್ಫಾರ್ಮ್ನತ್ತ ಗಮನ ಹೆಚ್ಚು ಹರಿಸುತ್ತಿದೆ. ಕಳೆದ ವರ್ಷ ಡಿಸ್ನಿಗೆ ಸ್ಟ್ರೀಮಿಂಗ್ ವ್ಯವಹಾರದಲ್ಲಿ ಬಹಳ ನಷ್ಟವಾಗಿತ್ತು. ಅದರ ಪರಿಣಾಮವಾಗಿ ಬಾಬ್ ಐಗರ್ ಅವರು ವಾಲ್ಟ್ ಡಿಸ್ನಿಯ ಸಿಇಒ ಆಗಿ ಬಂದರು. ಅವರ ಆಗಮನದ ಬಳಿಕ ವಾಲ್ಟ್ ಡಿಸ್ನಿಯಲ್ಲಿ ಉದ್ಯೋಗಕಡಿತದ ಪರ್ವ ಆರಂಭವಾಗಿದೆ. ಹಾಗೆಯೇ, ಡಿಸ್ನಿಯ ವ್ಯವಹಾರ ಕ್ರಮವೂ ಬದಲಾಗುತ್ತಿದೆ.