ನವದೆಹಲಿ, ನವೆಂಬರ್ 27: ವಿಶ್ವಖ್ಯಾತ ಷೇರು ಹೂಡಿಕೆದಾರ ವಾರನ್ ಬಫೆಟ್ (Warren Buffett) ಮಾಲಕತ್ವದ ಬರ್ಕ್ಶೈರ್ ಹಾತವೇ (Berkshire hathaway) ಸಂಸ್ಥೆ ಪೇಟಿಎಂನಲ್ಲಿ ಮಾಡಿದ್ದ ಹೂಡಿಕೆಯನ್ನು ಸಂಪೂರ್ಣವಾಗಿ ಹಿಂಪಡೆದಿದೆ. ಒನ್97 ಕಮ್ಯೂನಿಕೇಶನ್ಸ್ (ಪೇಟಿಎಂ) ಸಂಸ್ಥೆಯಲ್ಲಿ ತಾನು ಹೊಂದಿದ್ದ ಎಲ್ಲಾ 1 ಕೋಟಿಗೂ ಷೇರುಗಳನ್ನೂ ಬರ್ಕ್ಶೈರ್ ಹಾತವೇ ಮಾರಿದೆ. ಘಿಸಾಲೋ ಮಾಸ್ಟರ್ ಫಂಡ್ (Ghisallo Master Fund) ಮತ್ತು ಕಾಪ್ಟ್ಹಾಲ್ ಮಾರಿಶಸ್ ಇನ್ವೆಸ್ಟ್ಮೆಂಟ್ ಸಂಸ್ಥೆ (Copthall Mauritius Investment) ಕ್ರಮವಾಗಿ 42,75,000 ಹಾಗೂ 75,75,529 ಷೇರುಗಳನ್ನು ಖರೀದಿಸಿವೆ. ಒಂದು ಷೇರಿಗೆ ಸರಾಸರಿ 877.2 ರೂನಂತೆ ಇವು ಬಿಕರಿಯಾಗಿವೆ. ಹಾಲಿ ಮಾರುಕಟ್ಟೆ ಬೆಲೆಗಿಂತ ಬಹಳ ಕಡಿಮೆಗೆ ಈ ಷೇರುಗಳ ವಹಿವಾಟು ನಡೆದಿದೆ.
ಸೆಪ್ಟೆಂಬರ್ ಅಂತ್ಯದಲ್ಲಿ ಪೇಟಿಎಂ ಸಂಸ್ಥೆಯ ಶೇ. 2.46ರಷ್ಟು ಪಾಲನ್ನು ಬರ್ಕ್ಶೈರ್ ಹಾಥವೇ ಹೊಂದಿತ್ತು. ಶೇ. 2.46 ಅಂದರೆ ಸುಮಾರು 1,56,23,529 ಷೇರುಗಳನ್ನು ವಾರನ್ ಬಫೆಟ್ ಅವರ ಸಂಸ್ಥೆ ಹೊಂದಿತ್ತು. 2018ರ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 2,179 ಕೋಟಿ ರೂ ಮೊತ್ತಕ್ಕೆ 1,279.7 ರೂನಂತೆ ಪೇಟಿಎಂನ ಷೇರುಗಳನ್ನು ಬರ್ಕ್ಶೈರ್ ಖರೀದಿ ಮಾಡಿತ್ತು. ಆಗಿನ್ನೂ ಪೇಟಿಎಂ ಐಪಿಒ ಆಫರ್ ಮಾಡಿರಲಿಲ್ಲ.
ಇದನ್ನೂ ಓದಿ: ಬೆಂಗಳೂರಿನ ಗರಡಿ ಮನೆಗೆ ಧೋನಿ ದುಡ್ಡು; ಸಾಂಪ್ರದಾಯಿಕ ವ್ಯಾಯಾಮಕ್ಕೆ ಆಧುನಿಕ ಪುನಶ್ಚೇತನ ಕೊಟ್ಟ ತಗ್ಡಾ ರಹೋ
2021ರ ನವೆಂಬರ್ ತಿಂಗಳಲ್ಲಿ ಪೇಟಿಎಂ ಐಪಿಒನಲ್ಲಿ 2,150 ರೂ ಬೆಲೆ ಪಡೆದಿತ್ತು. ಸಂದರ್ಭದಲ್ಲಿ ಬರ್ಕ್ಶೈರ್ 301.70 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಿತ್ತು. ಈಗ 1,371 ಕೋಟಿ ರೂ ಮೊತ್ತದ ಷೇರುಗಳನ್ನು ಮಾರಿದೆ. ಇದರೊಂದಿಗೆ ಒಟ್ಟು 1,672.7 ಕೋಟಿ ರೂ ಹಣ ಗಳಿಸಿದೆ. ಒಟ್ಟಾರೆ, ಪೇಟಿಎಂನಲ್ಲಿ ಹೂಡಿಕೆ ಮಾಡಿದ ಫಲಶ್ರುತಿಯಾಗಿ ಬರ್ಕ್ಶೈರ್ ಹಾಥವೇ ಸಂಸ್ಥೆಗೆ 507 ಕೋಟಿ ರೂ ನಷ್ಟವಾದಂತಾಗಿದೆ.
ಸಾಫ್ಟ್ಬ್ಯಾಂಕ್, ಆಲಿಬಾಬಾ ಗ್ರೂಪ್ ಮೊದಲಾದ ಕೆಲ ಹೂಡಿಕೆದಾರ ಸಂಸ್ಥೆಗಳು ತಮ್ಮ ಕೆಲ ಪೇಟಿಎಂ ಷೇರುಗಳನ್ನು ಮಾರಿವೆ. ಹೂಡಿಕೆದಾರರಿಗೆ ಇರುವ ಲಾಕ್-ಇನ್ ಪೀರಿಯಡ್ ಅವಧಿ ನವೆಂಬರ್ನಲ್ಲಿ ಮುಗಿದಿರುವುದರಿಂದ ಈ ಮಾರಾಟ ನಡೆದಿರುವುದು ತಿಳಿದುಬಂದಿದೆ. ಅಲ್ಲದೇ ಪೇಟಿಎಂನ 2ನೇ ತ್ರೈಮಾಸಿಕ ಅವಧಿಯಲ್ಲಿ 292 ಕೋಟಿ ರೂ ನಷ್ಟವಾಗಿರುವ ವರದಿ ಬಂದಿತ್ತು. ಅದೂ ಕೂಡ ಹೂಡಿಕೆದಾರರು ಹಿಂತೆಗೆಯಲು ಕಾರಣವಾಗಿರಬಹುದು.
ಇದನ್ನೂ ಓದಿ: ಅದಾನಿ-ಹಿಂಡನ್ಬರ್ಗ್ ರಿಪೋರ್ಟ್, ಚೀನಾ ಬೆಂಬಲಿಗರ ಕರ್ಮಕಾಂಡ: ರಾಜ್ಯಸಭಾ ಸಂಸದ ಮಹೇಶ್ ಜೇಠ್ಮಲಾನಿ ಅರೋಪ
ಐಪಿಒನಲ್ಲಿ ಭರ್ಜರಿ ಬೆಲೆ ಪಡೆದಿದ್ದ ಪೇಟಿಎಂ ಆ ಬಳಿಕ ಅಚ್ಚರಿ ರೀತಿಯಲ್ಲಿ ಕುಸಿತ ಕಂಡಿತ್ತು. ಒಂದು ಹಂತದಲ್ಲಿ ಅದರ ಷೇರುಬೆಲೆ 440 ರೂಗೆ ಇಳಿದುಹೋಗಿತ್ತು. ಭಾರೀ ನಿರೀಕ್ಷೆಯಲ್ಲಿ ಪೇಟಿಎಂ ಷೇರು ಮೇಲೆ ಹೂಡಿಕೆ ಮಾಡಿದ್ದವರು ದಿಕ್ಕಾಪಾಲಗುವಂತಾಗಿತ್ತು. ಆದರೆ, 2023ರಲ್ಲಿ ಅದರ ಷೇರು ಕಂಬ್ಯಾಕ್ ಮಾಡಿದೆ. ಕಳೆದ ಗುರುವಾರದಂದು ಅದರ ಷೇರುಬೆಲೆ 922 ರೂ ದಾಟಿತ್ತು. ಈಗ ಸೋಮವಾರ ವಹಿವಾಟು ಅಂತ್ಯದಲ್ಲಿ 895 ರೂ ಬೆಲೆಗೆ ನಿಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ