Layoffs: ಕಷ್ಟಪಟ್ಟು ಕೆಲಸ ಮಾಡಿ ಎಂದು ಹೇಳಿದ ಕೆಲವೇ ವಾರದಲ್ಲಿ 1,650 ಉದ್ಯೋಗಿಗಳು ಮನೆಗೆ; ವೇಫೇರ್ನಲ್ಲಿ ಶೇ. 13ರಷ್ಟು ಲೇ ಆಫ್
Wayfair: ಅಮೆರಿಕದ ಪ್ರಮುಖ ಆನ್ಲೈನ್ ಪೀಠೋಪಕರಣ ಮಾರಾಟ ಸಂಸ್ಥೆ ವೇಫೇರ್ನಲ್ಲಿ ಶೇ. 13ರಷ್ಟು, ಅಂದರೆ 1650 ಮಂದಿಯ ಲೇ ಆಫ್ ಆಗಿದೆ. ವೆಚ್ಚ ಕಡಿತ ಹಾಗೂ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ವೇಫೇರ್ ಈ ಕ್ರಮ ಕೈಗೊಂಡಿದೆ. ಭಾರತ ಮೂಲದ ನೀರಜ್ ಶಾ ಅವರು ವೇಫೇರ್ನ ಸಿಇಒ ಆಗಿದ್ದಾರೆ. ಲೇ ಆಫ್ ಕ್ರಮದ ಬಳಿಕ ವೇಫೇರ್ ಷೇರುಬೆಲೆ ಹೆಚ್ಚಳವಾಗಿದೆ.
ವಾಷಿಂಗ್ಟನ್, ಜನವರಿ 21: ಭಾರತ ಮೂಲದ ನೀರಜ್ ಶಾ ಸಿಇಒ ಆಗಿರುವ ಅಮೆರಿಕದ ನಂಬರ್ ಒನ್ ಪೀಠೋಪಕರಣ (furniture) ಸಂಸ್ಥೆ ವೇಫೇರ್ನಲ್ಲಿ ಮತ್ತೆ ಲೇ ಆಫ್ (Wayfair layoffs) ನಡೆದಿದೆ. 2022ರಲ್ಲಿ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದ್ದ ವೇಫೇರ್ ಸಂಸ್ಥೆ ಇದೀಗ ಶೇ. 13ರಷ್ಟು ಮಂದಿಯನ್ನು ಮನೆಗೆ ಕಳುಹಿಸಿದೆ. ವರದಿ ಪ್ರಕಾರ ವೇಫೇರ್ನಲ್ಲಿ 1,650 ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.
ಯಥಾಪ್ರಕಾರ, ವೆಚ್ಚ ಕಡಿತವೇ ಲೇ ಆಫ್ಗೆ ಕಾರಣ ಎಂದು ಹೇಳಲಾಗಿದೆ. ಈ ಹೊಸ ಕ್ರಮದಿಂದ ವೇಫೇರ್ ಸಂಸ್ಥೆಗೆ ವರ್ಷಕ್ಕೆ 280 ಮಿಲಿಯನ್ ಡಾಲರ್ಗೂ ಹೆಚ್ಚು ಹಣದ ಉಳಿತಾಯವಾಗಲಿದೆ. ಸಂಸ್ಥೆಯ ಈ ನಿರ್ಧಾರವು ಹೂಡಿಕೆದಾರರಿಗೆ ಸ್ವಾಗತಾರ್ಹ ಎನಿಸಿದೆ. ಶುಕ್ರವಾರದ ಷೇರು ಮಾರುಕಟ್ಟೆ ವ್ಯವಹಾರ ಅಂತ್ಯಗೊಂಡಾಗ ವೇಫೇರ್ನ ಷೇರುಬೆಲೆ ಶೇ. 16ರಷ್ಟು ಹೆಚ್ಚಾಗಿತ್ತು.
ಈ ಹಿಂದೆ ಸಿಇಒ ನೀರತ್ ಶಾ ಅವರು ಉದ್ಯೋಗಿಗಳಿಗೆ ಪತ್ರ ಬರೆದು, ಹೆಚ್ಚು ಶ್ರಮ ಹಾಕಿ ಕೆಲಸ ಮಾಡುವಂತೆ ಸೂಚಿಸಿದ್ದರು. ಅದು ಮುಂಬರುವ ಸುನಾಮಿಗೆ ಕುರುಹು ಎಂದು ಉದ್ಯೋಗಿಗಳಿಗೆ ಗೊತ್ತಾಗುವಷ್ಟರಲ್ಲಿ, ಕೆಲವೇ ವಾರದಲ್ಲಿ ಶೇ. 13ರಷ್ಟು ಮಂದಿ ಕೆಲಸ ಕಳೆದುಕೊಂಡಿದ್ದಾರೆ.
2022ರಲ್ಲಿ ವೆಚ್ಚ ಕಡಿತಕ್ಕಾಗಿಯೇ ವೇಫೇರ್ ಶೇ. 5ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. 2023ರ ಆರಂಭದಲ್ಲಿ ಸಂಸ್ಥೆಯಲ್ಲಿ ಉದ್ಯೋಗಿಗಳ ಸಂಖ್ಯೆ 14,000 ಇತ್ತು. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾಗ ಬಹಳ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಿಕೊಂಡಿದ್ದು ಕಂಪನಿಗೆ ಹೊರೆಯಾಗಿತ್ತು ಎಂದು ಸಿಇಒ ನೀರಜ್ ಶಾ, ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನೀರಜ್ ಶಾ ಬರೆದ ಪತ್ರದ ಪ್ರಕಾರ, 2017-19ರ ಅವಧಿಯಲ್ಲಿ ವೇಫೇರ್ ಬಹಳಷ್ಟು ನೇಮಕಾತಿ ಮಾಡಿಕೊಂಡಿತ್ತು. ಬಹಳಷ್ಟು ಹೊಸ ಹೊಸ ಐಡಿಯಾಗಳು, ಯೋಜನೆಗಳು ವೇಫೇರ್ ತಂಡ ಹಿಗ್ಗುವಂತೆ ಮಾಡಿದ್ದವು. ಕೋವಿಡ್ಗೆ ಸ್ವಲ್ಪ ಮುಂಚೆ ತಂಡದ ಸಂಖ್ಯೆ ಇಳಿಸಲಾಗಿತ್ತು. ಕೋವಿಡ್ ಹಾಗೂ ಲಾಕ್ಡೌನ್ ಆದ ಬಳಿಕ ಬಿಸಿನೆಸ್ ಮತ್ತೆ ಗರಿಗೆದರಿತ್ತು. ಮತ್ತೆ ನೇಮಕಾತಿ ನಡೆದವು. ಆದರೆ, 2022ರಲ್ಲಿ ವೇಫೇರ್ಗೆ ಇದು ವರ್ಕೌಟ್ ಆದ ಹಾಗೆ ಅನಿಸಿಲ್ಲ. ಮತ್ತೆ ಹೆಡ್ಕೌಂಟ್ ಕಡಿಮೆ ಮಾಡಿದೆ.
ವೇಫೇರ್ ಸಂಸ್ಥೆಯ ಮುಖ್ಯ ಕಚೇರಿ ಅಮೆರಿಕದ ಮಸಾಚುಸೆಟ್ಸ್ನ ಬೋಸ್ಟಾನ್ನಲ್ಲಿ ಇದೆ. ಯೂರೋಪ್, ಭಾರತದಲ್ಲೂ ಅದರ ಕಚೇರಿಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ