ಸ್ವಂತ ಮನೆ ಕಟ್ಟಬೇಕು ಅಥವಾ ಖರೀದಿಸಬೇಕು ಎಂಬುದು ಯಾರಿಗೆ ಕನಸಲ್ಲ ಹೇಳಿ? ಜನರು ತಮ್ಮ ಕನಸಿನ ಮನೆಯ ಸಲುವಾಗಿಯೇ ಜೀವಮಾನದಲ್ಲಿ ಮಾಡುವ ಸಾಲಗಳ ದೊಡ್ಡ ಭಾಗವನ್ನು ಬಳಸುತ್ತಾರೆ ಅಥವಾ ದೊಡ್ಡ ಮೊತ್ತದ ಸಾಲಗಳನ್ನು ತೆಗೆದುಕೊಳ್ಳುವುದರಿಂದ ಇದು ಪ್ರಮುಖ ನಿರ್ಧಾರ ಆಗುತ್ತದೆ. ಸರ್ಕಾರವು ಜಂಟಿ ಆಸ್ತಿ ಮಾಲೀಕತ್ವವನ್ನು ಉತ್ತೇಜಿಸುತ್ತಿದ್ದರೂ ಬಹಳಷ್ಟು ಜನರು ಆ ಆಯ್ಕೆ ಮಾಡಿಕೊಳ್ಳುವುದಿಲ್ಲ. ಜಂಟಿ ಆಸ್ತಿ ಮಾಲೀಕತ್ವವು ಸಹ-ಮಾಲೀಕರಿಗೆ ಅನೇಕ ವಿಧಗಳಲ್ಲಿ ಪ್ರಯೋಜನಕಾರಿ ಆಗಿದೆ. ಸಹ- ಅರ್ಜಿದಾರರು ಸಹ-ಮಾಲೀಕರಾಗಿ ಇರುವುದು ಅನಿವಾರ್ಯ ಅಲ್ಲವಾದರೂ ಕೆಲವು ಬ್ಯಾಂಕ್‌ಗಳು ಸಹ-ಮಾಲೀಕರನ್ನು ಸಹ-ಅರ್ಜಿದಾರರಾಗಿ ಇರಲು ಸೂಚಿಸುತ್ತವೆ. ಸಹ-ಮಾಲೀಕರು ಆಸ್ತಿಯಲ್ಲಿ ಪಾಲನ್ನು ಹೊಂದಿದ್ದರೆ ಪ್ರಾಥಮಿಕ ಅರ್ಜಿದಾರರು ಸಾಲವನ್ನು ಕಟ್ಟಲು ವಿಫಲವಾದರೆ ಅದನ್ನು ಮರುಪಾವತಿಸಲು ಮಾತ್ರ ಸಹ-ಅರ್ಜಿದಾರರೂ ಜವಾಬ್ದಾರರಾಗಿರುತ್ತಾರೆ. ಆದರೂ ಹೋಮ್ ಲೋನ್‌ನಲ್ಲಿ ತೆರಿಗೆ ಪ್ರಯೋಜನ ಪಡೆಯಲು ಸಹ-ಅರ್ಜಿದಾರರಿಬ್ಬರೂ ಸಹ-ಮಾಲೀಕರಾಗಿರಬೇಕು.
ತೆರಿಗೆ ಪ್ರಯೋಜನ
ತೆರಿಗೆ ಪ್ರಯೋಜನ ಪಡೆಯಲು ಅನೇಕರು ಜಂಟಿ ಸಾಲ ಆರಿಸಿಕೊಳ್ಳುತ್ತಾರೆ. ಜಂಟಿ ಗೃಹ ಸಾಲದೊಂದಿಗೆ ಹೆಚ್ಚಿನ ತೆರಿಗೆ ರಿಯಾಯಿತಿಯನ್ನು ಪಡೆಯಬಹುದು. ಉದಾಹರಣೆಗೆ, ಇಬ್ಬರೂ ಸಂಗಾತಿಗಳು ಪ್ರತ್ಯೇಕವಾಗಿ ಸೆಕ್ಷನ್ 80C ತೆರಿಗೆ ಲಾಭವನ್ನು ರೂ. 1.5 ಲಕ್ಷದ ಅಸಲು ಮೊತ್ತದ ಮೇಲೆ ಪಡೆಯಬಹುದು. ಆದ್ದರಿಂದ ಜಂಟಿ ಗೃಹ ಸಾಲದೊಂದಿಗೆ ಹೆಚ್ಚುವರಿಯಾಗಿ ತೆರಿಗೆ ಪ್ರಯೋಜನ ಪಡೆಯಬಹುದು ಮತ್ತು ಸೆಕ್ಷನ್ 80C ಅಡಿಯಲ್ಲಿ ಮಿತಿಯನ್ನು ಜಂಟಿಯಾಗಿ ರೂ. 3 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ಅಲ್ಲದೆ ಸೆಕ್ಷನ್ 24ರ ಅಡಿಯಲ್ಲಿ ಸ್ವಂತ ಇರುವ ಮನೆಗೆ ಪಾವತಿಸಿದ ಬಡ್ಡಿಯ ಮೇಲೆ ಜಂಟಿ ಗೃಹ ಸಾಲದ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ಕಡಿತವನ್ನು 4 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ.
ಸಾಲದ ಮಿತಿ
ಗೃಹ ಸಾಲಕ್ಕೆ ಜಂಟಿಯಾಗಿ ಅರ್ಜಿ ಸಲ್ಲಿಸಿದಾಗ ಬ್ಯಾಂಕ್ನಿಂದ ಸ್ವಂತ ಆದಾಯ ಹಾಗೂ ಸಂಗಾತಿಯ ಆದಾಯವನ್ನು ಪರಿಗಣಿಸಿ, ಮಂಜೂರು ಮಾಡಬಹುದಾದ ಗರಿಷ್ಠ ಮೊತ್ತದ ಸಾಲವನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ಗೃಹ ಸಾಲಕ್ಕಾಗಿ ವೈಯಕ್ತಿಕ ಅರ್ಹತೆ ರೂ. 30 ಲಕ್ಷವಾಗಿದ್ದರೆ, ಸಂಗಾತಿಯ ವೈಯಕ್ತಿಕ ಮಿತಿ ರೂ. 30 ಲಕ್ಷವಾಗಿದ್ದರೆ ಒಟ್ಟಾರೆ ಗರಿಷ್ಠ ಮಿತಿ ರೂ. 60 ಲಕ್ಷಕ್ಕೆ ಹೋಗಬಹುದು. ಇದರರ್ಥ ಜಂಟಿ ಮಾಲೀಕತ್ವದಲ್ಲಿ ದೊಡ್ಡ ಮನೆಯನ್ನು ಖರೀದಿಸಬಹುದು.
ಕಡಿಮೆ ಬಡ್ಡಿ ದರ
ಭಾರತದ ಅತಿದೊಡ್ಡ ಬ್ಯಾಂಕ್ ಆದ ಎಸ್‌ಬಿಐ ಸೇರಿದಂತೆ ಹಲವಾರು ಬ್ಯಾಂಕ್‌ಗಳು ಮಹಿಳಾ ಅರ್ಜಿದಾರರಿಗೆ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿವೆ. ಆದ್ದರಿಂದ ಸಂಗಾತಿಯನ್ನು ಗೃಹ ಸಾಲದಲ್ಲಿ ಪ್ರಾಥಮಿಕ ಅರ್ಜಿದಾರರನ್ನಾಗಿ ಮಾಡಿದರೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಪಡೆಯಬಹುದು. ಅದೇ ರೀತಿ ಕೆಲವು ರಾಜ್ಯಗಳು ಮಹಿಳೆಯರು ಮತ್ತು ದಂಪತಿಗೆ ಮನೆಯ ನೋಂದಣಿಗಾಗಿ ಮುದ್ರಾಂಕ ಶುಲ್ಕದ ಮೇಲೆ ರಿಯಾಯಿತಿಯನ್ನು ನೀಡುತ್ತವೆ. ಮನೆಯ ನೋಂದಣಿಗೆ ಅಗತ್ಯವಿರುವ ಮುದ್ರಾಂಕ ಶುಲ್ಕದಂತಹ ಇತರ ಶುಲ್ಕಗಳು ಹೋಲಿಕೆ ಮಾಡಿದರೆ ಮಹಿಳೆಯರಿಗೆ ಕಡಿಮೆ ಆಗುತ್ತದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ಇದು ಬದಲಾಗುತ್ತವೆ.
ಸಾಲದ ಅರ್ಹತೆ
ಆಸ್ತಿಯ ಸಹ-ಮಾಲೀಕತ್ವದ ಒಂದು ದೊಡ್ಡ ಪ್ರಯೋಜನ ಅಂದರೆ ಅದು ಸಾಲದ ಅರ್ಹತೆಯನ್ನು ಹೆಚ್ಚಿಸುತ್ತದೆ. ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಬ್ಯಾಂಕ್ ಅರ್ಜಿದಾರರ ಸಂಯೋಜಿತ ಆದಾಯವನ್ನು ನೋಡುತ್ತದೆ. ಇದು ಸಾಲವನ್ನು ಮಂಜೂರು ಮಾಡುವ ಸಂಭವನೀಯತೆಯನ್ನು ಹೆಚ್ಚಿಸುತ್ತದೆ.
ಉತ್ತರಾಧಿಕಾರ
ಒಬ್ಬರೇ ಮಾಲೀಕತ್ವದ ಸಂದರ್ಭದಲ್ಲಿ ಉತ್ತರಾಧಿಕಾರವು ತುಂಬ ಕಷ್ಟಕರವಾಗಿರುತ್ತದೆ ಮತ್ತು ಕೆಲವೊಮ್ಮೆ ಸಮಯ ತೆಗೆದುಕೊಳ್ಳುತ್ತದೆ. ಕೆಲ ಬಾರಿ ಆಸ್ತಿಯನ್ನು ಪಡೆಯಲು ಅನೈತಿಕ ಮಾರ್ಗಗಳನ್ನು ಸಹ ಬಳಸಲಾಗುತ್ತದೆ. ಒಬ್ಬ ವ್ಯಕ್ತಿಯು ಜಂಟಿ ಮಾಲೀಕತ್ವ ಹೊಂದಿದ್ದರೆ ಆಸ್ತಿಯನ್ನು ತಾನಾಗಿಯೇ ಸಹ-ಮಾಲೀಕರಿಗೆ ವರ್ಗಾಯಿಸುವುದರಿಂದ ಇದನ್ನು ತಪ್ಪಿಸಬಹುದು.
ಇದನ್ನೂ ಓದಿ: Home Loan EMI: ಅಬ್ಬಾ! ಹೋಮ್ ಲೋನ್ ಮರುಪಾವತಿಯಲ್ಲೂ ಎಷ್ಟೊಂದು ಬಗೆ?