ಪೆಟ್ರೋಲ್- ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಕ್ಕೆ ಬಿಲ್ಕುಲ್ ಸಾಧ್ಯವಿಲ್ಲ ಎಂದು ಹೇಳಿದೆ ಕೇಂದ್ರ ಸರ್ಕಾರ. ಕಡಿಮೆ ದರಕ್ಕೆ ಇಂಧನ ನೀಡುವ ನಿಟ್ಟಿನಲ್ಲಿ ಈ ಹಿಂದಿನ ಯುಪಿಎ ಸರ್ಕಾರ ತೈಲ ಬಾಂಡ್‌ಗಳನ್ನು ವಿತರಿಸಿದ್ದರಿಂದ ಅದನ್ನು ಪಾವತಿಸುವ ಹೊಣೆ ಈಗ ಎನ್ಡಿಎ ಸರ್ಕಾರಕ್ಕಿದೆ. ಆದ್ದರಿಂದ ತೆರಿಗೆ ಹೊರೆ ಕಡಿಮೆ ಮಾಡಲು ಆಗಲ್ಲ ಅನ್ನೋದು ಕೇಂದ್ರ ಸರ್ಕಾರದ ವಾದ. ಇಂಧನ ದರಗಳ ನಿಯಂತ್ರಣವನ್ನು ಬಿಟ್ಟುಕೊಡುವ ಮುನ್ನ, ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಡುಗೆ ಅನಿಲ ಸೇರಿದಂತೆ ಸೀಮೆಎಣ್ಣೆಯನ್ನು ಯುಪಿಎ ಆಡಳಿತಾವಧಿಯಲ್ಲಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ನೇರವಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಬಜೆಟ್ನಿಂದ ಸಬ್ಸಿಡಿ ಪಾವತಿಸುವ ಬದಲಿಗೆ ಆಗಿನ ಸರ್ಕಾರವು 1.34 ಲಕ್ಷ ಕೋಟಿ ರೂಪಾಯಿಯ ತೈಲ ಬಾಂಡ್ ವಿತರಿಸಿತ್ತು. ವಿತ್ತೀಯ ಕೊರತೆ ಆಗಬಾರದು ಎಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಈ ಬಾಂಡ್ಗಳ ಅಸಲು ಮತ್ತು ಬಡ್ಡಿಯ ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಹಣದ ಮೂಲಕ್ಕಾಗಿ ಹೆಚ್ಚಿನ ಅಬಕಾರಿ ಸುಂಕವನ್ನು ವಿಧಿಸಬೇಕಾಗಿದೆ ಎಂಬುದು ಸರ್ಕಾರದ ವಾದವಾಗಿದೆ.
ಅಂದಹಾಗೆ, ಎನ್ಡಿಎ ಸರ್ಕಾರ ಕೂಡ ಯುಪಿಎ ಅವಧಿಯಲ್ಲಿ ಅನುಸರಿಸಿದ ತಂತ್ರವನ್ನೇ ಅಳವಡಿಸಿಕೊಂಡಿದೆ. ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು ಮತ್ತು ಇತರ ಸಂಸ್ಥೆಗಳಿಗೆ ಬಂಡವಾಳ ಪೂರೈಸುವುದಕ್ಕಾಗಿ 3.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಬಾಂಡ್ ವಿತರಣೆ ಮಾಡಿದೆ. ಈ ಬಾಂಡ್‌ಗಳು 2028ರಿಂದ 2035ರ ಮಧ್ಯೆ ರಿಡೆಂಪ್ಷನ್ ಆಗುತ್ತದೆ.
ಸರ್ಕಾರದ ವಾದ ಏನು?
ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿ, 2012-13ರಲ್ಲಿ ಯುಪಿಎ ಸರ್ಕಾರದಿಂದ ತೈಲ ಬೆಲೆ ಕಡಿಮೆ ಮಾಡಿದ್ದಕ್ಕಾಗಿ ಇವತ್ತಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬೆಲೆ ತೆರಬೇಕಾಗಿದೆ ಎಂದಿದ್ದರು. ಅವರು ಹೇಳಿದ್ದೇನೆಂದರೆ, ಈ ಹಿಂದಿನ ಸರ್ಕಾರವು ತೈಲ ನೆಲೆ ಇಳಿಕೆ ಮಾಡಿ, ಆಯಿಲ್ ಬಾಂಡ್‌ಗಳನ್ನು ಸದ್ಯದ ಸರ್ಕಾರಕ್ಕೆ ಬಿಟ್ಟುಹೋಗಿದೆ. “ನಾವು ಅಷ್ಟೊಂದು ತಂತ್ರ ಮಾಡುವುದಿಲ್ಲ. ಅವರು ವಿತರಿಸಿದ ತೈಲ ಬಾಂಡ್ನ ಅಸಲು ಮೊತ್ತ 1 ಲಕ್ಷ ಕೋಟಿ ರೂಪಾಯಿ. ಮತ್ತು ಕಳೆದ ಏಳು ಹಣಕಾಸು ವರ್ಷದಲ್ಲಿ ಸರ್ಕಾರದಿಂದ ವಾರ್ಷಿಕವಾಗಿ 9000 ಕೋಟಿ ರೂಪಾಯಿ ಬಡ್ಡಿಯನ್ನು ಕಟ್ಟಲಾಗುತ್ತಿದೆ. ತೈಲ ಬಾಂಡ್ಗಳಿಗೆ ಕಟ್ಟಬೇಕಾದ ಹೊರೆ ಇಲ್ಲದಿದ್ದಲ್ಲಿ ಪೆಟ್ರೋಲ್- ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಸಬಹುದಿತ್ತು,” ಎಂದಿದ್ದಾರೆ ನಿರ್ಮಲಾ.
ತೈಲ ಬೆಲೆ ನಿಯಂತ್ರಣ ಬಿಟ್ಟುಕೊಟ್ಟಿದ್ದೇಕೆ? ಗ್ರಾಹಕರ ಮೇಲೆ ಪರಿಣಾಮ ಏನು?
ತೈಲ ಬೆಲೆಯ ನಿಯಂತ್ರಣವನ್ನು ಬಿಡುವುದು ಹಂತ ಹಂತವಾದ ಪ್ರಯತ್ನ. 2002ರಲ್ಲಿ ಸರ್ಕಾರವು ಏವಿಯೇಷನ್ ಟರ್ಬೈನ್ ಫ್ಯುಯೆಲ್ ನಿಯಂತ್ರಣ ಬಿಟ್ಟುಕೊಟ್ಟಿತು. ಪೆಟ್ರೋಲ್ 2010ರಲ್ಲಿ ಹಾಗೂ ಡೀಸೆಲ್ 2014ರಲ್ಲಿ ಬಿಡಲಾಯಿತು. ಅದಕ್ಕೂ ಮುಂಚೆ ಬೆಲೆ ನಿಗದಿಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುತ್ತಿತ್ತು. ಸರ್ಕಾರ ಹೇಳಿದ ದರಕ್ಕೆ ರೀಟೇಲರ್ಗಳು ಪೆಟ್ರೋಲ್- ಡೀಸೆಲ್ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ತೈಲ ಮಾರ್ಕೆಟಿಂಗ್ ಕಂಪೆನಿಗಳಿಗೆ ಕಡಿಮೆ ವಸೂಲಾಗುತ್ತಿತ್ತು. ಸರ್ಕಾರದಿಂದ ಅದಕ್ಕೆ ಪರಿಹಾರ ಒದಗಿಸಬೇಕಿತ್ತು. ಮಾರುಕಟ್ಟೆ ದರಕ್ಕೆ ಜೋಡಣೆ ಮಾಡುವ ಉದ್ದೇಶಕ್ಕೆ ಅದರ ನಿಯಂತ್ರಣವನ್ನು ಬಿಟ್ಟುಕೊಡಲಾಯಿತು. ಸಬ್ಸಿಡಿ ನೀಡುವುದರಿಂದ ಸರ್ಕಾರದ ಮೇಲೆ ಬೀಳುತ್ತಿದ್ದ ಹೊರೆ ಕಡಿಮೆ ಮಾಡಿಕೊಳ್ಳಲು ಹೀಗೆ ಮಾಡಲಾಯಿತು. ಅದರ ಜತೆಗೆ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಆದಾಗ ಅದರ ಅನುಕೂಲ ಗ್ರಾಹಕರಿಗೆ ಸಿಗಲಿ ಎಂಬ ಉದ್ದೇಶ ಇತ್ತು.
ಜಾಗತಿಕ ಕಚ್ಚಾ ತೈಲ ಬೆಲೆಗೆ ದೇಶೀಯ ತೈಲ ದರ ಜೋಡಣೆ ಆದರೂ ಅದರ ಅನುಕೂಲ ಭಾರತೀಯ ಗ್ರಾಹಕರಿಗೆ ದೊರೆಯಲಿಲ್ಲ. ಏಕೆಂದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ತೆರಿಗೆಗಳನ್ನು ಹಾಕಲು ಆರಂಭಿಸಿದವು. ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಶುಲ್ಕಗಳನ್ನು ವಿಧಿಸಿದವು. ಇದರಿಂದಾಗಿ ಒಂದೋ ತಾವೀಗಾಗಲೇ ಪಾವತಿಸುತ್ತಿರುವಷ್ಟನ್ನೇ ಅಥವಾ ಅದಕ್ಕಿಂತ ಹೆಚ್ಚಿನದನ್ನೇ ಭರಿಸುವಂತಾಯಿತು. ದರ ನಿಯಂತ್ರಣವನ್ನು ಸರ್ಕಾರವು ಬಿಟ್ಟುಕೊಡುವುದರಿಂದ ಇಂಡಿಯನ್ ಆಯಿಲ್, ಎಚ್ಪಿಸಿಎಲ್ ಅಥವಾ ಬಿಪಿಸಿಎಲ್ನಂಥವಕ್ಕೆ ತಮ್ಮ ಸ್ವಂತ ವೆಚ್ಚ ಮತ್ತು ಲಾಭವನ್ನು ಲೆಕ್ಕ ಹಾಕಿಕೊಂಡು ದರ ನಿಗದಿ ಮಾಡುವುದಕ್ಕೆ ಸ್ವಾತಂತ್ರ್ಯ ದೊರೆಯಿತು. ಆದರೂ ಈ ರೀತಿಯಲ್ಲಿ ದರ ನಿರ್ಧಾರ ಬಿಟ್ಟುಕೊಡುವುದರ ಅತಿ ದೊಡ್ಡ ಫಲಾನುಭವಿಯಾಗಿ ಸರ್ಕಾರವೇ ಉಳಿದುಕೊಂಡಿತು.
ಸರ್ಕಾರ ವಸೂಲಿ ಮಾಡಿದ ತೆರಿಗೆ/ಸುಂಕ ಎಷ್ಟು?
2020-21ರಲ್ಲಿ ಸರ್ಕಾರವು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಮನ್ನಗಳ ಮೂಲಕ ಸಂಗ್ರಹಿಸಿದ ತೆರಿಗೆ ಆದಾಯವು ಶೇ 45.6ರಷ್ಟು ಹೆಚ್ಚಳವಾಗಿ 4.18 ಲಕ್ಷ ಕೋಟಿ ರೂಪಾಯಿ ಮುಟ್ಟಿತು. ಅಬಕಾರಿ ಸುಂಕವು ವರ್ಷದಿಂದ ವರ್ಷದ ಲೆಕ್ಕಾಚಾರಕ್ಕೆ ಶೇ 74ರಷ್ಟು ಹೆಚ್ಚಳವಾಗಿ 2020-21ರಲ್ಲಿ 3.45 ಲಕ್ಷ ಕೋಟಿ ರೂಪಾಯಿ ಆಯಿತು. ಕೇಂದ್ರ ಸರ್ಕಾರಕ್ಕೆ ಹೋಗುತ್ತಿದ್ದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಆದಾಯವು 2016-17ರಲ್ಲಿ 2.73 ಲಕ್ಷ ಕೋಟಿ ಇದ್ದದ್ದು 2019-20ರಲ್ಲಿ 2.87 ಲಕ್ಷ ಕೋಟಿ ಆಯಿತು. ಇನ್ನು ರಾಜ್ಯಗಳ ತೆರಿಗೆ ಆದಾಯವು 2019-20ರಲ್ಲಿ 2.20 ಲಕ್ಷ ಕೋಟಿ ಇದ್ದ್ದದ್ದು ಶೇ 1.6ರಷ್ಟು ಇಳಿಕೆ ಕಂಡು, 2020-21ನೇ ಸಾಲಿನಲ್ಲಿ 2.17 ಲಕ್ಷ ಕೋಟಿ ರೂಪಾಯಿ ಆಯಿತು. ದೆಹಲಿಯಲ್ಲಿನ ಬೆಲೆಯನ್ನು ಮಾನದಂಡವಾಗಿ ಇಟ್ಟುಕೊಂಡು ಹೇಳುವುದಾದರೆ, ಪೆಟ್ರೋಲ್ನ ರೀಟೇಲ್ ಬೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇವೆರಡೂ ಸೇರಿ ವಿಧಿಸುವ ಶುಲ್ಕದ ಪಾಲೇ ಶೇ 55.4ರಷ್ಟಾಗುತ್ತದೆ ಹಾಗೂ ಡೀಸೆಲ್ ಮೇಲೆ ಶೇ 50ರಷ್ಟಾಗುತ್ತದೆ.
ಪೆಟ್ರೋಲ್ ರೀಟೇಲ್ ದರದಲ್ಲಿ ಕೇಂದ್ರ ಸರ್ಕಾರದ ಶುಲ್ಕಗಳ ಪಾಲು ಶೇ 32.3 ಇದ್ದರೆ, ಡೀಸೆಲ್ ಮೇಲೆ ಶೇ 35.4ರಷ್ಟಿದೆ. ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್- ಡೀಸೆಲ್ ದರದಲ್ಲಿ ಸ್ಥಿರವಾಗಿ ಏರಿಕೆ ಆಗುತ್ತಲೇ ಇದೆ.ಈ ವರ್ಷದಿಂದ ಆರಂಭದಿಂದ ಇಲ್ಲಿಯ ತನಕ ದೇಶದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆಯಲ್ಲಿ ಶೇ 21.7ರಷ್ಟು ಹೆಚ್ಚಳವಾಗಿದೆ. 2021-22ರಲ್ಲಿ ಪೆಟ್ರೋಲ್ ಬೆಲೆ 39 ಸಲ ಏರಿಕೆ ಮಾಡಿದ್ದು, ಒಮ್ಮೆ ಇಳಿಸಲಾಗಿದೆ. ಇನ್ನು ಡೀಸೆಲ್ ದರವನ್ನು 36 ಬಾರಿ ಏರಿಸಿ, ಎರಡು ಬಾರಿ ಇಳಿಕೆ ಮಾಡಲಾಗಿದೆ. 2020-21ರಲ್ಲಿ ಪೆಟ್ರೋಲ್ ದರ 76 ಬಾರಿ ಹೆಚ್ಚಳವಾಗಿ, 10 ಸಲ ಇಳಿಸಲಾಗಿತ್ತು. ಇನ್ನು ಡೀಸೆಸ್ 73 ಬಾರಿ ಏರಿಸಿ, 24 ಸಲ ಇಳಿಕೆ ಮಾಡಲಾಗಿತ್ತು.
ತೈಲ ಬಾಂಡ್ಗಾಗಿ ಸರ್ಕಾರ ಪಾವತಿ ಮಾಡಿರುವುದೆಷ್ಟು?
ಕಳೆದ ಏಳು ವರ್ಷದಲ್ಲಿ ಸರ್ಕಾರ ಪಾವತಿ ಮಾಡಿರುವ ಬಡ್ಡಿ ಮೊತ್ತ ಒಟ್ಟು ಸೇರಿ 70,195.72 ಕೋಟಿ ರೂಪಾಯಿ ಆಗುತ್ತದೆ. 1.34 ಲಕ್ಷ ಕೋಟಿ ರೂಪಾಯಿಯ ಒಟ್ಟು ಆಯಿಲ್ ಬಾಂಡ್ನಲ್ಲಿ 3500 ಕೋಟಿ ರೂಪಾಯಿ ಅಸಲನ್ನು ಪಾವತಿಸಲಾಗಿದೆ/ ಇನ್ನು ಬಾಕಿ ಮೊತ್ತವನ್ನು ಪ್ರಸಕ್ತ ಹಣಕಾಸು ವರ್ಷದಿಂದ 2025-26ರ ತನಕ ಮರುಪಾವತಿಸಬೇಕು. ಈ ವರ್ಷದಲ್ಲಿ 10 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಪಾವತಿಸಬೇಕು. 31,250 ಕೋಟಿ ರೂಪಾಯಿ 2023-24ರಲ್ಲಿ, 52,860 ಕೋಟಿ ರೂ. 2024-25ರಲ್ಲಿ, 36,913 ಕೋಟಿ ರೂ. 2025-26ರಲ್ಲಿ ಮರುಪಾವತಿಸಬೇಕು. ಆದರೆ ಇದು ಈಗ ಸರ್ಕಾರ ಸಂಗ್ರಹಿಸುತ್ತಿರುವ 3.45 ಲಕ್ಷ ಕೋಟಿ ರೂಪಾಯಿಯ ಹತ್ತನೇ ಒಂದು ಭಾಗ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚಾಗುತ್ತದೆ.
ಬ್ಯಾಂಕ್ಗಳಿಗೆ ಈಗಿನ ಸರ್ಕಾರದ ಬಾಂಡ್ ಸ್ಟ್ರಾಟೆಜಿ ಏನು?
ಅಕ್ಟೋಬರ್ 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮರು ಸಾಲದ ಬಾಂಡ್‌ಗಳನ್ನು ಒಂದು ಸಲದ ಕ್ರಮವಾಗಿ ನೀಡಲಾಗುವುದು ಎಂದು ಘೋಷಿಸಿದ್ದರು. ಆ ಸಂದರ್ಭದಲ್ಲಿ ಪಿಎಸ್‌ಯು ಬ್ಯಾಂಕ್ಗಳಿಗೆ ಬಂಡವಾಳ ಪೂರೈಕೆ ಮಾಡಿ, ಬ್ಯಾಡ್ ಲೋನ್ಗಳ ಒತ್ತಡದಿಂದ ಹೊರತರಬೇಕಾಗಿತ್ತು. ಈ ಇನ್ಸ್ಟ್ರುಮೆಂಟ್ ಹಣಕಾಸಿನ ಕೊರತೆಯ (Fiscal Deficit) ಮೇಲೆ ಪರಿಣಾಮ ಬೀರುವುದಿಲ್ಲ. ಬಡ್ಡಿ ಪಾವತಿ ಮಾತ್ರ ಕೊರತೆಯ ಲೆಕ್ಕಾಚಾರದಲ್ಲಿ ಕಂಡುಬರುತ್ತದೆ. ಆರಂಭದಲ್ಲಿ ಸರ್ಕಾರವು ಒಟ್ಟು 1.35 ಲಕ್ಷ ಕೋಟಿ ರೂಪಾಯಿ ಮೌಲ್ಯದ ರೀಕ್ಯಾಪ್ ಬಾಂಡ್‌ಗಳನ್ನು ನೀಡಲಾಗುವುದು ಎಂದು ಸೂಚಿಸಿತ್ತು, ಆದರೆ ಇದು ನಂತರ ವಾಡಿಕೆ ಮತ್ತು ಅನುಕೂಲಕರ ಅಭ್ಯಾಸ ಎಂಬಂತೆ ಆಯಿತು.
ಸರ್ಕಾರವು ಈವರೆಗೆ ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ, EXIM ಬ್ಯಾಂಕ್, IDBI ಬ್ಯಾಂಕ್ ಮತ್ತು IIFCLಗೆ 3.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮರು ಬಂಡವಾಳ ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ. ಈ ಪೈಕಿ ರೂ. 5,050 ಕೋಟಿ ಎಕ್ಸಿಮ್ ಬ್ಯಾಂಕ್‌ಗೆ ಮರು ಬಂಡವಾಳ ಬಾಂಡ್‌ಗಳು, ಐಡಿಬಿಐ ಬ್ಯಾಂಕ್‌ಗೆ ರೂ. 4,557 ಕೋಟಿ, ಐಐಎಫ್‌ಸಿಎಲ್‌ಗೆ ರೂ. 5297.60 ಕೋಟಿ ಮತ್ತು ಐಡಿಬಿಐ ಬ್ಯಾಂಕ್‌ಗೆ ಬಡ್ಡಿ ರಹಿತ ಬಾಂಡ್‌ಗಳಿಗಾಗಿ ರೂ. 3,876 ಕೋಟಿ ನೀಡಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳಿಗೆ ನೀಡಲಾದ 2.91 ಲಕ್ಷ ಕೋಟಿ ಮೌಲ್ಯದ ವಿಶೇಷ ಭದ್ರತೆಗಳು 2028ರಿಂದ ಮೆಚ್ಯೂರಿಟಿ (ಪಕ್ವವಾಗಲು) ಆರಂಭವಾಗುತ್ತದೆ.
(ಮಾಹಿತಿ ಮೂಲ: ಇಂಡಿಯನ್ ಎಕ್ಸ್ಪ್ರೆಸ್)
ಇದನ್ನೂ ಓದಿ: Petrol-Diesel price: ಮನಮೋಹನ್ ಸಿಂಗ್ ಸರ್ಕಾರ ತಪ್ಪಿಗೆ ಪೆಟ್ರೋಲ್ಗೆ ನಾವು ಬೆಲೆ ತೆರುತ್ತಿದ್ದೇವೆ ಎಂದ ನಿರ್ಮಲಾ
(What Is Oil Bonds Issued During UPA Government How And Why It Become Reason For Imposing Excise Duty On Fuel)