ನವದೆಹಲಿ: ಲೆಕ್ಕಪತ್ರ ವಂಚನೆ ಮತ್ತು ಷೇರು ಬೆಲೆಯ ಮೇಲೆ ಪರಿಣಾಮ ಬೀರಿರುವ ಬಗ್ಗೆ ಶ್ರೀಮಂತ ಉದ್ಯಮಿ ಗೌತಮ್ ಅದಾನಿ (Gautam Adani) ಮಾಲೀಕತ್ವದ ಅದಾನಿ ಸಮೂಹದ (Adani Group) ಕಂಪನಿಗಳ ವಿರುದ್ಧ ಅಮೆರಿಕದ ಹಿಂಡನ್ಬರ್ಗ್ ರಿಸರ್ಚ್ (Hindenburg Research) ಸಂಸ್ಥೆ ಮಾಡಿರುವ ಆರೋಪ ದೇಶದ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ವರದಿಯ ಬೆನ್ನಲ್ಲೇ ಅದಾನಿ ಸಮೂಹದ ಕಂಪನಿಗಳ ಷೇರು ಮೌಲ್ಯದಲ್ಲಿ ಕುಸಿತವಾಗಿರುವುದರಿಂದ ಲಕ್ಷಾಂತರ ಕೋಟಿ ರೂ. ನಷ್ಟ ಉಂಟಾಗಿದೆ. ಈ ಮಧ್ಯೆ, ಅದಾನಿ ಸಮೂಹದ ವಿರುದ್ಧ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI) ಹಾಗೂ ಆರ್ಬಿಐಯಂಥ (RBI) ಉನ್ನತ ಸಂಸ್ಥೆಗಳ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ. ಅದಾನಿ ಕಂಪನಿಗಳ ವಿಚಾರಕ್ಕೆ ಸಂಬಂಧಿಸಿದ ಹಿಂಡನ್ಬರ್ಗ್ ವರದಿ ದೇಶದ ರಾಜಕೀಯ ವಲಯದಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಹಿಂಡನ್ಬರ್ಗ್ ರಿಸರ್ಚ್ ಪ್ರಕಟಿಸಿದ್ದ ವರದಿಯ ಆಧಾರದಲ್ಲಿ ಅಮೆರಿಕದ ಕಂಪನಿಯೊಂದರ ವಿರುದ್ಧ ಹೂಡಲಾಗಿದ್ದ ಮೊಕದ್ದಮೆಯೊಂದನ್ನು ಅಲ್ಲಿನ ನ್ಯಾಯಾಲಯವೊಂದು ಇತ್ತೀಚೆಗೆ ತಿರಸ್ಕರಿಸಿರುವುದು ಬೆಳಕಿಗೆ ಬಂದಿದೆ.
ಶಾರ್ಟ್ ಸೆಲ್ಲರ್ಗಳ (ಹೂಡಿಕೆದಾರರು ಷೇರುಗಳನ್ನು ಎರವಲು ಪಡೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ನಂತರ ಕಡಿಮೆ ಹಣಕ್ಕೆ ಖರೀದಿ ಮಾಡಲು ಮುಂದಾಗುವುದನ್ನು ಶಾರ್ಟ್ ಸೆಲ್ಲಿಂಗ್ ಎನ್ನಲಾಗುತ್ತದೆ) ವರದಿ ಆಧಾರದಲ್ಲಿ ಮಾಡಿದ ಆರೋಪಗಳನ್ನು ಒಪ್ಪಲಾಗದು ಎಂದು ಅಮೆರಿಕದ ಮ್ಯಾನ್ಹಾಟನ್ ನ್ಯಾಯಾಲಯದ ಡಿಸ್ಟ್ರಿಕ್ಟ್ ಜಡ್ಜ್ ಪಾಲ್ ಎಂಗಲ್ಮೇಯರ್ ಆದೇಶವೊಂದನ್ನು ನೀಡುವ ಸಂದರ್ಭದಲ್ಲಿ ಹೇಳಿದ್ದರು. ಅಲ್ಲದೆ, ಆಧಾರರಹಿತ ಅಥವಾ ಮೂಲವನ್ನು ಉಲ್ಲೇಖಿಸದ ವರದಿಗಳನ್ನು ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸಿದರೆ ಒಪ್ಪಲಾಗದು. ಸಂಬಂಧಪಟ್ಟ ವಕೀಲರು ಆರೋಪವನ್ನು ಸಾಬೀತುಪಡಿಸಿದರೆ ಮಾತ್ರ ಪರಿಶೀಲಿಸಬಹುದು ಎಂದು ಅವರು ಹೇಳಿದ್ದರು. ಈ ವಿಚಾರವಾಗಿ ಜನವರಿ 12ರಂದು ‘ರಾಯಿಟರ್ಸ್’ ಸುದ್ದಿಸಂಸ್ಥೆ ವರದಿ ಮಾಡಿತ್ತು. ಅಮೆರಿಕದ ಸ್ಪೋರ್ಟ್ಸ್ ಬೆಟ್ಟಿಂಗ್ ಕಂಪನಿ ‘ಡ್ರಾಫ್ಟ್ಕಿಂಗ್ಸ್’ ವಿರುದ್ಧದ ಅಕ್ರಮದ ಆರೋಪದ ವಿಚಾರಣೆ ನಡೆಸಿದ್ದ ಜಡ್ಜ್ ಪಾಲ್ ಮೇಲಿನಂತೆ ಅಭಿಪ್ರಾಯಪಟ್ಟಿದ್ದರು.
‘ಡ್ರಾಫ್ಟ್ಕಿಂಗ್ಸ್’ ವಿರುದ್ಧ ಅಕ್ರಮದ ಆರೋಪ ಮಾಡಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಜಡ್ಜ್ ಪಾಲ್ ಎಂಗಲ್ಮೇಯರ್, ಶಾರ್ಟ್ ಸೆಲ್ಲರ್ಗಳನ್ನು ಪಕ್ಷಪಾತ ಮಾಡದೆ ವರದಿ ನೀಡುವವರು ಎಂಬುದಾಗಿ ಭಾವಿಸಲಾಗದು ಎಂದು ಹೇಳಿದ್ದರು. ಇಂಥ ಪ್ರಕರಣಗಳಲ್ಲಿ ನ್ಯಾಯಾಲಯವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಅದರಲ್ಲಿಯೂ ಮಾಹಿತಿದಾರರ ಹೆಸರನ್ನು ಉಲ್ಲೇಖಿಸದೆಯೇ ಮಾಡಿರುವ ಆರೋಪಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕಾಗುತ್ತದೆ. ಶಾರ್ಟ್ಸೆಲ್ಲರ್ಗಳು ಮಾಡಿರುವ ಆರೋಪಗಳನ್ನು ವಕೀಲರು ವೈಯಕ್ತಿಕವಾಗಿ ದೃಢೀಕರಿಸದಿದ್ದರೆ ನ್ಯಾಯಾಲಯಗಳು ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತವೆ ಎಂದು ಪಾಲ್ ಎಂಗಲ್ಮೇಯರ್ ಆದೇಶದಲ್ಲಿ ಉಲ್ಲೇಖಿಸಿದ್ದರು.
ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ 2019ರಲ್ಲಿ ಪ್ರಕಟಿಸಿದ್ದ ವರದಿಯ ಆಧಾರದಲ್ಲಿ ‘ಡ್ರಾಫ್ಟ್ಕಿಂಗ್ಸ್’ ವಿರುದ್ಧ ಅಕ್ರಮದ ಆರೋಪ ಮಾಡಲಾಗಿತ್ತು. ವರದಿಯ ಪರಿಣಾಮವಾಗಿ ‘ಡ್ರಾಫ್ಟ್ಕಿಂಗ್ಸ್’ ಷೇರು ಮೌಲ್ಯದಲ್ಲಿ ಶೇ 4.2ರ ಕುಸಿತವಾಗಿತ್ತು. ಖಾಸಗಿ ಗೇಮಿಂಗ್ ಸಾಫ್ಟ್ವೇರ್ ಕಂಪನಿಯೊಂದನ್ನು ಖರೀದಿಸುವ ಒಪ್ಪಂದಕ್ಕೆ ಸಂಬಂಧಿಸಿದ ಮಾಹಿತಿಯನ್ನು ‘ಡ್ರಾಫ್ಟ್ಕಿಂಗ್ಸ್’ ಬಹಿರಂಗಪಡಿಸಿಲ್ಲ. ಆ ಮೂಲಕ ಷೇರುದಾರರಿಗೆ ವಂಚನೆ ಎಸಗಿದೆ ಎಂದು ಷೇರುದಾರ ಪರ ವಕೀಲರು ಆರೋಪಿಸಿದ್ದರು. ಅದಕ್ಕೆ ಪೂರಕವಾಗಿ ಹಿಂಡನ್ಬರ್ಗ್ ರಿಸರ್ಚ್ ವರದಿಯನ್ನು ಸಲ್ಲಿಸಿದ್ದರು. ಆದರೆ, ‘ಡ್ರಾಫ್ಟ್ಕಿಂಗ್ಸ್’ ಪರ ವಕೀಲರು ತಮ್ಮ ಕಂಪನಿ ಕೈಗೊಂಡಿರುವ ನಿರ್ಧಾರವನ್ನು ಸಮರ್ಥಿಸಿ ವಾದ ಮಂಡಿಸಿದ್ದರು. ಅಲ್ಲದೆ, ಅಮೆರಿಕದ ನಿರ್ಬಂಧಗಳು ಮತ್ತು ಗೇಮಿಂಗ್ ನಿಯಮಗಳನ್ನು ಎಸ್ಬಿಟೆಕ್ (ಗ್ಲೋಬಲ್) ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ: Adani Group: ಅದಾನಿಯಿಂದ ವ್ಯವಸ್ಥಿತ ಲೂಟಿ, ಈ ವಂಚನೆಯನ್ನು ರಾಷ್ಟ್ರೀಯತೆ ಹೆಸರಿನಲ್ಲಿ ಮರೆಮಾಚಲಾಗದು; ಹಿಂಡನ್ಬರ್ಗ್
ಹಿಂಡನ್ಬರ್ಗ್ ರಿಸರ್ಚ್ ವರದಿಯಲ್ಲಿ ಎಸ್ಬಿಟೆಕ್ (ಗ್ಲೋಬಲ್) ಉದ್ಯೋಗಿಯೊಬ್ಬರು ಮಾಡಿರುವ ಆರೋಪದ ಬಗ್ಗೆ ಉಲ್ಲೇಖವಾಗಿದೆ. ಆದರೆ, ಆರೋಪ ಮಾಡಿದ ಉದ್ಯೋಗಿಯ ವಿವರ ಬಹಿರಂಗಪಡಿಸಿಲ್ಲ. ಅನಾಮಧೇಯ ಆರೋಪಗಳನ್ನು ನಂಬುವುದಾದರೂ ಹೇಗೆ ಎಂದು ‘ಡ್ರಾಫ್ಟ್ಕಿಂಗ್ಸ್’ ವಕೀಲರು ವಾದ ಮಂಡಿಸಿದ್ದರು. ಜತೆಗೆ, ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿದ್ದಕ್ಕೆ ಹಿಂಡನ್ಬರ್ಗ್ ಉತ್ತರಿಸಿಯೂ ಇಲ್ಲ ಎಂದು ತಿಳಿಸಿದ್ದರು.
ಈ ಹಿಂದಿನ ವಿವಾದಾತ್ಮಕ ವರದಿಗಳು ಮತ್ತು ಆ ಮೂಲಕ ಅಕ್ರಮವಾಗಿ ಹಣ ಮಾಡಿದೆ ಎಂಬ ಆರೋಪ ಎದುರಿಸುತ್ತಿರುವ ಹಿಂಡನ್ಬರ್ಗ್ ವರದಿಗಳನ್ನು ಅಮೆರಿಕದ ಮಾರುಕಟ್ಟೆ ನಿಯಂತ್ರಕಗಳಾಗಲೀ ನ್ಯಾಯಾಲಯಗಳಾಗಲೀ ಮಾನ್ಯ ಮಾಡುವುದಿಲ್ಲ. ಹೀಗಾಗಿ ಸಂಸ್ಥೆ ಈಗ ಭಾರತದ ಕಂಪನಿಯತ್ತ ದೃಷ್ಟಿನೆಟ್ಟಿದೆ ಎಂದು ಅಮೆರಿಕದ ಜಡ್ಜ್ ನೀಡಿರುವ ಆದೇಶವನ್ನು ಉಲ್ಲೇಖಿಸಿ ಕೆಲವು ಮಂದಿ ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿಂಡನ್ಬರ್ಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತ ಮತ್ತು ಅಮೆರಿಕದ ಕಾನೂನುಗಳ ಬಗ್ಗೆ ಪರಾಮರ್ಶೆ ನಡೆಸುತ್ತಿರುವುದಾಗಿ ಅದಾನಿ ಸಮೂಹ ಶುಕ್ರವಾರ ಹೇಳಿತ್ತು. ಹೀಗಾಗಿ, ಅಮೆರಿಕದ ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶ ಇದೀಗ ಅದಾನಿ ಸಮೂಹಕ್ಕೆ ವರದಾನವಾಗಲಿದೆಯೇ ಎಂಬ ಕುತೂಹಲ ವ್ಯಕ್ತವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Mon, 30 January 23