Budget 2023: ಆ್ಯಪ್ನಲ್ಲೂ ಸಿಗಲಿದೆ ಬಜೆಟ್ ಪ್ರತಿ; ಯೂನಿಯನ್ ಬಜೆಟ್ ಆ್ಯಪ್ ಹೀಗೆ ಬಳಸಬಹುದು
ಯೂನಿಯನ್ ಬಜೆಟ್ ಆ್ಯಪ್ನಲ್ಲಿ ಬಜೆಟ್ ಸಂಬಂಧಿತ 14 ದಾಖಲೆಗಳು ದೊರೆಯಲಿವೆ. ಇವುಗಳಲ್ಲಿ ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್ (ಬಜೆಟ್), ಡಿಮಾಂಡ್ ಫಾರ್ ಗ್ರಾಂಟ್ಸ್, ಫೈನಾನ್ಸ್ ಬಿಲ್, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಸೇರಿದೆ.
ನವದೆಹಲಿ: ಕೇಂದ್ರ ಬಜೆಟ್ಗೆ (Union Budget) ಇನ್ನು ಒಂದೇ ದಿನ ಬಾಕಿ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಡನೆ ಮಾಡುತ್ತಿರುವ ಐದನೇ ಬಜೆಟ್ ಇದಾಗಿದ್ದು, ಈ ಬಾರಿಯೂ ಕಾಗದರಹಿತ ಮಾದರಿಯಲ್ಲಿ ಬಜೆಟ್ ಮಂಡನೆಯಾಗಲಿದೆ. ಈ ಹಿಂದಿನ ಎರಡು ವರ್ಷಗಳಲ್ಲಿಯೂ ಕಾಗದರಹಿತ ಬಜೆಟ್ ಮಂಡಿಸಲಾಗಿತ್ತು. ಕಳೆದ ಬಾರಿಯ ಮಾದರಿಯಲ್ಲಿ ಈ ವರ್ಷ ಕೂಡ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಆ್ಯಪ್ ಮೂಲಕ ಬಜೆಟ್ ಪ್ರತಿಯನ್ನು ಪಡೆಯಬಹುದಾಗಿದೆ. ಯೂನಿಯನ್ ಬಜೆಟ್ ಆ್ಯಪ್ (Union Budget app) ಅನ್ನು 2021ರಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಂಪರ್ಕರಹಿತವಾಗಿ ಬಜೆಟ್ ಪ್ರತಿಗಳನ್ನು ಒದಗಿಸುವುದಕ್ಕಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಆ್ಯಪ್ ಸ್ಟೋರ್ನಲ್ಲಿ ಆ್ಯಪ್ ಲಭ್ಯವಿರಲಿದೆ.
ಕೇಂದ್ರ ಬಜೆಟ್ ಸಂಬಂಧಿತ ಅಧಿಕೃತ ವೆಬ್ಸೈಟ್ ಮತ್ತು ಆ್ಯಪ್ ಸುಮಾರಾಗಿ ಒಂದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮೊಬೈಲ್ಫೋನ್ ಮೂಲಕ ಬಜೆಟ್ ಪ್ರತಿಯನ್ನು ನೋಡಲು ಬಯಸುವಿರಾದರೆ ಆ್ಯಪ್ ಉತ್ತಮ ಆಯ್ಕೆಯಾಗಬಹುದು. ಸಣ್ಣ ಸ್ಕ್ರೀನ್ಗಳಲ್ಲಿ ನೋಡಲು ಅನುಕೂಲವಾಗುವಂತೆ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆ್ಯಪ್ನಲ್ಲಿ ಕಳೆದ ಎರಡು ವರ್ಷಗಳ ಬಜೆಟ್ ವಿವರ ಕೂಡ ಬಳಕೆದಾರರಿಗೆ ದೊರೆಯಲಿದೆ.
ಬಜೆಟ್ ಆ್ಯಪ್ನಲ್ಲಿ ಏನೆಲ್ಲ ದೊರೆಯಲಿದೆ?
ಆರ್ಥಿಕ ವ್ಯವಹಾರಗಳ ಇಲಾಖೆಯ ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (NIC) ಅಭಿವೃದ್ಧಿಪಡಿಸಿರುವ ಯೂನಿಯನ್ ಬಜೆಟ್ ಆ್ಯಪ್ನಲ್ಲಿ ಬಜೆಟ್ ಸಂಬಂಧಿತ 14 ದಾಖಲೆಗಳು ದೊರೆಯಲಿವೆ. ಇವುಗಳಲ್ಲಿ ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್ (ಬಜೆಟ್), ಡಿಮಾಂಡ್ ಫಾರ್ ಗ್ರಾಂಟ್ಸ್, ಫೈನಾನ್ಸ್ ಬಿಲ್, ಹಣಕಾಸು ಸಚಿವರ ಬಜೆಟ್ ಭಾಷಣದ ಪ್ರತಿ ಕೂಡ ಸೇರಿದೆ.
ಏನಿದು ‘ಕೀ ಟು ಬಜೆಟ್’?
ಯೂನಿಯನ್ ಬಜೆಟ್ ಆ್ಯಪ್ನಲ್ಲಿ ‘ಕೀ ಟು ಬಜೆಟ್’ ಎಂಬ ಆಯ್ಕೆಯೂ ಇದ್ದು, ಬಜೆಟ್ ಅನ್ನು ಹೇಗೆ ಓದಬೇಕೆಂಬ ಮಾಹಿತಿಯನ್ನು ಅದು ಬಳಕೆದಾರರಿಗೆ ನೀಡುತ್ತದೆ. ವಾರ್ಷಿಕ ಹಣಕಾಸು ಸ್ಟೇಟ್ಮೆಂಟ್, ಡಿಮಾಂಡ್ ಫಾರ್ ಗ್ರಾಂಟ್ಸ್, ಫೈನಾನ್ಸ್ ಬಿಲ್, ಬಜೆಟ್ ರಿಸಿಟ್, ಎಕ್ಸ್ಪೆಂಡಿಚರ್ ಪ್ರೊಫೈಲ್ ಇತ್ಯಾದಿಗಳ ಕುರಿತಾದ ಮಾಹಿತಿಯನ್ನೂ ಒಳಗೊಂಡಿದೆ. ಬಜೆಟ್ ಹೈಲೈಟ್ ವಿಭಾಗವೂ ಇದ್ದು, ಬಜೆಟ್ನಲ್ಲಿ ಮಾಡಿರುವ ಪ್ರಮುಖ ಘೋಷಣೆಗಳು, ಮುಖ್ಯ ಯೋಜನೆಗಳು ಇತ್ಯಾದಿಗಳ ಮುಖ್ಯಾಂಶಗಳೂ ಇರಲಿವೆ.
ಆ್ಯಪಲ್ ಆ್ಯಪ್ ಸ್ಟೋರ್ (https://apps.apple.com/us/app/union-budget-app/id1548425364) , ಗೂಗಲ್ ಪ್ಲೇ ಸ್ಟೋರ್ (https://play.google.com/store/apps/details?id=com.nic.unionbudget) ಮಾತ್ರವಲ್ಲದೆ ಕೇಂದ್ರ ಬಜೆಟ್ ಸಂಬಂಧಿತ ವೆಬ್ಸೈಟ್ನಿಂದಲೂ (https://www.indiabudget.gov.in/) ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ