ಜನರ ಖರೀದಿ ಸಾಮರ್ಥ್ಯ ಮುಂಚಿಗಿಂತ ಈಗ ಬಹಳ ಅಂದರೆ ಬಹಳ ಹೆಚ್ಚಾಗಿದೆ. ದುಡಿಮೆ ಜಾಸ್ತಿ ಆಗಿದೆ, ಆದ್ದರಿಂದ ಇದೂ ಹೆಚ್ಚಾಗಿದೆ ಅಂತೀರಾ? ಉತ್ತರ ಅಷ್ಟೇನಾ? ಇಲ್ಲ. ಈಗ ಅತಿ ಮುಖ್ಯವಾಗಿ ತಕ್ಷಣವೇ ಖರೀದಿಸಿ, ನಂತರ ಪಾವತಿಸಿ ಎಂಬ ಟ್ರೆಂಡ್ ಹೆಚ್ಚಾಗಿದೆ. ಅದರಲ್ಲೂ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡುವವರ ಪ್ರಮಾಣ ತುಂಬ ಜಾಸ್ತಿ ಆಗಿದೆ. ತಮ್ಮ ಅಳತೆಗೂ ಮೀರಿ ಖರ್ಚು ಮಾಡಿದ ಮೇಲೆ ಕ್ರೆಡಿಟ್ ಬಿಲ್ ಪಾವತಿ ಮಾಡದೆ ತಪ್ಪಿಸೋದು ಅಥವಾ ಕನಿಷ್ಠ ಮೊತ್ತವನ್ನು ಸಹ ಪಾವತಿಸದಿರುವುದು ಇವೆಲ್ಲ ಉಂಟು. ಯಾವಾಗ ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವುದಿಲ್ಲವೋ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರಿಂದ ಕ್ರೆಡಿಟ್ ಸ್ಕೋರ್ಗೆ ಪೆಟ್ಟು ಬೀಳುವುದಷ್ಟೇ ಅಲ್ಲ, ಲೇಟ್ ಫೀ ಅಂತ ಕೂಡ ತಲೆ ಮೇಲೆ ಬೀಳುತ್ತದೆ.
ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್ನ ಪೂರ್ತಿ ಮೊತ್ತವನ್ನೂ ಕಟ್ಟುವುದಕ್ಕೆ ಸಾಧ್ಯವಾಗದಿದ್ದಲ್ಲಿ ಬಾಕಿ ಉಳಿಸಿಕೊಂಡ ಬಿಲ್ ಮೇಲೆ ಹಣಕಾಸು ಶುಲ್ಕ ಬೀಳುತ್ತದೆ. ಸಾಮಾನ್ಯವಾಗಿ ಇದು ವಾರ್ಷಿಕವಾಗಿ ಶೇ 30ರಿಂದ ಶೇ 49ರಷ್ಟಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ, ಆ ನಂತರದ ಹೊಸ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಬಡ್ಡಿರಹಿತ ಅವಧಿಯನ್ನೇ ತೆಗೆಯಲಾಗುತ್ತದೆ. 60 ದಿನಗಳ ಅವಧಿಯನ್ನು ಮೀರುತ್ತಿದ್ದಂತೆ ನಿಮ್ಮ ಬಡ್ಡಿ ದರವೂ ಹೆಚ್ಚುತ್ತದೆ. ಬರೀ ದಂಡ ಶುಲ್ಕವನ್ನೇನೋ ಹಾಕಿ ಸುಮ್ಮನಾಗುತ್ತಾರೆ ಎನ್ನುವಂತಿಲ್ಲ. ಆ ಬಡ್ಡಿ ದರವು ದಂಡದ ದರಕ್ಕೆ ಸಮವಾಗಿಯೇ ಹೆಚ್ಚಳವಾಗುತ್ತದೆ. ಇದು ಕ್ರೆಡಿಟ್ ಕಾರ್ಡ್ ಮೇಲೆ ವಿಧಿಸುವ ಅತಿ ಹೆಚ್ಚಿನ ಬಡ್ಡಿ ದರ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಂಪೂರ್ಣವಾಗಿ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂದು ಮೊದಲೇ ಗೊತ್ತಾಗಿಬಿಟ್ಟರೆ ಅಥವಾ ಆ ಪೈಕಿ ಸ್ವಲ್ಪ ಮೊತ್ತವನ್ನು ಕಟ್ಟುವುದಕ್ಕೆ ಆಗಲ್ಲ ಅಂತಾದರೆ ಇಎಂಐ (ಈಕ್ವೇಟೆಡ್ ಮಂತ್ಲಿ ಇನ್ಸ್ಟಾಲ್ಮೆಂಟ್ಸ್) ಆಗಿ ಬದಲಿಸಿಕೊಳ್ಳಬಹುದು.
ನೆನಪಿರಲಿ, ಇಂಥ ಇಎಂಐ ಮೇಲಿನ ಬಡ್ಡಿ ದರವು ಹಣಕಾಸು ಶುಲ್ಕಕ್ಕಿಂತ ಕಡಿಮೆ ಇರುತ್ತದೆ. ಈ ಮೂಲಕ ಬಡ್ಡಿ ಹೊರೆ ಕೂಡ ಇಳಿಯುತ್ತದೆ. ಹೀಗೆ ಇಎಂಐಗೆ ಬದಲಿಸಿಕೊಂಡ ಮೇಲೆ ಆ ಅವಧಿಯು ಮೂರು ತಿಂಗಳಿಂದ 5 ವರ್ಷದ ತನಕ ದೊರೆಯುತ್ತದೆ. ಯಾವ ರೀತಿಯಲ್ಲಿ ಪಾವತಿಗೆ ಅನುಕೂಲವೋ ಅದನ್ನು ಆರಿಸಿಕೊಳ್ಳಬಹುದು. ಕ್ರೆಡಿಟ್ ಸ್ಕೋರ್ ಮೇಲೂ ಪರಿಣಾಮ ಬೀರದಂತೆ ಬಾಕಿ ಬಿಲ್ ಮೊತ್ತವನ್ನು ಕಂತು ಕಂತಿನಲ್ಲಿ ಕಟ್ಟಿಕೊಂಡು ಹೋಗಬಹುದು. ಕ್ರೆಡಿಟ್ ಕಾರ್ಡ್ ವಿತರಿಸುವವರ ಪೈಕಿ ಹಲವು ಕಂಪೆನಿಗಳು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಸ್ಫರ್ಗೂ ಅವಕಾಶ ಮಾಡಿಕೊಡುತ್ತವೆ. ಈ ಮೂಲಕವಾಗಿ ಬೇರೆ ಸಂಸ್ಥೆಯ ಕ್ರೆಡಿಟ್ ಕಾರ್ಡ್ನಿಂದ ಮತ್ತೊಂದಕ್ಕೆ ಬಾಕಿ ಮೊತ್ತದ ವರ್ಗಾವಣೆ ಮಾಡಬಹುದು. ಆ ನಂತರ ಬಾಕಿ ಮೊತ್ತವನ್ನು ಇಎಂಐ ಆಗಿ ಬದಲಿಸಿಕೊಳ್ಳಬಹುದು.
ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?
ಇದನ್ನೂ ಓದಿ: Credit score: ಸಾಲ, ಕ್ರೆಡಿಟ್ ಕಾರ್ಡ್ ಬಿಲ್ ಸರಿಯಾಗಿ ಪಾವತಿಸಿದರೂ ಕ್ರೆಡಿಟ್ ಸ್ಕೋರ್ ಯಾಕೆ ಕಡಿಮೆ ಆಗುತ್ತೆ?
(Why and when can you opt for credit card EMI? Here is an explainer)