2047 ರ ವೇಳೆಗೆ ದೇಶವು ‘ವಿಕಸಿತ ಭಾರತ’ ಆಗಬೇಕೆಂದರೆ 30 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿನ ಗಾತ್ರದ ಆರ್ಥಿಕತೆಯನ್ನು ಸೃಷ್ಟಿಸಬೇಕಾಗುತ್ತದೆ. ದೇಶದ ಉತ್ಪಾದನಾ ವಲಯದ ಬೆಳವಣಿಗೆಯಿಂದ ಮಾತ್ರ ಇದು ಸಾಧ್ಯ. ಇದು ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಜಾಗತಿಕ ಶೃಂಗಸಭೆಯಲ್ಲಿ (What India Thinks Today global summit) ಮಹೀಂದ್ರಾ ಮತ್ತು ಮಹೀಂದ್ರಾ ಸಿಇಒ ಅನೀಶ್ ಷಾ (Anish Shah) ಹೇಳಿದ ಮಾತು. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ (Viksit Bharat) ಕಲ್ಪನೆ ಮತ್ತು ಗುರಿ ಬಗ್ಗೆ ಅನೀಶ್ ಷಾ ಅವರು ಹೇಳಿದ ಇನ್ನಷ್ಟು ಮಾತುಗಳ ವಿವರ ಮುಂದಿದೆ…
2047ರ ವೇಳೆಗೆ ಭಾರತವನ್ನು ಮುಂದುವರಿದ ದೇಶವನ್ನಾಗಿ ಮಾಡುವ ಗುರಿ ಪ್ರಧಾನಿ ನರೇಂದ್ರ ಮೋದಿ ಅವರದ್ದು. ಇದಕ್ಕಾಗಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರವು ದೇಶದ ಆರ್ಥಿಕತೆಯಲ್ಲಿ ಶೇ. 25ರಷ್ಟು ಪಾಲು ಹೊಂದಿರುವುದು ಅವಶ್ಯ. ಈ ಕ್ಷೇತ್ರ ಶೇ. 16ರ ದರದಲ್ಲಿ ಬೆಳೆಯಬೇಕು. ಹೆಚ್ಚಿನ ಉದ್ಯೋಗಸೃಷ್ಟಿಗೆ ಈ ಕ್ಷೇತ್ರ ಉಪಯುಕ್ತವಾಗುತ್ತದೆ ಎಂದು ಮಹೀಂದ್ರ ಅಂಡ್ ಮಹೀಂದ್ರ ಸಿಇಒ ಅನೀಶ್ ಷಾ ಹೇಳಿದರು.
ಇದನ್ನೂ ಓದಿ: ಮಾರುತಿ ಈ ದೇಶದ ನಂ. 1 ಕಾರ್ ಕಂಪನಿ ಆಗಿರುವ ಸೀಕ್ರೆಟ್ ಏನು? ಅಧ್ಯಕ್ಷ ಭಾರ್ಗವ ಬಿಚ್ಚಿಟ್ಟ ರಹಸ್ಯ ಇದು
‘ವಿಕಸಿತ ಭಾರತ’ ಮಾಡುವುದು ಎಂದರೆ ದೇಶದ ಆರ್ಥಿಕತೆಯ ಗಾತ್ರ 30 ಟ್ರಿಲಿಯನ್ ಡಾಲರ್‌ಗಿಂತ ಹೆಚ್ಚಿರಬೇಕು ಮತ್ತು ತಲಾ ಆದಾಯ 17,000 ಡಾಲರ್‌ಗಿಂತ ಹೆಚ್ಚಿರಬೇಕು. ಈ ರೀತಿಯ ವೃದ್ಧಿಯಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಬಳಕೆ (ಕನ್ಸಮ್ಪ್ಷನ್) ಮತ್ತು ಬೇಡಿಕೆ ಹೆಚ್ಚಲಿದೆ. ಇದು ಜನರನ್ನು ಮೇಲಕ್ಕೆತ್ತುತ್ತದೆ. ದೇಶದ ಜನಸಂಖ್ಯೆಯ ಹೆಚ್ಚಿನ ಭಾಗವು ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗಕ್ಕೆ ಸೇರುತ್ತದೆ ಎಂದು ಷಾ ವಿವರಿಸಿದರು.
ದೇಶದ ಆರ್ಥಿಕತೆಯಲ್ಲಿ ಕೆ-ಆಕಾರದ ಬೆಳವಣಿಗೆಯ ಸಾಧ್ಯತೆ ಬಗ್ಗೆಯೂ ಮಾತನಾಡಿದ ಅನೀಶ್ ಷಾ, ದೇಶದಲ್ಲಿ ಬೇಡಿಕೆ ಹೆಚ್ಚುತ್ತಿದೆಯಾದರೂ, ಇದು ನಗರಗಳಲ್ಲಿ ಮಾತ್ರ ಹೆಚ್ಚು ಗೋಚರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮುಂಬೈ ಆಗಲೀ ಕೇರಳ ಆಗಲೀ ತಂತ್ರಜ್ಞಾನ ಎಲ್ಲರನ್ನೂ ತಲುಪಬೇಕೆಂಬುದು ಮೋದಿ ಸರ್ಕಾರದ ಪ್ರಯತ್ನ: ಸಚಿವ ವೈಷ್ಣವ್
ಈ ಮಧ್ಯೆ ಮಹೀಂದ್ರಾ ಸಂಸ್ಥೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಆಟೋ ವಲಯದಲ್ಲಿ ಮಹೀಂದ್ರಾ ತನ್ನ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ್ದರೆ, ಟ್ರಾಕ್ಟರ್ ವಿಭಾಗದಲ್ಲಿ 60 ಪ್ರತಿಶತದಷ್ಟು ಹೆಚ್ಚಿಸಿದೆ. ಮಹೀಂದ್ರಾ ರೆಸಾರ್ಟ್ ವ್ಯವಹಾರದಲ್ಲೂ ಇದನ್ನು ಮೂರು ಪಟ್ಟು ಹೆಚ್ಚಿಸಲಿದೆ ಎಂದು ಮಹೀಂದ್ರ ಅಂಡ್ ಮಹೀಂದ್ರ ಸಿಇಒ ಹೇಳಿದರು.
ಟಿವಿ9 ಆಯೋಜಿಸಿರುವ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ ಗ್ಲೋಬಲ್ ಸಮಿಟ್ ಎರಡನೇ ಆವೃತ್ತಿಯದ್ದಾಗಿದೆ. ಭಾನುವಾರ ಆರಂಭಗೊಂಡ ಇದು ಮಂಗಳವಾರ (ಫೆ. 27) ಮುಗಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಸೋಮವಾರ ರಾತ್ರಿ 8ಗಂಟೆಗೆ ಮಾತನಾಡುತ್ತಿದ್ದಾರೆ.
ಇನ್ನಷ್ಟು ಡಬ್ಲ್ಯುಐಟಿಟಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ