ವಾಷಿಂಗ್ಟನ್, ಜನವರಿ 30: ಕೋವಿಡ್ ಸಂದರ್ಭದಲ್ಲಿ ಶುರುವಾಗಿದ್ದ ವರ್ಕ್ ಫ್ರಂ ಹೋಮ್ (Work from Home) ಟ್ರೆಂಡ್ ಈಗಲೂ ಉಳಿದಿದೆ. ಬಹಳಷ್ಟು ಜನರು ಈಗಲೂ ಕಚೇರಿಗೆ ಹೋಗಿ ಕೆಲಸ ಮಾಡಲು ಒಪ್ಪುತ್ತಿಲ್ಲ. ಸಂಸ್ಥೆಗಳು ಸಾಮ, ದಾನ, ಭೇದದ ತಂತ್ರಗಳನ್ನು ಅನುರಿಸುತ್ತಿವೆ. ಅವಕ್ಕೂ ಕೆಲವರು ಜಗ್ಗುತ್ತಿಲ್ಲ. ಹೆಚ್ಚಿನ ಟೆಕ್ ಸಂಸ್ಥೆಗಳು ಹೈಬ್ರಿಡ್ ತಂತ್ರ ಅನುಸರಿಸುತ್ತಿವೆ. ವಾರದಲ್ಲಿ ಕೆಲ ದಿನ ಕಚೇರಿ, ಕೆಲ ದಿನ ಮನೆಯಲ್ಲಿ ಕೆಲಸ ಮಾಡುವ ಅವಕಾಶ ಕೊಟ್ಟಿದೆ. ಇದೀಗ ಐಬಿಎಂ ಸಂಸ್ಥೆ ತನ್ನ ಎಲ್ಲಾ ಮ್ಯಾನೇಜರುಗಳನ್ನು ಕಚೇರಿಗೆ ತರಲು ಪ್ರಯತ್ನಿಸುತ್ತಿದ್ದು, ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸಂದೇಶವೊಂದನ್ನು ನೀಡಿದೆ. ಮನೆಯಿಂದ ಕೆಲಸ ಮಾಡುತ್ತಿರುವ ಮ್ಯಾನೇಜರುಗಳು ಕಚೇರಿಗೆ ಬಂದು ಕೆಲಸ ಮಾಡಬೇಕು, ಇಲ್ಲ ಕಂಪನಿ ಬಿಟ್ಟು ಹೋಗಬೇಕು ಎಂದು ತಾಕೀತು ಮಾಡಿದೆ.
ಬ್ಲೂಮ್ಬರ್ಗ್ನಲ್ಲಿ ಪ್ರಕಟವಾಗಿರುವ ಈ ವರದಿ ಪ್ರಕಾರ ಜನವರಿ 16ರಂದು ಐಬಿಎಂ ಮೆಮೋರಾಂಡಂ ಬಿಡುಗಡೆ ಮಾಡಿದೆ. ಅಮೆರಿಕದಲ್ಲಿರುವ ಸಂಸ್ಥೆಯ ವಿವಿಧ ಮ್ಯಾನೇಜರುಗಳು ವಾರದಲ್ಲಿ ಮೂರು ದಿನಗಳಾದರೂ ಸಮೀಪದ ಕಚೇರಿ ಅಥವಾ ಕ್ಲೈಂಟ್ ಸ್ಥಳಕ್ಕೆ ಹೋಗಿ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದೆ.
‘ಮುಖತಃ ಸಂವಹನಗಳಿಂದ ಹೆಚ್ಚು ಕ್ರಿಯಾಶೀಲರಾಗಬಹುದು, ಉತ್ಪನ್ನಶೀಲತೆ ಹೆಚ್ಚುತ್ತದೆ. ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸಲಬಹುದು. ಈ ನಿಟ್ಟಿನಲ್ಲಿ ಕೆಲಸದ ವಾತಾವರಣ ನಿರ್ಮಿಸಲು ಐಬಿಎಂ ಗಮನ ಹರಿಸುತ್ತಿದೆ. ಇದೇ ಉದ್ದೇಶದಲ್ಲಿ ಅಮೆರಿಕದಲ್ಲಿರುವ ಎಕ್ಸಿಕ್ಯೂಟಿವ್ಗಳು ಮತ್ತು ಮ್ಯಾನೇಜರುಗಳು ವಾರದಲ್ಲಿ ಮೂರು ದಿನವಾದರೂ ಕಚೇರಿಯಲ್ಲಿ ಇರುವ ಅಗತ್ಯ ಇದೆ,’ ಎಂದು ಐಬಿಎಂನ ವಕ್ತಾರರು ಹೇಳಿದ್ದಾರೆ.
ಈ ಸೂಚನೆ ಪ್ರಕಾರ, ಮನೆಯಿಂದ ಕೆಲಸ ಮಾಡುತ್ತಿರುವ ಐಬಿಎಂ ಮ್ಯಾನೇಜರುಗಳು ಕಚೇರಿಯ 80 ಕಿಮೀ ಒಳಗಿನ ದೂರದ ಸ್ಥಳಕ್ಕೆ ಮನೆ ಬದಲಾಯಿಸಿಕೊಳ್ಳಬೇಕು. ಇದರಿಂದ ಓಡಾಟಕ್ಕೆ ಅನುಕೂಲವಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಮತ್ತು ಮಿಲಿಟರಿ ಸೇವೆಯಲ್ಲಿರುವವರಿಗೆ ಈ ಆದೇಶದಿಂದ ವಿನಾಯಿತಿ ಕೊಡಲಾಗಿದೆ.
ಐಬಿಎಂ ಸಂಸ್ಥೆಗೆ ಭಾರತೀಯ ಮೂಲದ ಅರವಿಂದ್ ಕೃಷ್ಣ ಸಿಇಒ ಆಗಿದ್ದಾರೆ. ಕಳೆದ ವರ್ಷ ಅವರು ಬ್ಲೂಮ್ಬರ್ಗ್ಗೆ ನೀಡಿದ ಸಂದರ್ಶನವೊಂದರಲ್ಲಿ ವರ್ಕ್ ಫ್ರಂ ಹೋಮ್ ವಿಚಾರದಲ್ಲಿ ಕಠಿಣ ಮಾತುಗಳನ್ನು ಆಡಿದ್ದರು. ಕಚೇರಿಗೆ ಬಂದು ಕೆಲಸ ಮಾಡದ ಉದ್ಯೋಗಿಗಳಿಗೆ ಬಡ್ತಿ ಸಿಗುವ ಅವಕಾಶ ಕಡಿಮೆ ಇರುತ್ತದೆ ಎಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ: Sin Tax: ಸಿನ್ ಟ್ಯಾಕ್ಸ್ ಇನ್ನಷ್ಟು ಹೆಚ್ಚಿಸುವಂತೆ ಮನವಿ; ಏನಿದು ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ?
ಐಬಿಎಂ ಮಾತ್ರವಲ್ಲ, ಬಹುತೇಕ ಎಲ್ಲಾ ಕಂಪನಿಗಳೂ ರಿಮೋಟ್ ವರ್ಕಿಂಗ್ ಅನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಿವೆ. ಟಿಸಿಎಸ್ನಂತಹ ಕೆಲ ಐಟಿ ಕಂಪನಿಗಳಂತೂ ಎಲ್ಲಾ ಉದ್ಯೋಗಿಗಳೂ ಪೂರ್ಣವಾಗಿ ಕಚೇರಿ ಹಾಜರಾತಿ ತೋರಬೇಕೆಂದು ಸೂಚನೆ ನೀಡಿವೆ. ಕೋವಿಡ್ ಮುಂಚೆ ಇದ್ದ ಕೆಲಸದ ವಾತಾರಣ ತರುವ ಪ್ರಯತ್ನಗಳಾಗುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ