ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ

|

Updated on: Sep 14, 2023 | 6:05 PM

Reliance's Hamleys Enter Italy: ಹ್ಯಾಮ್ಲೀಸ್ ಎಂಬ ರೀಟೇಲ್ ಟಾಯ್ ಮಾರಾಟ ಕಂಪನಿ ತನ್ನ ಜಾಲವನ್ನು ಇಟಲಿಗೆ ವಿಸ್ತರಿಸಿದೆ. ವಿಶ್ವದ ಅತ್ಯಂತ ಹಳೆಯ ಟಾಯ್ ಸ್ಟೋರ್ ಎನಿಸಿದ ಹ್ಯಾಮ್ಲೀಸ್ ಕಳೆದ ನಾಲ್ಕು ವರ್ಷದಿಂದ ರಿಲಾಯನ್ಸ್ ಒಡೆತನದಲ್ಲಿದೆ. 620 ಕೋಟಿ ರೂಗೆ ಹ್ಯಾಮ್ಲೀಸ್ ಅನ್ನು ಖರೀದಿಸಿರುವ ರಿಲಾಯನ್ಸ್, ಇದೀಗ ಸಾಕಷ್ಟು ವ್ಯವಹಾರ ವಿಸ್ತರಣೆಗೆ ಮುಂದಾಗಿದೆ. ಹಲವು ಪ್ರಮುಖ ಬ್ರ್ಯಾಂಡ್​ಗಳ ಗೊಂಬೆಗಳು ಹ್ಯಾಮ್ಲೀಸ್ ಸ್ಟೋರ್​ನಲ್ಲಿ ಲಭ್ಯ ಇವೆ.

ಇಟಲಿಗೆ ಅಡಿ ಇಟ್ಟ ಅಂಬಾನಿ ಮಾಲಕತ್ವದ ಹ್ಯಾಮ್ಲೀಸ್; ಜಿಯೋಚಿ ಪ್ರೆಜಿಯೋಸಿ ಜೊತೆ ರಿಲಾಯನ್ಸ್ ಒಪ್ಪಂದ
ಹ್ಯಾಮ್ಲೀಸ್
Follow us on

ನವದೆಹಲಿ, ಸೆಪ್ಟೆಂಬರ್ 14: ವಿಶ್ವದ ಅತ್ಯಂತ ಹಳೆಯ ಗೊಂಬೆ ಮಾರಾಟಗಾರ ಸಂಸ್ಥೆ ಎನಿಸಿದ ಹ್ಯಾಮ್ಲೀಸ್ (hamleys toy store) ಇದೀಗ ಇಟಲಿ ದೇಶಕ್ಕೆ ಅಡಿ ಇಟ್ಟಿದೆ. ಮುಕೇಶ್ ಅಂಬಾನಿ ಅವರ ರಿಲಾಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿರುವ ಹ್ಯಾಮ್ಲೀಸ್​ನ ಟಾಯ್ ಸ್ಟೋರ್ ಇಟಲಿಯಲ್ಲಿ ಸ್ಥಾಪನೆಯಾಗಿದೆ. ಇದು ಇಟಲಿಯಲ್ಲಿ ತೆರೆಯಲಾಗಿರುವ ಮೊದಲ ಹ್ಯಾಮ್ಲೀಸ್ ಟಾಯ್ ಸ್ಟೋರ್ ಆಗಿದೆ. ಇದಕ್ಕಾಗಿ ರಿಲಾಯನ್ಸ್ ಬ್ರ್ಯಾಂಡ್ಸ್ ಸಂಸ್ಥೆ (RBL) ಮತ್ತು ಜಿಯೋಚಿ ಪ್ರೆಜಿಯೋಸಿ ಎಸ್.ಪಿ.ಎ. (GP) ಜೊತೆ ಒಪ್ಪಂದ ಮಾಡಿಕೊಂಡಿದೆ. ಇಟಲಿಯ ಪ್ರಮುಖ ಬೊಂಬೆ ತಯಾರಿಕೆ ಮತ್ತು ವಿತರಕ ಸಂಸ್ಥೆ ಎನಿಸಿರುವ ಜಿಪಿ ಇದೀಗ ಇಟಲಿಯಾದ್ಯಂತ ಹ್ಯಾಮ್ಲೀ ಸ್ಟೋರ್​ಗಳನ್ನು ನಿರ್ವಹಿಸುವ ಹಕ್ಕುಗಳನ್ನು ಪಡೆದಿದೆ.

ಇಟಲಿಯ ಮಿಲನ್ ನಗರದಲ್ಲಿ ಹ್ಯಾಮ್ಲೀಸ್​ನ ಮೊದಲ ಮಳಿಗೆ ತಲೆ ಎತ್ತಿದೆ. ಇದರ ಉದ್ಘಾಟನೆಯೇ ಈಗ ಆಗಿರುವುದು. ಮುಂದಿನ ದಿನಗಳಲ್ಲಿ ರೋಮ್ ನಗರದಲ್ಲಿಯೂ ಟಾಯ್ ಸ್ಟೋರ್ ತೆರೆಯಲಾಗುತ್ತದೆ. ಕ್ರಮೇಣವಾಗಿ ಇಟಲಿಯ ವಿವಿಧ ನಗರಗಳಲ್ಲಿ ಹ್ಯಾಮ್ಲೀಸ್ ಟಾಯ್ ಸ್ಟೋರ್​ಗಳು ತಲೆ ಎತ್ತಲಿವೆ.

ಇದನ್ನೂ ಓದಿ: ಭಾರತದ ಐಎಂಇಇಸಿ ಕಾರಿಡಾರ್ ಅದೆಷ್ಟು ಐತಿಹಾಸಿಕ ಗೊತ್ತಾ? ಇತಿಹಾಸಕಾರ ವಿಲಿಯಂ ಹೇಳೋದಿದು

ಹ್ಯಾಮ್ಲೀಸ್ 18ನೇ ಶತಮಾನದಲ್ಲಿ ವಿಲಿಯಮ್ ಹ್ಯಾಮ್ಲೀ ಎಂಬ ವ್ಯಕ್ತಿ ಲಂಡನ್​ನಲ್ಲಿ ಸ್ಥಾಪಿಸಿದ ಬೊಂಬೆ ಮಾರಾಟ ಕಂಪನಿಯಾಗಿದೆ. ಇಂಥದ್ದೊಂದು ಬೊಂಬೆ ಕಂಪನಿ ಸ್ಥಾಪನೆಯಾಗಿದ್ದು ಅದೇ ಮೊದಲು. ವಿಶ್ವದ ಅತ್ಯಂತ ಹಳೆಯ ಟಾಯ್ ಸ್ಟೋರ್ ಎಂಬ ಗಿನ್ನೆಸ್ ದಾಖಲೆ ಇದರ ಹೆಸರಿನಲ್ಲಿದೆ. ತೀರಾ ಇತ್ತೀಚಿನವರೆಗೂ ಹ್ಯಾಮ್ಲೀಸ್ ವಿಶ್ವದ ಅತ್ಯಂತ ಹಳೆಯ ಬೊಂಬೆ ಮಳಿಗೆ ಎನಿಸಿದ್ದು ಮಾತ್ರವಲ್ಲ ವಿಶ್ವದ ಅತಿದೊಡ್ಡ ಬೊಂಬೆ ಮಾರಾಟ ಕಂಪನಿ ಎಂಬ ದಾಖಲೆಗೂ ಪಾತ್ರವಾಗಿತ್ತು.

ರಿಲಾಯನ್ಸ್ ಇಂಡಸ್ಟ್ರೀಸ್​ನ ಅಂಗಸಂಸ್ಥೆ ರಿಲಾಯನ್ಸ್ ರೀಟೇಲ್​ನ ಭಾಗವಾಗಿರುವ ರಿಲಾಯನ್ಸ್ ಬ್ರ್ಯಾಂಡ್ಸ್ ಲಿ 2019ರಲ್ಲಿ ಹ್ಯಾಮ್ಲೀಸ್ ಕಂಪನಿಯನ್ನು 67.96 ಯೂರೋಗೆ (ಸುಮಾರು 620 ಕೋಟಿ ರೂ) ಖರೀದಿಸಿತ್ತು. ಹ್ಯಾಮ್ಲೀಸ್​ನ ಅಂತಾರಾಷ್ಟ್ರೀಯ ವ್ಯವಹಾರಗಳ ಒಡೆತನವನ್ನು ರಿಲಾಯನ್ಸ್ ಖರೀದಿಸಿದೆ.

ಇದನ್ನೂ ಓದಿ: ಸಂಬಳದಲ್ಲೇ 30 ವರ್ಷದಲ್ಲಿ 100 ಕೋಟಿ ರೂ ಕೂಡಿಡುವುದು ಹೇಗೆ? ತಿಂಗಳಿಗೆ ಎಷ್ಟು ಹೂಡಿಕೆ ಬೇಕು? ಇಲ್ಲಿದೆ ಡೀಟೇಲ್ಸ್

ಬ್ರಿಟನ್, ಭಾರತ ಸೇರಿದಂತೆ 15 ದೇಶಗಳಲ್ಲಿ 190ಕ್ಕೂ ಹೆಚ್ಚು ಹ್ಯಾಮ್ಲೀಸ್ ಟಾಯ್ ಸ್ಟೋರ್​ಗಳಿವೆ. 2010ರಲ್ಲಿ ಮುಂಬೈ ಮೂಲಕ ಹ್ಯಾಮ್ಲೀಸ್ ಟಾಯ್ ಸ್ಟೋರ್ ದಕ್ಷಿಣ ಏಷ್ಯಾಗೆ ಅಡಿ ಇಟ್ಟಿತು. ಬೆಂಗಳೂರಿನಲ್ಲಿ ಎಂಜಿ ರಸ್ತೆ, ಒರಾಯನ್ ಮಾಲ್, ಫೀನಿಕ್ಸ್ ಮಾರ್ಕೆಟ್ ಸಿಟಿ ಮೊದಲಾದ ಸ್ಥಳಗಳಲ್ಲಿ ಹ್ಯಾಮ್ಲೀಸ್ ಸ್ಟೋರ್​ಗಳಿಗೆ. ಭಾರತದಲ್ಲಿ 26 ನಗರಗಳಲ್ಲಿ 50ಕ್ಕೂ ಹೆಚ್ಚು ಹ್ಯಾಮ್ಲೀಸ್ ಸ್ಟೋರ್​ಗಳಿವೆ. ವಿಶ್ವದ ಹಲವು ಪ್ರಮುಖ ಬ್ರ್ಯಾಂಡ್​ಗಳ ಬೊಂಬೆಗಳನ್ನು ಹ್ಯಾಮ್ಲೀಸ್​ನಲ್ಲಿ ಕಾಣಬಹುದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ