Elon Musk: ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ರಿಂದ 7500 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಷೇರು ಮಾರಾಟ
ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ 110 ಕೋಟಿ ಮೌಲ್ಯದ ಟೆಸ್ಲಾ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಆ ಬಗ್ಗೆ ವಿವರ ಈ ಲೇಖನದಲ್ಲಿದೆ.
ಟೆಸ್ಲಾ ಇಂಕ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲಾನ್ ಮಸ್ಕ್ 21.5 ಲಕ್ಷ ಸ್ಟಾಕ್ಗಳನ್ನು ಮಾರಾಟ ಮಾಡಿದ್ದಾರೆ. ಇದಕ್ಕೂ ಮುನ್ನ ಟ್ವಿಟ್ಟರ್ನಲ್ಲಿ ಅನುಯಾಯಿಗಳನ್ನು ಕೇಳಿದ್ದರು; ತಮ್ಮ ಬಳಿ ಇರುವ ಶೇ 10ರಷ್ಟು ಟೆಸ್ಲಾ ಷೇರುಗಳನ್ನು ಮಾರಬೇಕೆ ಎಂಬ ಅವರ ಪ್ರಶ್ನೆಗೆ ಪ್ರತಿಕ್ರಿಯೆಗಳು ಬಂದಿದ್ದವು. ಪ್ರತಿ ಕಾಂಟ್ರಾಕ್ಟ್ಗೆ 6.24 ಯುಎಸ್ಡಿಯಂತೆ ಸೋಮವಾರದಂದು ಸ್ಟಾಕ್ ಆಪ್ಷನ್ಸ್ ಅನ್ನು ಬಳಸಿಕೊಂಡಿರುವುದಾಗಿ ನಿಯಂತ್ರಕರ ಫೈಲಿಂಗ್ನಲ್ಲಿ ಬುಧವಾರ ತಿಳಿದುಬಂದಿದೆ. ಎಲಾನ್ ಮಸ್ಕ್ 9,34,000 ಷೇರುಗಳನ್ನು ಮಾರಾಟ ಮಾಡಿ, 110 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿದ್ದಾರೆ. ಈ ಷೇರುಗಳನ್ನು ಮಾರಾಟ ಮಾಡಿರುವುದು, “ವರದಿ ಮಾಡಿದ ವ್ಯಕ್ತಿಯ ತೆರಿಗೆಗೆ ಸಂಬಂಧಿಸಿದ ಜವಾಬ್ದಾರಿಗಳ ಸ್ಟಾಕ್ ಆಪ್ಷನ್ಸ್ ಅನ್ನು ಪೂರ್ತಿಗೊಳಿಸುವ ಏಕೈಕ ಉದ್ದೇಶದಿಂದ” ಎಂದು ಫೈಲಿಂಗ್ನಲ್ಲಿ ತಿಳಿಸಲಾಗಿದೆ.
ಈ ಕಾಂಟ್ರಾಕ್ಟ್ಗಳು ಸ್ಟಾಕ್ ಆಪ್ಷನ್ ಮೂಲಕ ಎಲಾನ್ ಮಸ್ಕ್ಗೆ 2012ರಲ್ಲಿ ಬಂದಿದ್ದು, ಇವು ಮುಂದಿನ ವರ್ಷದ ಆಗಸ್ಟ್ನಲ್ಲಿ ಸಿಂಧುತ್ವ ಕಳೆದುಕೊಳ್ಳುತ್ತದೆ. ಬುಧವಾರದಂದು ಟೆಸ್ಲಾ ಷೇರು ಶೇ 4.3ರಷ್ಟು ಏರಿಕೆಯಾಗಿ, 1,067.95 ಯುಎಸ್ಡಿಯಂತೆ ದಿನಾಂತ್ಯ ಕಂಡಿತು. ಈವಾರದಲ್ಲಿ ಆದ ನಷ್ಟದ ಪ್ರಮಾಣವು ಶೇ 13ಕ್ಕಿಂತ ಕಡಿಮೆ ಆಯಿತು. ಸೋಮವಾರ ಮತ್ತು ಮಂಗಳವಾರದಂದು ಎಲಾನ್ ಮಸ್ಕ್ ನಿವ್ವಳ ಆಸ್ತಿಯಲ್ಲಿ 5000 ಕೋಟಿ ಯುಎಸ್ಡಿ ಕಳೆದುಕೊಂಡರು. 2016ರ ನಂತರ ಇದು ಎಲಾನ್ ಮಸ್ಕ್ರ ಮೊದಲ ಮಾರಾಟ ಆಗಿದೆ. ಕೊನೆಯ ಬಾರಿಗೆ ಸ್ಟಾಕ್ ಆಪ್ಷನ್ ಅನ್ನು ಬಳಸಿ ಮತ್ತು ಅದನ್ನು ಮಾರಾಟ ಮಾಡಿ, ಆದಾಯ ತೆರಿಗೆ ಮೊತ್ತವಾದ 590 ಮಿಲಿಯನ್ ಅಮೆರಿಕನ್ ಡಾಲರ್ ಕವರ್ ಮಾಡಲು ಮಾರಿದ್ದರು.
ನವೆಂಬರ್ 6ನೇ ತಾರೀಕಿನಂದು ಎಲಾನ್ ಮಸ್ಕ್ ಟ್ವಿಟರ್ನಲ್ಲಿ ಅಭಿಮತಕ್ಕೆ ಹಾಕಿದ್ದರು. ತೆರಿಗೆಯನ್ನು ತಪ್ಪಿಸುವ ಸಲುವಾಗಿ ಈ ತನಕ ಪಡೆಯದ ಲಾಭದ ಮೊತ್ತವನ್ನು ತೆಗೆದುಕೊಳ್ಳಲು ಟೆಸ್ಲಾದಲ್ಲಿನ ನನ್ನ ಪಾಲಿನ ಶೇ 10ರಷ್ಟು ಷೇರನ್ನು ಮಾರಾಟ ಮಾಡಲು ಪ್ರಸ್ತಾಪಿಸುತ್ತಿದ್ದೇನೆ ಎಂದು ಹೇಳಿದ್ದರು. 35 ಲಕ್ಷ ಮತಗಳ ಪೈಕಿ ಶೇ 58ರಷ್ಟು ಮತಗಳು ಷೇರು ಮಾರಾಟದ ಪರವಾಗಿ ಬಿದ್ದಿದ್ದವು. 50 ವರ್ಷದ ಮಸ್ಕ್ ವಿಶ್ವದ ಸಿರಿವಂತ ವ್ಯಕ್ತಿಯಾಗಿದ್ದು, ಹತ್ತಿರ ಹತ್ತಿರ 30,000 ಕೋಟಿ ಅಮೆರಿಕನ್ ಡಾಲರ್ ಆಸ್ತಿ ಹೊಂದಿದ್ದಾರೆ. ಇದು ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದ ಮೂಲಕ ತಿಳಿದು ಬರುವ ಅಂಶ.
ಟೆಸ್ಲಾದಲ್ಲಿ ಎಲಾನ್ ಮಸ್ಕ್ ಷೇರಿನ ಪಾಲು ಶೇ 60ರಷ್ಟಿದೆ. ತಮ್ಮ ಭರವಸೆಯನ್ನು ಪೂರೈಸುವ ಸಲುವಾಗಿ ಎಲಾನ್ ಮಸ್ಕ್ ಇನ್ನೂ ಹೆಚ್ಚು ಷೇರು ಮಾರಾಟ ಮಾಡಬೇಕಾಗುತ್ತದೆ.
ಇದನ್ನೂ ಓದಿ: Elon Musk: ಈ ವಾರ 3.72 ಲಕ್ಷ ಕೋಟಿ ರೂಪಾಯಿ ಸಂಪತ್ತು ನಷ್ಟ ಅನುಭವಿಸಿದ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್