WPI Inflation: ಸಗಟು ಮಾರಾಟ ಹಣದುಬ್ಬರ ಸೊನ್ನೆಗಿಂತ ಮೇಲೆ; 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ

|

Updated on: Dec 14, 2023 | 1:02 PM

Wholesale Price Index Inflation Rise in November: ಅಕ್ಟೋಬರ್​ನಲ್ಲಿ ಮೈನಸ್ 0.52 ಪ್ರತಿಶತದಷ್ಟಿದ್ದ ಸಗಟು ಬೆಲೆ ಆಧಾರಿತ ಹಣದುಬ್ಬರ ನವೆಂಬರ್​ನಲ್ಲಿ 0.26 ಪ್ರತಿಶತಕ್ಕೆ ಏರಿದೆ. ಡಬ್ಲ್ಯುಪಿಐ ಹಣದುಬ್ಬರ ಮಾರ್ಚ್​ನಿಂದಲೂ ಸೊನ್ನೆಗಿಂತ ಕಡಿಮೆ ಮಟ್ಟದಲ್ಲಿ ಇತ್ತು. ಈಗ ಎಂಟು ತಿಂಗಳಲ್ಲಿ ಮೊದಲ ಬಾರಿಗೆ ಶೂನ್ಯದಿಂದ ಮೇಲಕ್ಕೆ ಬಂದಿದೆ. ಈರುಳ್ಳಿ, ಟೊಮೆಟೋ ಇತ್ಯಾದಿ ಆಹಾರವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ನವೆಂಬರ್​ನಲ್ಲಿ ಡಬ್ಲ್ಯುಪಿಐ ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.

WPI Inflation: ಸಗಟು ಮಾರಾಟ ಹಣದುಬ್ಬರ ಸೊನ್ನೆಗಿಂತ ಮೇಲೆ; 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ
ಹಣದುಬ್ಬರ
Follow us on

ನವದೆಹಲಿ, ಡಿಸೆಂಬರ್ 14: ಭಾರತದ ಸಗಟು ಬೆಲೆ ಆಧಾರಿತ ಹಣದುಬ್ಬರವು (WPI Inflation rate) ಎಂಟು ತಿಂಗಳ ಬಳಿಕ ಮೊದಲ ಬಾರಿಗೆ ಸೊನ್ನೆಗಿಂತ ಮೇಲಿನ ಮಟ್ಟಕ್ಕೆ ಏರಿದೆ. ಸರ್ಕಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ನವೆಂಬರ್​ನಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ. 0.26ಕ್ಕೆ ಏರಿದೆ. ಅಕ್ಟೋಬರ್​ನಲ್ಲಿ ಮೈನಸ್ 0.52ರಷ್ಟಿತ್ತು ಡಬ್ಲ್ಯುಪಿಐ ಇನ್​ಫ್ಲೇಶನ್. ಒಂದು ತಿಂಗಳಲ್ಲಿ 78 ಬೇಸಿಸ್ ಅಂಕಗಳಷ್ಟು ಹಣದುಬ್ಬರ ಹೆಚ್ಚಿರುವುದು ವಿಶೇಷ. ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಸಗಟು ಮಾರಾಟ ಬೆಲೆ ಹಣದುಬ್ಬರ ಬಹಳ ಕಡಿಮೆ ಇದೆ. 2022ರ ನವೆಂಬರ್​ನಲ್ಲಿ ಇದು ಶೇ. 6.12ರಷ್ಟಿತ್ತು.

ಇದೇ ವೇಳೆ, ದೇಶದ ಚಿಲ್ಲರೆ ಮಾರುಕಟ್ಟೆ ಆಧಾರಿತ ಹಣದುಬ್ಬರ ಅಥವಾ ರೀಟೇಲ್ ಇನ್​ಫ್ಲೇಷನ್ ನವೆಂಬರ್​ನಲ್ಲಿ ಗಣನೀಯವಾಗಿ ಹೆಚ್ಚಾಗಿ ಶೇ. 5.55ರಷ್ಟಿದೆ. ಮೂರು ತಿಂಗಳಲ್ಲೇ ಇದು ಗರಿಷ್ಠ ಮಟ್ಟವಾಗಿದೆ. ಅಕ್ಟೋಬರ್​ನಲ್ಲಿ ರೀಟೇಲ್ ಹಣದುಬ್ಬರ ಶೇ. 5ಕ್ಕಿಂತಲೂ ಕಡಿಮೆ ಇದೆ. ತರಕಾರಿ ಇತ್ಯಾದಿ ಆಹಾರವಸ್ತುಗಳ ಬೆಲೆ ಹೆಚ್ಚಳವು ಕಳೆದ ಮೂರು ತಿಂಗಳಿಂದ ಹಣದುಬ್ಬರ ಏರಿಕೆಗೆ ಕಾರಣವಾಗಿದೆ. ಅಂತೆಯೇ, ಸಗಟು ಹಣದುಬ್ಬರ ಹೆಚ್ಚಳಕ್ಕೂ ಆಹಾರವಸ್ತು ಬೆಲೆ ಹೆಚ್ಚಳವೇ ಪ್ರಮುಖ ಕಾರಣವಾಗಿದೆ.

ಇದನ್ನೂ ಓದಿ: US Rates: ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಯಥಾಸ್ಥಿತಿ; ಮುಂದಿನ ವರ್ಷ ದರ ಇಳಿಸುವ ಸುಳಿವು ನೀಡಿದ ಫೆಡರಲ್ ರಿಸರ್ವ್

ನವೆಂಬರ್ ತಿಂಗಳಲ್ಲಿ ಸಗಟು ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ಗುಂಪು ಶೇ. 1.9ರಷ್ಟು ಬೆಲೆ ಹೆಚ್ಚಳ ಕಂಡಿದೆ. ಅದರಲ್ಲೂ ತರಕಾರಿಗಳ ಬೆಲೆ ಅಕ್ಟೋಬರ್​ನದ್ದಕ್ಕಿಂತ ಶೇ. 16.5ರಷ್ಟು ಹೆಚ್ಚಾಗಿದೆ. ಈರುಳ್ಳಿಯಂತೂ ಶೇ. 41.3ರಷ್ಟು ಬೆಲೆ ಹೆಚ್ಚಿಸಿಕೊಂಡಿದೆ.

ಹಣದುಬ್ಬರ ನಿರ್ಧಾರ ಹೇಗೆ?

ಜನಸಾಮಾನ್ಯರು ಸಾಮಾನ್ಯವಾಗಿ ಬಳಸುವ ವಸ್ತುಗಳ ಬೆಲೆಯಲ್ಲಿನ ವ್ಯತ್ಯಾಸವನ್ನು ಪ್ರತಿನಿಧಿಸುತ್ತದೆ ಹಣದುಬ್ಬರ. ಹಣ್ಣು, ತರಕಾರಿ, ಬೇಳೆ ಕಾಳು ಇತ್ಯಾದಿ ಆಹಾರ ವಸ್ತುಗಳು, ಪೆಟ್ರೋಲ್ ಡೀಸೆಲ್, ಎಲೆಕ್ಟ್ರಾನಿಕ್ ಉತ್ಪನ್ನಗಳು ಹೀಗೆ ವಿವಿಧ ವಸ್ತುಗಳ ಬೆಲೆ ವ್ಯತ್ಯಾಸದ ಮೂಲಕ ಹಣದುಬ್ಬರವನ್ನು ಗುರುತಿಸಲಾಗುತ್ತದೆ. ತರಕಾರಿ, ಬೇಳೆ ಕಾಳು, ಪೆಟ್ರೋಲ್ ಇತ್ಯಾದಿ ಹೆಚ್ಚು ಬಳಕೆಯ ವಸ್ತುಗಳ ಬೆಲೆ ವ್ಯತ್ಯಯಕ್ಕೆ ಹೆಚ್ಚು ತೂಕ ಕೊಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ