ನವದೆಹಲಿ, ಡಿಸೆಂಬರ್ 14: ಭಾರತದಲ್ಲಿ ಇವಿ ಫ್ಯಾಕ್ಟರಿ ತೆರೆಯುವವರೆಗೂ ಕಾರುಗಳ ಆಮದಿಗೆ ತೆರಿಗೆ ವಿನಾಯಿತಿ ಕೊಡಬೇಕೆಂದು ಇಲಾನ್ ಮಸ್ಕ್ ಅವರ ಟೆಸ್ಲಾ ಸಂಸ್ಥೆ ಮಾಡಿರುವ ಮನವಿಯನ್ನು ಸರ್ಕಾರ ಪುರಸ್ಕರಿಸುವ ಸಾಧ್ಯತೆ ಇಲ್ಲ. ಭಾರತಕ್ಕೆ ಯಾವುದೇ ಎಲೆಕ್ಟ್ರಿಕ್ ವಾಹನಗಳ ಆಮದು (EV import) ಮಾಡಿಕೊಳ್ಳಲು ಸಬ್ಸಿಡಿ ನೀಡುವ, ತೆರಿಗೆ ವಿನಾಯಿತಿ (tax exemption) ನೀಡುವ ಯಾವ ಪ್ರಸ್ತಾಪವೂ ತನ್ನ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಟೆಸ್ಲಾ ಅಥವಾ ಬೇರೆ ಯಾವುದಾರೂ ವಿದೇಶೀ ಕಾರು ತಯಾರಕ ಸಂಸ್ಥೆಗೆ ವಿಶೇಷ ವಿನಾಯಿತಿ ನೀಡಲಾಗಿದೆಯಾ ಎಂಬ ಪ್ರಶ್ನೆಗೆ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಇಂದು ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕಾರು ಆಮದು ಮತ್ತು ಕಾರು ತಯಾರಕಾ ಘಟಕ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಟೆಸ್ಲಾ ಕಂಪನಿ ಮಧ್ಯೆ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಆದರೆ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ. ಭಾರತ ಸದ್ಯ ಆಮದಿತ ಕಾರುಗಳ ಮೇಲೆ ಶೇ. 60ರಿಂದ 125ರಷ್ಟು ಇಂಪೋರ್ಟ್ ಡ್ಯೂಟಿ ಹೇರುತ್ತದೆ. 40,000 ಡಾಲರ್ಗಿಂತ (ಸುಮಾರು 34 ಲಕ್ಷ ರೂ) ಕಡಿಮೆ ಬೆಲೆಯ ಕಾರಿನ ಆಮದಿಗೆ ಶೇ. 60ರಷ್ಟು ಆಮದು ಸುಂಕ ಇದೆ. 40,000 ಡಾಲರ್ಗಿಂತ ಹೆಚ್ಚಿನ ಬೆಲೆಯ ಕಾರಿನ ಆಮದಿಗೆ ಶೇ. 100ರಷ್ಟು ಸುಂಕ ಹಾಕಲಾಗುತ್ತದೆ. ಅಂದರೆ 35 ಲಕ್ಷ ರೂ ಬೆಲೆಯ ಕಾರನ್ನು ಭಾರತಕ್ಕೆ ತಂದರೆ ಅದರ ಬೆಲೆ 70 ಲಕ್ಷ ರೂ ಆಗುತ್ತದೆ. ಇನ್ನು, ಬಳಸಿದ ಕಾರು (ಯೂಸ್ಡ್ ಕಾರು) ಆಮದುಗೊಂಡರೆ ಅದಕ್ಕೆ ಶೇ. 125ರಷ್ಟು ಆಮದು ಸುಂಕ ಇರುತ್ತದೆ.
ಇದನ್ನೂ ಓದಿ: ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚು ವೇಗ: ಶೇ. 6.3ರಿಂದ ಶೇ. 6.7ಕ್ಕೆ ನಿರೀಕ್ಷೆ ಹೆಚ್ಚಿಸಿದ ಎಡಿಬಿ
ಭಾರತದ ಆಟೊಮೊಬೈಲ್ ಮಾರುಕಟ್ಟೆ ದಿನೇದಿನೇ ಬಲಗೊಳ್ಳುತ್ತಿದೆ. ಇದರ ಅರಿವು ಮಸ್ಕ್ ಅವರಿಗಿದೆ. ಅವರ ಟೆಸ್ಲಾ ಕಂಪನಿ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಯಲ್ಲಿ ನಂಬರ್ ಒನ್. ಭಾರತದ ಮಾರುಕಟ್ಟೆಯಲ್ಲಿ ನೆಲೆ ಸಿಕ್ಕರೆ ತನ್ನ ಸ್ಥಾನ ಭದ್ರಪಡಿಸಿಕೊಳ್ಳಬಹುದು. ಭಾರತದಲ್ಲಿ ಕಾರು ಉತ್ಪಾದಿಸಲು ಫ್ಯಾಕ್ಟರಿ ಸ್ಥಾಪನೆಗೆ ಟೆಸ್ಲಾ ಒಪ್ಪಿದೆ.
ಆದರೆ, ಎರಡು ವರ್ಷದವರೆಗೂ ಕಾರು ಆಮದಿಗೆ ಶೇ. 15ರಷ್ಟು ಮಾತ್ರ ಸುಂಕ ವಿಧಿಸುವ ಕ್ರಮ ಅನುಸರಿಸಿದರೆ ಮಾತ್ರ ತಾನು ಎಲೆಕ್ಟ್ರಿಕ್ ಕಾರು ತಯಾರಿಕೆಯ ಫ್ಯಾಕ್ಟರಿ ಸ್ಥಾಪಿಸುವುದಾಗಿ ಟೆಸ್ಲಾ ಅಧಿಕಾರಿಗಳು ಹಾಕಿರುವ ಷರತ್ತು.
ಇದನ್ನೂ ಓದಿ: WPI Inflation: ಸಗಟು ಮಾರಾಟ ಹಣದುಬ್ಬರ ಸೊನ್ನೆಗಿಂತ ಮೇಲೆ; 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ
ಒಂದು ವೇಳೆ ಈ ಷರತ್ತಿಗೆ ಒಪ್ಪಿದರೆ ಬೇರೆ ವಿದೇಶೀ ಕಂಪನಿಗಳೂ ಕೂಡ ಇಂಥದ್ದೇ ವಿನಾಯಿತಿಗಳನ್ನು ಪಡೆಯಲು ಯತ್ನಿಸಬಹುದು ಎಂಬುದು ಸರ್ಕಾರದ ಸಂದಿಗ್ಧತೆ ಇರಬಹುದು. ಟೆಸ್ಲಾ ಸಂಸ್ಥೆಯ ಈ ಪ್ರಸ್ತಾಪವನ್ನು ಸರ್ಕಾರ ಒಪ್ಪುವ ಸಾಧ್ಯತೆ ಕಡಿಮೆ. ಈಗ ಇಲಾನ್ ಮಸ್ಕ್ ಅವರು ಭಾರತದಲ್ಲಿ ಕಾರು ತಯಾರಿಕೆಯ ಘಟಕ ತಯಾರಿಸುವ ಯೋಜನೆಯನ್ನು ಮುಂದುವರಿಸುತ್ತಾರಾ ಎಂಬುದು ಪ್ರಶ್ನೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ