ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚು ವೇಗ: ಶೇ. 6.3ರಿಂದ ಶೇ. 6.7ಕ್ಕೆ ನಿರೀಕ್ಷೆ ಹೆಚ್ಚಿಸಿದ ಎಡಿಬಿ

ADB report On Indian Economy: ಭಾರತದ ಜಿಡಿಪಿ ಬೆಳವಣಿಗೆ ಬಗ್ಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಆಶಾದಾಯಕವಾಗಿದೆ. ಶೇ. 6.3ರಿಂದ ಶೇ. 6.7ಕ್ಕೆ ಬೆಳವಣಿಗೆಯ ನಿರೀಕ್ಷೆ ಹೆಚ್ಚಿಸಿದೆ. ಸೆಪ್ಟೆಂಬರ್​ನಲ್ಲಿ ಪ್ರಕಟಗೊಂಡ ತನ್ನ ವರದಿಯಲ್ಲಿ ಭಾರತದ ಜಿಡಿಪಿ 2023-24ರಲ್ಲಿ ಶೇ 6.3ರಷ್ಟು ಬೆಳೆಯಬಹುದು ಎಂದು ಎಡಿಬಿ ಹೇಳಿತ್ತು. ಡಿಸೆಂಬರ್ ವರದಿಯಲ್ಲಿ ತನ್ನ ಅಭಿಪ್ರಾಯವನ್ನು ತುಸು ಬದಲಿಸಿದೆ. ಈ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 5.4ರಷ್ಟು ಇರಬಹುದು ಎಂಬ ತನ್ನ ಹಿಂದಿನ ಅಂದಾಜನ್ನು ಎಡಿಬಿ ತನ್ನ ಹೊಸ ವರದಿಯಲ್ಲೂ ಪುನರುಚ್ಚರಿಸಿದೆ.

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೆಚ್ಚು ವೇಗ: ಶೇ. 6.3ರಿಂದ ಶೇ. 6.7ಕ್ಕೆ ನಿರೀಕ್ಷೆ ಹೆಚ್ಚಿಸಿದ ಎಡಿಬಿ
ಜಿಡಿಪಿ ಬೆಳವಣಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 14, 2023 | 2:23 PM

ನವದೆಹಲಿ, ಡಿಸೆಂಬರ್ 14: ಈ ಹಣಕಾಸು ವರ್ಷದ (2023-24ರಲ್ಲಿ) ಎರಡನೇ ಕ್ವಾರ್ಟರ್​ನಲ್ಲಿ ಭಾರತದ ಆರ್ಥಿಕತೆ ನಿರೀಕ್ಷೆಮೀರಿ ಬೆಳೆದಿರುವುದರ (GDP growth) ಬೆನ್ನಲ್ಲೇ ಸಾಕಷ್ಟು ಆರ್ಥಿಕ ತಜ್ಞರು ಭಾರತದ ಜಿಡಿಪಿ ಬೆಳವಣಿಗೆಯಲ್ಲಿ ತಮ್ಮ ನಿರೀಕ್ಷೆ (Growth Projection) ಹೆಚ್ಚಿಸಿದ್ದಾರೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ವೃದ್ಧಿ ಬಗ್ಗೆ ಈ ಹಿಂದೆ ಮಾಡಿದ್ದ ಅಂದಾಜನ್ನು ಈಗ ಪರಿಷ್ಕರಿಸಿದೆ. ಶೇ. 6.3ರಷ್ಟು ಬೆಳೆಯಬಹುದು ಎಂದು ಹೇಳಿದ್ದ ಎಡಿಬಿ ಇದೀಗ ತನ್ನ ಅಭಿಪ್ರಾಯ ಬದಲಿಸಿದ್ದು, ಜಿಡಿಪಿ ಶೇ. 6.7ರಷ್ಟು ಬೆಳೆಯಲಿದೆ ಎಂದಿದೆ. ನಿನ್ನೆ ಬಿಡುಗಡೆ ಆದ ‘ಏಷ್ಯನ್ ಡೆವಲಪ್ಮೆಂಟ್ ಔಟ್​ಲುಕ್ ಡಿಸೆಂಬರ್ 2023’ ವರದಿಯಲ್ಲಿ ಈ ಪರಿಷ್ಕೃತ ಅಂಶ ಇದೆ.

ಭಾರತದಲ್ಲಿ ಜಿಡಿಪಿ ಈ ಹಣಕಾಸು ವರ್ಷದ ಮೊದಲಾರ್ಧ ಶೇ. 7.7ರಷ್ಟು ಬೆಳೆದಿದೆ. ಏಪ್ರಿಲ್​ನಿಂದ ಜೂನ್​ವರೆಗಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ. 7.8, ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ. 7.6ರಷ್ಟು ಬೆಳವಣಿಗೆ ದಾಖಲಿಸಿದೆ. ಎರಡನೇ ಕ್ವಾರ್ಟರ್​ನಲ್ಲಿ ಆದ ಬೆಳವಣಿಗೆಯ ಗತಿಯನ್ನು ಸರ್ಕಾರ ಕೂಡ ನಿರೀಕ್ಷಿಸಿರಲಿಲ್ಲ.

ತಯಾರಿಕೆ, ಗಣಿಗಾರಿಕೆ, ಕಟ್ಟಡ ನಿರ್ಮಾಣ, ಯುಟಿಲಿಟಿ ಮೊದಲಾದ ಕೈಗಾರಿಕ ವಲಯಗಳು ಎರಡಂಕಿ ದರದಲ್ಲಿ ಬೆಳೆದಿರುವುದು ತನ್ನ ಎಕನಾಮಿಕ್ ಡಾಟಾದಿಂದ ತಿಳಿದುಬಂದಿದೆ ಎಂದು ಎಡಿಬಿ ಹೇಳಿದೆ.

ಇದನ್ನೂ ಓದಿ: WPI Inflation: ಸಗಟು ಮಾರಾಟ ಹಣದುಬ್ಬರ ಸೊನ್ನೆಗಿಂತ ಮೇಲೆ; 8 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ

‘2023-24ರ ಹಣಕಾಸು ವರ್ಷವನ್ನು ಒಟ್ಟಾರೆಯಾಗಿ ನೋಡಿದಾಗ ಕೃಷಿ ಕ್ಷೇತ್ರ ನಿರೀಕ್ಷೆಗಿಂತಲೂ ಮಂದ ಬೆಳವಣಿಗೆ ಸಾಧಿಸಲಿದೆ. ಆದರೆ, ಕೃಷಿ ಹಿನ್ನಡೆ ಮುಚ್ಚುವ ರೀತಿಯಲ್ಲಿ ಕೈಗಾರಿಕಾ ವಲಯಗಳು ಬೆಳೆಯುತ್ತವೆ,’ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ನ ಡಿಸೆಂಬರ್ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಫಿಲಿಪ್ಪೈನ್ಸ್​ನ ಮನೀಲಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, 2024-25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.7ರಷ್ಟು ಬೆಳೆಯಬಹುದು ಎಂದು ಸೆಪ್ಟೆಂಬರ್​ನಲ್ಲಿ ಮಾಡಿದ್ದ ಅಂದಾಜುನ್ನು ಡಿಸೆಂಬರ್ ವರದಿಯಲ್ಲೂ ಪುನರುಚ್ಚರಿಸಿದೆ.

ಇನ್ನು, ಈ ಹಣಕಾಸು ವರ್ಷದಲ್ಲಿ ಭಾರತದ ಹಣದುಬ್ಬರ ಶೇ. 5.5ರಷ್ಟು ಇರಬಹುದು ಎಂಬ ತನ್ನ ಹಿಂದಿನ ಎಣಿಕೆಯನ್ನೇ ಎಡಿಬಿ ಮತ್ತೆ ಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿರುವ ಅಂದಾಜು ಪ್ರಕಾರ ಹಣದುಬ್ಬರ ಶೇ. 5.4ರಷ್ಟು ಆಗಬಹುದು.

ಇದನ್ನೂ ಓದಿ: Sensex Record: ಅಮೆರಿಕ ಬಡ್ಡಿದರ ಇಳಿಕೆಗೆ ಸುಳಿವು; ಗರಿಗೆದರಿದ ಭಾರತದ ಷೇರುಮಾರುಕಟ್ಟೆ

ಆದರೆ, ಜಿಡಿಪಿ ಬೆಳವಣಿಗೆ ಬಗ್ಗೆ ಆರ್​ಬಿಐ ತುಸು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7ರಷ್ಟು ಆಗಬಹುದು ಎಂದಿದೆ. ಕೆಲ ಖಾಸಗಿ ಸಂಸ್ಥೆಗಳ ಹಣಕಾಸು ವಿಶ್ಲೇಷಕರು ಹೆಚ್ಚು ಆಶಾದಾಯಕವಾಗಿದ್ದು, ಜಿಡಿಪಿ ಶೇ. 7ಕ್ಕಿಂತಲೂ ಹೆಚ್ಚಿನ ದರದಲ್ಲಿ ಬೆಳೆಯಬಹುದು ಎಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ