ಚಿನ್ನದ ಬೆಲೆ ಹೆಚ್ಚಳದ ಹಿಂದೆ ಇದೆಯಾ ಅಮೆರಿಕದ ಬಡ್ಡಿದರ? ಬಡ್ಡಿಗೂ ಚಿನ್ನಕ್ಕೂ ಏನಿದು ಸಂಬಂಧ?
US Fed Rates and Gold Rates: ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾದರೆ ಚಿನ್ನ, ಷೇರುಪೇಟೆ ಮತ್ತಿತರ ಕಡೆಯಲ್ಲಿ ಹೂಡಿಕೆಗಳು ಹೊರಬರಬಹುದು ಎಂಬುದು ಸಾಂಪ್ರದಾಯಿಕವಾಗಿರುವ ನಂಬಿಕೆ. ಬಡ್ಡಿದರಕ್ಕೆ ಅನುಗುಣವಾಗಿ ಷೇರು ಹೂಡಿಕೆಗಳು ವರ್ತಿಸುವುದು ಹೌದಾದರೂ ಚಿನ್ನದ ಬೆಲೆ ವ್ಯತ್ಯಯಕ್ಕೆ ಬೇರೆ ಪ್ರಮುಖ ಕಾರಣಗಳಿವೆ. ಅಮೆರಿಕದ ಫೆಡರಲ್ ರೆಸರ್ವ್ ಬ್ಯಾಂಕ್ ತನ್ನ ಬಡ್ಡಿದರವನ್ನು ಸತತ ಮೂರನೇ ಬಾರಿ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಮುಂದಿನ ವರ್ಷ ದರಕಡಿತದ ಸಾಧ್ಯತೆ ಬಗ್ಗೆ ಸುಳಿವನ್ನೂ ನೀಡಿದೆ.
ನವದೆಹಲಿ, ಡಿಸೆಂಬರ್ 14: ಇವತ್ತು ಅಮೆರಿಕದಲ್ಲಿ ಬಡ್ಡಿದರವನ್ನು ಹೆಚ್ಚಿಸದೇ ಇರಲು ನಿರ್ಧರಿಸಲಾಗಿರುವ ಸುದ್ದಿ ಒಂದೆಡೆ ಇದೆ. ಚಿನ್ನದ ಬೆಲೆ ಗ್ರಾಮ್ಗೆ ಬರೋಬ್ಬರಿ 100 ರೂನಷ್ಟು ಏರಿರುವ ಸಂಗತಿ ಇನ್ನೊಂದೆಡೆ ಇದೆ. ಅಮೆರಿಕದಲ್ಲಿ ಶೀತವಾದರೆ ಬೇರೆ ಕಡೆ ನೆಗಡಿ ಆಗುತ್ತದಂತೆ. ಹಾಗೆಯೇ, ವಿಶ್ವದ ದೊಡ್ಡಣ್ಣ ಎನಿಸಿರುವ ಅಮೆರಿಕದಲ್ಲಿನ ವಿದ್ಯಮಾನಗಳು ಬೇರೆ ಆರ್ಥಿಕ ಪರಿಸರದ ಮೇಲೆ ಪರಿಣಾಮ ಬೀರುವುದು ನಿಜ. ಆದರೆ, ಚಿನ್ನದ ವಿಚಾರದಲ್ಲಿ ಇದು ನಿಜವಾ? ಅಮೆರಿಕದಲ್ಲಿ ಬಡ್ಡಿದರ (US Fed Rates) ಹೆಚ್ಚಾದರೆ ಚಿನ್ನದ ಬೆಲೆ ಕಡಿಮೆ ಆಗುತ್ತದೆ. ಬಡ್ಡಿದರ ಕಡಿಮೆ ಆಗುತ್ತಿದ್ದರೆ ಚಿನ್ನದ ಬೆಲೆ ಹೆಚ್ಚಾಗುತ್ತದೆ ಎಂಬ ಮಾತು ಒಂದಷ್ಟು ಮಟ್ಟಕ್ಕೆ ನಿಜವೂ ಹೌದು, ಸುಳ್ಳೂ ಹೌದು.
ಬಡ್ಡಿದರದ ಪರಿಣಾಮಗಳೇನು?
ಅಮೆರಿಕದಲ್ಲಿ ಬಡ್ಡಿದರ ಹೆಚ್ಚಾದರೆ ಹೂಡಿಕೆದಾರರು ಸರ್ಕಾರಿ ಬಾಂಡ್ಗಳ ಮೇಲೆ ಹಣ ವರ್ಗಾಯಿಸಲು ಬಯಸುತ್ತಾರೆ. ಯಾಕೆಂದರೆ, ಈ ಬಾಂಡ್ಗಳು ಹೆಚ್ಚಿನ ಯೀಲ್ಡ್ ಕೊಡುವುದರಿಂದ ಸುರಕ್ಷಿತ ಮತ್ತು ಹೆಚ್ಚು ಆಕರ್ಷಕ ಹೂಡಿಕೆ ತಾಣವಾಗಿ ಕಂಡು ಬರುತ್ತವೆ.
ಇದನ್ನೂ ಓದಿ: ಅಮೆರಿಕದಲ್ಲಿ ಈ ಬಾರಿಯೂ ಬಡ್ಡಿದರ ಯಥಾಸ್ಥಿತಿ; ಮುಂದಿನ ವರ್ಷ ದರ ಇಳಿಸುವ ಸುಳಿವು ನೀಡಿದ ಫೆಡರಲ್ ರಿಸರ್ವ್
ತಜ್ಞರ ಪ್ರಕಾರ, ಈ ಮಾತು ಷೇರು ಮಾರುಕಟ್ಟೆಗೆ ಹೆಚ್ಚು ಅನ್ವಯಿಸುತ್ತದೆ. ಅಮೆರಿಕದ ಬಡ್ಡಿದರ ಹೆಚ್ಚಾದರೆ ಷೇರುಗಳ ಮೇಲಿದ್ದ ಹೂಡಿಕೆಗಳು ಬಾಂಡ್ಗಳಿಗೆ ಹರಿದುಹೋಗಬಹುದು. ಕುತೂಹಲ ಎಂದರೆ, ಈ ಬಾರಿ ಷೇರು ಮಾರುಕಟ್ಟೆ ಉಬ್ಬುತ್ತಿದೆ. ಇದಕ್ಕೆ ಕಾರಣ, ಹಣದುಬ್ಬರ ಕಡಿಮೆಗೊಂಡು ಅಮೆರಿಕದ ಆರ್ಥಿಕತೆಯ ವೇಗಕ್ಕೆ ಮತ್ತೆ ಪುಷ್ಟಿ ಕೊಡುವ ಸಾಧ್ಯತೆ ಕಂಡು ಬಂದಿರುವುದು.
ಇನ್ನು, ಚಿನ್ನಕ್ಕೂ ಬಡ್ಡಿದರಕ್ಕೂ ವೈರುದ್ಧ್ಯ ಸಂಬಂಧ ಇದೆಯಾ? ಹಿಂದೆಲ್ಲಾ ಅಮೆರಿಕದ ಬಡ್ಡಿದರ ಇಳಿಕೆಯಾದಂತೆ ಚಿನ್ನದ ಬೆಲೆ ಹೆಚ್ಚುತ್ತಿದ್ದ ಪ್ರವೃತ್ತಿ ಕಂಡುಬಂದಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಂಥದ್ದು ಕಂಡುಬಂದಿಲ್ಲ. ಬಡ್ಡಿದರ ಹೆಚ್ಚಾದಂತೆ ಚಿನ್ನದ ಬೆಲೆಯೂ ಹೆಚ್ಚಿರುವ ನಿದರ್ಶನ ಸಾಕಷ್ಟಿದೆ.
ಇದನ್ನೂ ಓದಿ: Sensex Record: ಅಮೆರಿಕ ಬಡ್ಡಿದರ ಇಳಿಕೆಗೆ ಸುಳಿವು; ಗರಿಗೆದರಿದ ಭಾರತದ ಷೇರುಮಾರುಕಟ್ಟೆ
ಚಿನ್ನದ ಬೆಲೆಯ ಮೇಲೆ ಬಡ್ಡಿದರ ಉಂಟು ಮಾಡುವ ಪರಿಣಾಮ ಸೀಮಿತ ಪ್ರಮಾಣದಲ್ಲಿರುವುದು ಹೌದು. ಅದರ ಬೆಲೆ ಮೇಲೆ ಪರಿಣಾಮ ಬೀರುವ ಬೇರೆ ಪ್ರಮುಖ ಅಂಶಗಳು ಉಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ