ನವದೆಹಲಿ, ಫೆಬ್ರುವರಿ 12: ಭಾರತ ಸರ್ಕಾರ ಚೀನೀ ಕಂಪನಿಗಳ ಮೇಲೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತಿದ್ದರೆ ಸ್ಮಾರ್ಟ್ಫೋನ್ ಬಿಡಿಭಾಗ ಪೂರೈಕೆದಾರರು (smartphone component suppliers) ಭಾರತಕ್ಕೆ ಬರಲು ಹಿಂದೇಟು ಹಾಕಬಹುದು ಎಂದು ಶಿಯೋಮಿ ಸಂಸ್ಥೆ (Xiaomi) ಕಳವಳ ವ್ಯಕ್ತಪಡಿಸಿದೆ. ಕಳೆದ ವಾರ (ಫೆ. 6) ಚೀನಾದ ಶಿಯೋಮಿ ಸಂಸ್ಥೆ ಸರ್ಕಾರಕ್ಕೆ ಬರೆದ ಪತ್ರದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿರುವುದನ್ನು ರಾಯ್ಟರ್ಸ್ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಪಾಲು ಹೊಂದಿರುವ ಶಿಯೋಮಿ ಸಂಸ್ಥೆ, ಭಾರತದಲ್ಲಿ ಮಾರಾಟವಾಗುವ ತನ್ನ ಫೋನ್ಗಳನ್ನು ಇಲ್ಲಿಯೇ ಅಸೆಂಬಲ್ ಮಾಡುತ್ತದೆ. ಅದಕ್ಕೆ ಬಳಸುವ ಬಿಡಿಭಾಗಗಳು ಹೆಚ್ಚಾಗಿ ಭಾರತದಲ್ಲಿ ತಯಾರಾಗುವಂಥವೇ. ಉಳಿದ ಬಿಡಿಭಾಗಗಳನ್ನು ಚೀನಾ ಮತ್ತಿತರ ದೇಶಗಳಿಂದ ಆಮದು ಮಾಡಿ, ಬಳಿಕ ಭಾರತದಲ್ಲಿ ಅಸೆಂಬಲ್ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕೆಲ ನಿರ್ದಿಷ್ಟ ಸ್ಮಾರ್ಟ್ಫೋನ್ ಬಿಡಿಭಾಗಗಳಿಗೆ ಆಮದು ಸುಂಕ ಕಡಿಮೆ ಮಾಡಬೇಕು ಎಂದೂ ಶಿಯೋಮಿ ತನ್ನ ಪತ್ರದಲ್ಲಿ ಮನವಿ ಮಾಡಿದೆ.
ಭಾರತದಲ್ಲಿ ಆ್ಯಪಲ್, ಶಿಯೋಮಿ ಮೊದಲಾದ ಕಂಪನಿಗಳ ಸ್ಮಾರ್ಟ್ಫೋನ್ಗಳು ತಯಾರಾಗುತ್ತವಾದರೂ ಅವೆಲ್ಲವೂ ಅಸೆಂಬ್ಲಿಂಗ್ ಆಗುವಂಥವು. ಅಂದರೆ ಈ ಮೊಬೈಲ್ನ ವಿವಿಧ ಬಿಡಿಭಾಗಗಳನ್ನು ಚೀನಾ, ವಿಯೆಟ್ನಾಂ ಮೊದಲಾದ ದೇಶಗಳಲ್ಲಿರುವ ಬೇರೆ ಬೇರೆ ಪೂರೈಕೆದಾರರಿಂದ ಆಮದು ಮಾಡಿಕೊಳ್ಳಬೇಕು. ಭಾರತದಲ್ಲಿ ಇತ್ತೀಚೆಗೆ ಸ್ಮಾರ್ಟ್ಫೋನ್ ಬಿಡಿಭಾಗಗಳನ್ನು ತಯಾರಿಸುವ ಕಾರ್ಯವಾಗುತ್ತಿದೆ. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಭಾರತದಲ್ಲಿ ಕಾಂಪೊನೆಂಟ್ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಅನ್ನು ಅಭಿವೃದ್ಧಿಗೊಳಿಸಲು ಸರ್ಕಾರದಿಂದ ಏನು ಸಹಾಯವಾಗಬೇಕು ಎಂದು ಸ್ಮಾರ್ಟ್ಫೋನ್ ಕಂಪನಿಗಳನ್ನು ಇತ್ತೀಚೆಗೆ ಕೇಳಿತ್ತು. ಈ ಹಿನ್ನೆಲೆಯಲ್ಲಿ ಶಿಯೋಮಿ ಸಂಸ್ಥೆ, ಚೀನೀ ಕಂಪನಿಗಳನ್ನು ಗುರಿ ಮಾಡಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಪೇಟಿಎಂಗೆ ನಿಲ್ಲದ ತಲೆನೋವು; ಚೀನಾದ ಜಾಡು ಹುಡುಕುತ್ತಿರುವ ಸರ್ಕಾರ
ಬಿಡಿಭಾಗ ಪೂರೈಕೆದಾರರು ಭಾರತದಲ್ಲಿ ಘಟಕ ಸ್ಥಾಪಿಸಲು ಆಸಕ್ತಿ ತೋರುವ ನಿಟ್ಟಿನಲ್ಲಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ತೇಜನ ನೀಡಬೇಕು. ಭಾರತದಲ್ಲಿ ಚೀನೀ ಮೂಲದ ಕಂಪನಿಗಳಿಗೆ ಎದುರಾಗುತ್ತಿರುವ ಸವಾಲುಗಳು ಬಿಡಿಭಾಗ ಪೂರೈಕೆದಾರರನ್ನು ಹಿಂದೇಟು ಹಾಕುವಂತೆ ಮಾಡುತ್ತಿದೆ ಎಂದು ಶಿಯೋಮಿ ಇಂಡಿಯಾ ಅಧ್ಯಕ್ಷ ಮುರಳೀಕೃಷ್ಣನ್ ಬಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ