ಖಾಸಗಿ ವಲಯದ ಯೆಸ್ ಬ್ಯಾಂಕ್ ಅಕ್ಟೋಬರ್ 22ನೇ ತಾರೀಕಿನ ಶುಕ್ರವಾರದಂದು 2021ರ ಜುಲೈನಿಂದ ಸೆಪ್ಟೆಂಬರ್ ತನಕದ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 74.3ರಷ್ಟು ಏಕೀಕೃತ ಲಾಭದಲ್ಲಿ ಹೆಚ್ಚಳವಾಗಿ, 225.50 ಕೋಟಿ ರೂಪಾಯಿ ಲಾಭವಾಗಿದೆ. ಪ್ರಾವಿಷನ್ಗಳಲ್ಲಿ ಗಮನಾರ್ಹ ಇಳಿಕೆ ಹಾಗೂ ಇತರ ಆದಾಯದಲ್ಲಿ ಹೆಚ್ಚಳದಿಂದಾಗಿ ಈ ಬೆಳವಣಿಗೆ ಆಗಿದೆ. ವರ್ಷದ ಹಿಂದೆ ಯೆಸ್ ಬ್ಯಾಂಕ್ಗೆ ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 129.37 ಕೋಟಿ ರೂಪಾಯಿ ಲಾಭ ಬಂದಿತ್ತು. ಬಡ್ಡಿ ಗಳಿಕೆಯಲ್ಲಿ ಬಡ್ಡಿ ವೆಚ್ಚವನ್ನು ಕಳೆದರೆ ಉಳಿದಂಥ ವ್ಯತ್ಯಾಸವಾದ ನಿವ್ವಳ ಬಡ್ಡಿ ಆದಾಯದಲ್ಲಿ ಕಳೆದ ವರ್ಷಕ್ಕಿಂತ ಶೇ 23.4ರಷ್ಟು ಕಡಿಮೆ ಆಗಿದ್ದು, Q2FY22ರಲ್ಲಿ 1512.24 ಕೋಟಿ ರೂಪಾಯಿ ಮುಟ್ಟಿದೆ. ಅಡ್ವಾನ್ಸಸ್ನಲ್ಲಿ ಶೇ 3.5ರಷ್ಟು ಹೆಚ್ಚಳವಾಗಿದ್ದರೆ, ಠೇವಣಿಯಲ್ಲಿ ಶೇ 30.1ರಷ್ಟು ಮೇಲೇರಿದೆ.
ಪ್ರಸಕ್ತ ತ್ರೈಮಾಸಿಕದಲ್ಲಿ ಮುಂಗಡವು (ಅಡ್ವಾನ್ಸಸ್) 1,72,839 ಕೋಟಿ ರೂಪಾಯಿ ಇದೆ. FY21Q2ನಲ್ಲಿ 1,66,923 ಕೋಟಿ ರೂಪಾಯಿ ಇತ್ತು. ಇನ್ನು ಠೇವಣಿ ವಿಚಾರಕ್ಕೆ ಬಂದರೆ, ವರ್ಷದಿಂದ ವರ್ಷಕ್ಕೆ 1,35,815 ಕೋಟಿ ರೂಪಾಯಿಯಿಂದ 1,76,672 ಕೋಟಿ ರೂಪಾಯಿಗೆ ಏರಿಕೆ ಕಂಡಿದೆ. ಪ್ರಾವಿಷನ್ಸ್ ಮತ್ತು ಕಂಟಿಜೆನ್ಸೀಸ್ (ಅನಿರೀಕ್ಷಿತ ವೆಚ್ಚಕ್ಕಾಗಿ ಮೀಸಲಿರಿಸಿದ್ದು) ವರ್ಷದ ಹಿಂದಿನಕ್ಕಿಂತ ಶೇ 65ರಷ್ಟು ಇಳಿಕೆಯಾಗಿ 377 ಕೋಟಿ ರೂಪಾಯಿ ಮುಟ್ಟಿದೆ. ಇನ್ನು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 17.4ರಷ್ಟು ಕುಸಿದಿದೆ.
ಆಸ್ತಿಯ ಗುಣಮಟ್ಟವು ಸುಧಾರಣೆ ಕಂಡಿದೆ. ಅನುತ್ಪಾದಕ ಆಸ್ತಿ (NPAs) ಸಗಟು ಮುಂಗಡಕ್ಕೆ ಹೋಲಿಸಿದರೆ ಪ್ರಸಕ್ತ ತ್ರೈಮಾಸಿಕದಲ್ಲಿ ಶೇ 14.97ರಷ್ಟು ಕುಸಿದಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಶೇ 15.60 ಇತ್ತು. ನಿವ್ವಳ ಎನ್ಪಿಎ ಕೂಡ ಶೇ 5.78ರಿಂದ ಶೇ 5.55ಕ್ಕೆ ಕುಸಿದಿದೆ. ಅಂದಹಾಗೆ ಯೆಸ್ ಬ್ಯಾಂಕ್ ಷೇರಿನ ದರವು ಶುಕ್ರವಾರದಂದು ದಿನದ ಕೊನೆಗೆ ಶೇ 4.47ರಷ್ಟು ಕುಸಿತ ಕಂಡು ರೂ. 13.68ಕ್ಕೆ ವ್ಯವಹಾರ ಚುಕ್ತಾ ಮಾಡಿದೆ.
ಇದನ್ನೂ ಓದಿ: Yes Bank Housing Loan: ಇದೇ ಮೊದಲ ಬಾರಿಗೆ ಬ್ಯಾಂಕ್ವೊಂದರಿಂದ 35 ವರ್ಷಗಳ ಅವಧಿಗೆ ಹೌಸಿಂಗ್ ಲೋನ್