ZEEL-Sony: ಇತ್ತ ಎನ್​ಸಿಎಲ್​ಟಿ, ಅತ್ತ ಸಿಂಗಾಪುರ; ಝೀ ಮತ್ತು ಸೋನಿ ಮಧ್ಯೆ ಎರಡು ರಣರಂಗದಲ್ಲಿ ಫೈಟ್

|

Updated on: Jan 30, 2024 | 4:06 PM

NCLT Notice to Sony: ವಿಲೀನ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ ಸೋನಿ ಪಿಕ್ಚರ್ಸ್ ಮತ್ತು ಝೀ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಎರಡು ಕೋರ್ಟ್​ಗಳ ಕಟಕಟೆ ಹತ್ತಿವೆ. ಒಪ್ಪಂದ ಜಾರಿಗೆ ಅನುವಾಗಬೇಕೆಂದು ಸೋನಿಗೆ ನಿರ್ದೇಶನ ನೀಡುವಂತೆ ಎನ್​ಸಿಎಲ್​ಟಿಯಲ್ಲಿ ಝೀ ಅರ್ಜಿ ಹಾಕಿದೆ. ಅತ್ತ ಸಿಂಗಾಪುರದ ಆರ್ಬಿಟ್ರೇಶನ್ ಟ್ರಿಬ್ಯುನಲ್​ಗೆ ಸೋನಿ ಮೊರೆ ಹೋಗಿದೆ.

ZEEL-Sony: ಇತ್ತ ಎನ್​ಸಿಎಲ್​ಟಿ, ಅತ್ತ ಸಿಂಗಾಪುರ; ಝೀ ಮತ್ತು ಸೋನಿ ಮಧ್ಯೆ ಎರಡು ರಣರಂಗದಲ್ಲಿ ಫೈಟ್
ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ
Follow us on

ನವದೆಹಲಿ, ಜನವರಿ 30: ಸೋನಿ ಪಿಕ್ಚರ್ಸ್ ನೆಟ್ವರ್ಕ್ ಸಂಸ್ಥೆ ಮತ್ತು ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಸಂಸ್ಥೆ (ZEEL- Zee Entertainment Enterprise Ltd) ಮಧ್ಯೆ ಆಗಬೇಕಿದ್ದ ವಿಲೀನ ಒಪ್ಪಂದ ಮುರಿದುಬಿದ್ದ ಬೆನ್ನಲ್ಲೇ ಎರಡೂ ಸಂಸ್ಥೆಗಳ ಮಧ್ಯೆ ಕಾನೂನು ಸಮರ ದೊಡ್ಡಮಟ್ಟಕ್ಕೆ ಹೋಗುತ್ತಿದೆ. ಝೀ ಸಂಸ್ಥೆ ಭಾರತದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಬಳಿ ಸೋನಿ ವಿರುದ್ಧ ದೂರು ದಾಖಲಿಸಿದೆ. ಅತ್ತ, ಸೋನಿ ಸಂಸ್ಥೆ ಸಿಂಗಾಪುರದ ಅಂತಾರಾಷ್ಟ್ರೀಯ ನ್ಯಾಯಾಲಯದ (SIAC) ಮೊರೆ ಹೋಗಿದೆ. ಜನವರಿ 31ರಂದು ಸಿಂಗಾಪುರ ಕೋರ್ಟ್ ಎಮರ್ಜೆನ್ಸಿ ಆರ್ಬಿಟ್ರೇಟರ್ ಅವರನ್ನು ಈ ವ್ಯಾಜ್ಯ ಇತ್ಯರ್ಥಕ್ಕೆ ನೇಮಿಸುವ ಸಾಧ್ಯತೆ ಇದೆ. ಇತ್ತ ಎನ್​ಸಿಎಲ್​ಟಿ ನ್ಯಾಯಮಂಡಳಿಯು ಝೀ ಅರ್ಜಿಯ ವಿಚಾರಣೆಗೆ ಸಮ್ಮತಿಸಿದ್ದು, ಸೋನಿಗೆ ನೋಟೀಸ್ ಕಳುಹಿಸಿದೆ.

ಝೀ ಎಂಟರ್ಟೈನ್ಮೆಂಟ್ ಎಂಟರ್​ಪ್ರೈಸಸ್ ಲಿ ಸಂಸ್ಥೆಯ ಶೇರ್​ಹೋಲ್ಡರ್ ಆಗಿರುವ ಮ್ಯಾಡ್ ಮೆನ್ ಫಿಲಂ ವೆಂಚರ್ಸ್ ಈ ಝೀ ಮತ್ತು ಸೋನಿ ವಿಲೀನ ಒಪ್ಪಂದ ಜಾರಿಯಾಗುವಂತೆ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್​ಗೆ (ಎನ್​ಸಿಎಲ್​ಟಿ) ಮಂಗಳವಾರದಂದು ಮನವಿ ಅರ್ಜಿ ಸಲ್ಲಿಸಿತ್ತು. ಈ ಸಂಬಂಧ ಜಪಾನ್ ಮೂಲದ ಸೋನಿ ಪಿಕ್ಚರ್ಸ್ ಸಂಸ್ಥೆಗೆ ನೋಟೀಸ್ ನೀಡಿರುವ ನ್ಯಾಯಮಂಡಳಿ ಮೂರು ವಾರದೊಳಗೆ ಉತ್ತರ ನೀಡಬೇಕೆಂದು ಆದೇಶಿಸಿದೆ. ಜನವರಿ 12ರಂದು ಎನ್​ಸಿಎಲ್​ಟಿ ಮುಂದಿನ ವಿಚಾರಣೆ ನಡೆಸಲಿದೆ.

ಇದನ್ನೂ ಓದಿ: eKYC: ಪಿಎಂ ಕಿಸಾನ್: ಜ. 31ರೊಳಗೆ ಇಕೆವೈಸಿ ಮಾಡದಿದ್ದರೆ ಸಿಗುವುದಿಲ್ಲ 16ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

2023ರ ಆಗಸ್ಟ್ ತಿಂಗಳಲ್ಲಿ ಝೀ ಮತ್ತು ಸೋನಿ ನಡುವಿನ ವಿಲೀನ ಒಪ್ಪಂದದ ಪ್ರಸ್ತಾವಕ್ಕೆ ಎನ್​ಸಿಎಲ್​ಟಿಯೇ ಅನುಮೋದನೆ ಕೊಟ್ಟಿತ್ತು. ಈಗ ಒಪ್ಪಂದದಿಂದ ಸೋನಿ ಹೊರಬಿದ್ದಿದೆ. ಒಂದು ವೇಳೆ ವಿಲೀನವಾಗಿದ್ದರೆ ಭಾರತದಲ್ಲಿ 10 ಬಿಲಿಯನ್ ಡಾಲರ್ ಮೌಲ್ಯದ ಎಂಟರ್ಟೈನ್ಮೆಂಟ್ ಕಂಪನಿಯೊಂದು ರೂಪುಗೊಳ್ಳುತ್ತಿತ್ತು.

ಎರಡು ವರ್ಷಗಳ ಹಿಂದೆ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಸಂಸ್ಥೆ ತನ್ನ ಭಾರತೀಯ ವಿಭಾಗವನ್ನು ಝೀ ಎಂಟರ್ಟೈನ್ಮೆಂಟ್ ಜೊತೆ ವಿಲೀನಗೊಳಿಸಲು ಒಪ್ಪಂದವಾಗಿತ್ತು. 2023ರ ಡಿಸೆಂಬರ್ 21ರೊಳಗೆ ಒಪ್ಪಂದ ಪೂರ್ಣಗೊಳ್ಳಬೇಕು ಎಂದು ನಿಗದಿ ಮಾಡಲಾಗಿತ್ತು. ಅಷ್ಟರೊಳಗೆ ಎರಡೂ ಸಂಸ್ಥೆಗಳ ನಡುವಿನ ಭಿನ್ನಾಭಿಪ್ರಾಯ, ಷರತ್ತು ಎಲ್ಲವೂ ಬಗೆಹರಿಯಬೇಕಿತ್ತು. ಆದರೆ, ಅದು ಆಗಲಿಲ್ಲ.

ಮೂಲಗಳ ಪ್ರಕಾರ, ವಿಲೀನಗೊಂಡ ಬಳಿಕ ಸಂಸ್ಥೆಗೆ ಯಾರು ಮುಖ್ಯಸ್ಥರಾಗಬೇಕು ಎನ್ನುವ ವಿಚಾರ ಕಗ್ಗಂಟಾಗಿ ಉಳಿದಿದೆ. ಹಣಕಾಸು ಅಕ್ರಮದ ಆರೋಪ ಹೊತ್ತಿರುವ ಪುನೀತ್ ಗೋಯಂಕಾ ಅವರು ಸಿಇಒ ಆಗುವುದು ಬೇಡ ಎಂಬುದು ಸೋನಿಯ ಹಠ. ಇದಕ್ಕೆ ಝೀ ಒಪ್ಪಲು ಸಿದ್ಧ ಇಲ್ಲ ಎನ್ನಲಾಗಿದೆ. ಹೀಗಾಗಿ, ಸೋನಿ ಈ ಒಪ್ಪಂದದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿತು ಎನ್ನಲಾಗಿದೆ.

ಇದನ್ನೂ ಓದಿ: Economy: ಮುಂದಿನ ಏಳು ವರ್ಷ ಆರ್ಥಿಕತೆಯ ಹಂತ ಹಂತದ ಬೆಳವಣಿಗೆ ಸಾಧ್ಯತೆ ಬಿಚ್ಚಿಟ್ಟ ಹಣಕಾಸು ಸಚಿವಾಲಯ

ಒಪ್ಪಂದ ಈಡೇರದೇ ಹೋಗಲು ಝೀ ಸಂಸ್ಥೆಯೇ ಕಾರಣ ಎಂದು ಸೋನಿ ಆರೋಪಿಸಿದ್ದು ಸಿಂಗಾಪುರದ ಆರ್ಬಿಟ್ರೇಶನ್ ಕೋರ್ಟ್​ನಲ್ಲಿ ದೂರು ಕೊಟ್ಟಿದೆ. ಇತ್ತ, ಝೀ ಕೂಡ ಎನ್​ಸಿಎಲ್​ಟಿ ಮೊರೆ ಹೋಗಿದೆ. ಈ ಎರಡೂ ನ್ಯಾಯಾಲಯಗಳು ಯಾವ ತೀರ್ಪು ನೀಡುತ್ತವೆ ಕಾದುನೋಡಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ