ನವದೆಹಲಿ, ಜನವರಿ 9: ಝೀ ಎಂಟರ್ಟೈನ್ಮೆಂಟ್ ಜೊತೆ ಸೋನಿ ತನ್ನ ಭಾರತೀಯ ವ್ಯವಹಾರಗಳನ್ನು (Sony India Operations) ವಿಲೀನಗೊಳಿಸಲು ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದಕ್ಕೆ ಸರಿಯಲು ಯೋಜಿಸುತ್ತಿರುವ ಸುದ್ದಿ ನಿನ್ನೆ ಸೋಮವಾರದಿಂದ ಹರಿದಾಡುತ್ತಿದೆ. ಅದರ ಪರಿಣಾಮವಾಗಿ ಇಂದು ಮಂಗಳವಾರ ಷೇರುಪೇಟೆಯಲ್ಲಿ ಝೀ ಎಂಟರ್ಟೈನ್ಮೆಂಟ್ನ (Zee Entertainment Ltd) ಷೇರುಗಳು ತರಗೆಲೆಯಂತೆ ಹಾರುತ್ತಿವೆ. ಬೆಳಗಿನ ವಹಿವಾಟಿನಲ್ಲಿ ಬರೋಬ್ಬರಿ 10 ಪ್ರತಿಶತದಷ್ಟು ಷೇರು ಕುಸಿತ ಕಂಡಿದೆ. ನಿನ್ನೆ ದಿನಾಂತ್ಯದಲ್ಲಿ 278 ರೂ ಇದ್ದ ಝೀ ಷೇರುಬೆಲೆ ಇಂದು ಬೆಳಗ್ಗೆ 27 ರೂಗಳಷ್ಟು ಕುಸಿತ ಕಂಡಿದೆ.
ಜಪಾನ್ ಮೂಲದ ಸೋನಿ ಸಂಸ್ಥೆ ತನ್ನ ಭಾರತೀಯ ವ್ಯವಹಾರಗಳನ್ನು ಝೀ ಎಂಟರ್ಟೈನ್ಮೆಂಟ್ ಜೊತೆ ವಿಲೀನಗೊಳಿಸಲು ಮುಂದಾಗಿತ್ತು. ಈ ನಿಟ್ಟಿನಲ್ಲಿ 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವಾಗಿತ್ತು. ಇದು ನೆರವೇರಿದಲ್ಲಿ ಭಾರತದ ಅತಿದೊಡ್ಡ ಬ್ರಾಡ್ಕ್ಯಾಸ್ಟರ್ ರೂಪುಗೊಳ್ಳುತ್ತಿತ್ತು.
ಇದನ್ನೂ ಓದಿ: Narendra Modi: ಗುಜರಾತ್ ಗ್ಲೋಬಲ್ ಟ್ರೇಡ್ ಶೋಗೆ ಮೋದಿ ಚಾಲನೆ; ಇದು ಭಾರತದ ಅತಿದೊಡ್ಡ ವ್ಯಾಪಾರ ಪ್ರದರ್ಶನ
ಈ ಒಪ್ಪಂದದಲ್ಲಿ ಹಲವು ಷರತ್ತುಗಳನ್ನು ಸೋನಿ ಮುಂದಿಟ್ಟಿತ್ತು. ಇವುಗಳನ್ನು ಈಡೇರಿಸಲಾಗಿಲ್ಲ ಎಂಬುದು ಸೋನಿ ಎತ್ತಿರುವ ಆಕ್ಷೇಪವಾಗಿದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ವಿಲೀನಗೊಂಡ ಸಂಸ್ಥೆಗೆ ಪುನೀತ್ ಗೋಯಂಕಾ ಸಿಇಒ ಆಗಬಾರದು ಎಂಬುದು ಸೋನಿ ಹಾಕಿದ್ದ ಒಂದು ಷರತ್ತು.
ಝೀ ಎಂಟರ್ಟೈನ್ಮೆಂಟ್ನಲ್ಲಿ ಅವ್ಯವಹಾರ ನಡೆಸಿದ ಆರೋಪಗಳ ಕಳಂಕ ಪುನೀತ್ ಗೋಯಂಕಾ ಮತ್ತು ಸುಭಾಷ್ ಚಂದ್ರ ಅವರಲ್ಲಿ ಇದೆ. ಅವರ ವಿರುದ್ಧ ನಡೆಯುತ್ತಿರುವ ತನಿಖೆ ಮುಗಿಯುವವರೆಗೂ ಅವರಿಬ್ಬರು ಯಾವುದೇ ಮುಖ್ಯ ಹುದ್ದೆ ಹೊಂದುವಂತಿಲ್ಲ ಎಂದು ಸೆಬಿ 2023ರ ಆಗಸ್ಟ್ನಲ್ಲಿ ನಿರ್ಬಂಧ ಹಾಕಿತ್ತು. ಅದಾದ ಬಳಿಕ ಎಸ್ಎಟಿ ನ್ಯಾಯಮಂಡಳಿ ಸೆಬಿ ನಿಷೇಧ ಕ್ರಮವನ್ನು ರದ್ದುಗೊಳಿಸಿತು. ಪುನೀತ್ ಗೋಯಂಕಾ ಅವರು ಅಕ್ಟೋಬರ್ 30ರಂದು ಝೀ ಎಂಟರ್ಟೈನ್ಮೆಂಟ್ನ ಎಂಡಿ ಮತ್ತು ಸಿಇಒ ಆಗಿ ಮರಳಿದ್ದರು.
ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಆದರೆ, ಪುನೀತ್ ಗೋಯಂಕಾ ಅವರನ್ನು ನೂತನ ಸಂಸ್ಥೆಗೆ ಸಿಇಒ ಆಗಿ ಒಪ್ಪಿಕೊಳ್ಳಲು ಸೋನಿ ಸುತಾರಾಂ ತಯಾರಿಲ್ಲ ಎನ್ನಲಾಗಿದೆ. ಒಪ್ಪಂದ ರದ್ದುಗೊಳಿಸುವ ನೋಟೀಸ್ ಅನ್ನು ಕೊಡಲು ಸೋನಿ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಜನವರಿ 22ಕ್ಕೆ ನೋಟೀಸ್ ನೀಡುವ ಸಾಧ್ಯತೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ