Zee-Sony: ಸೋನಿ-ಝೀ ವಿಲೀನ: ಒಪ್ಪಂದ ಮುರಿದುಗೊಳ್ಳಲಿದೆ ಎನ್ನುವ ಸುದ್ದಿ ಬರೀ ಸುಳ್ಳು- ಝೀ ಎಂಟರ್ಟೈನ್ಮೆಂಟ್ ಸ್ಪಷ್ಟನೆ
ಸೋನಿ ಮತ್ತು ಝೀ ವಿಲೀನಗೊಳ್ಳುವುದಿಲ್ಲ. ಒಪ್ಪಂದದಿಂದ ಸೋನಿ ಹಿಂದಕ್ಕೆ ಸರಿಯಲು ನಿರ್ಧರಿಸಿದೆ ಎನ್ನುವ ಸುದ್ದಿಯನ್ನು ಝೀ ತಳ್ಳಿಹಾಕಿದೆ. ಬ್ಲೂಮ್ಬರ್ಗ್ ಸುದ್ದಿಸಂಸ್ಥೆಯ ವರದಿಯ ಅಂಶಗಳನ್ನು ಆಧಾರರಹಿತ ಎಂದು ಝೀ ಎಂಟರ್ಟೈನ್ಮೆಂಟ್ ಬಣ್ಣಿಸಿದೆ. ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ಮತ್ತು ಝೀ ಎಂಟರ್ಟೈನ್ಮೆಂಟ್ ಸಂಸ್ಥೆಗಳು ವಿಲೀನಗೊಳ್ಳಲು 2021ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು.
ನವದೆಹಲಿ, ಜನವರಿ 9: ಝೀ ಎಂಟರ್ಟೈನ್ಮೆಂಟ್ ಮತ್ತು ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ವಿಲೀನಗೊಳ್ಳಲು (Zee Sony Merger) ಮಾಡಿಕೊಳ್ಳಲಾದ ಒಪ್ಪಂದದಿಂದ ಸೋನಿ ಹಿಂದಕ್ಕೆ ಸರಿಯಲು ನಿರ್ಧರಿಸಿದೆ ಎನ್ನುವಂತಹ ಸುದ್ದಿಯನ್ನು ಝೀ ಸಂಸ್ಥೆ ತಳ್ಳಿ ಹಾಕಿದೆ. ಈ ಸುದ್ದಿ ಸತ್ಯಕ್ಕೆ ದೂರವಾದದು, ಆಧಾರ ರಹಿತವಾದುದು ಎಂದು ಝೀ ಎಂಟರ್ಟೈನ್ಮೆಂಟ್ ಇಂದು ಮಂಗಳವಾರ (ಜ. 9) ಸ್ಪಷ್ಟಪಡಿಸಿದೆ.
2021ರಲ್ಲಿ ಜಪಾನ್ ಮೂಲದ ಸೋನಿ ಸಂಸ್ಥೆಯ ಭಾರತೀಯ ವ್ಯವಹಾರವಾದ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾವನ್ನು ಝೀ ಎಂಟರ್ಟೈನ್ಮೆಂಟ್ನಲ್ಲಿ ವಿಲೀನಗೊಳಿಸಲು 10 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಕೆಲವೊಂದಿಷ್ಟು ಷರತ್ತುಗಳಿಗೆ ಝೀ ಬದ್ಧವಾಗಿಲ್ಲ ಎಂಬುದು ಸೋನಿ ಆಕ್ಷೇಪವಾಗಿದೆ. ಹೀಗಾಗಿ, ಈ ಡೀಲ್ನಿಂದ ಅದು ಹಿಂದೆ ಸರಿಯಲು ನಿರ್ಧರಿಸಿದೆ. ಫೆಬ್ರುವರಿ 20ಕ್ಕೆ ಅದು ಝೀಗೆ ಈ ಸಂಬಂಧ ನೋಟೀಸ್ ಕೊಡಬಹುದು ಎಂದು ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿತ್ತು. ಝೀ ಸಂಸ್ಥೆ ಇದನ್ನು ತಳ್ಳಿಹಾಕಿದೆ.
ಇದನ್ನೂ ಓದಿ: Union Budget: ಮುಂಬರುವ ಮಧ್ಯಂತರ ಬಜೆಟ್ನಲ್ಲಿ ಟ್ಯಾಕ್ಸ್ ರಿಬೇಟ್ 7.5 ಲಕ್ಷ ರೂಗೆ ಹೆಚ್ಚಿಸುವ ಸಾಧ್ಯತೆ ಇಲ್ಲ: ವರದಿ
‘ಆ ಸುದ್ದಿ ಆಧಾರರಹಿತವಾಗಿದೆ ಮತ್ತು ವಾಸ್ತವಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇವೆ. ಸೋನಿ ಜೊತೆಗೆ ವಿಲೀನಗೊಳಿಸಲು ಕಂಪನಿ ಬದ್ಧವಾಗಿದೆ. ಈ ಪ್ರಸ್ತಾವಿತ ವಿಲೀನದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿದ್ದೇವೆ. ಸೆಬಿ ಒಳಪಡಿಸಿದ ನಿಯಮಗಳಿಗೆ ಕಂಪನಿ ಸದಾ ಬದ್ಧವಾಗಿದೆ’ ಎಂದು ಝೀ ಎಂಟರ್ಟೈನ್ಮೆಂಟ್ ಸಂಸ್ಥೆ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ಫೈಲಿಂಗ್ನಲ್ಲಿ ತಿಳಿಸಿದೆ.
ಝೀ-ಸೋನಿ ವಿಲೀನ ಒಪ್ಪಂದ ಮುರಿದು ಹೋಗುತ್ತಾ?
ಅವ್ಯವಹಾರ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪುನೀತ್ ಗೋಯಂಕಾ ವಿಚಾರವು ಝೀ ಮತ್ತು ಸೋನಿ ವಿಲೀನಕ್ಕೆ ಅಡ್ಡಿಯಾಗಿದೆ ಎಂಬುದು ನಿನ್ನೆ ಬಂದ ವರದಿಯಲ್ಲಿ ಹೇಳಲಾಗಿದೆ. ಝೀ ಎಂಟರ್ಟೈನ್ಮೆಂಟ್ ಲಿ ಸಂಸ್ಥೆಯ ಎಂಡಿ ಆಗಿರುವ ಪುನೀತ್ ಗೋಯಂಕಾ ಅವರು ಪ್ರಸ್ತಾವಿತ ವಿಲೀನದ ಬಳಿಕ ಹೊಸ ಸಂಸ್ಥೆಗೆ ಸಿಇಒ ಮಾಡಬೇಕೆಂದು ಝೀ ಪಟ್ಟು ಹಿಡಿದಿದೆ. ಅವರು ಸಿಇಒ ಆಗಬಾರದು ಎಂಬುದು ಸೋನಿ ಸಂಸ್ಥೆ ಹಿಡಿದಿರುವ ಪಟ್ಟು. ಈ ಹಗ್ಗ ಜಗ್ಗಾಟವು ವಿಲೀನ ಒಪ್ಪಂದ ಮುರಿದುಬೀಳುವಂತೆ ಮಾಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಒಂದು ವೇಳೆ, ಪ್ರಸ್ತಾವಿತ ವಿಲೀನ ಒಪ್ಪಂದದಿಂದ ಯಾರೇ ಹಿಂದಕ್ಕೆ ಸರಿದರೂ 100 ಮಿಲಿಯನ್ ಶುಲ್ಕವನ್ನು ಇನ್ನೊಂದು ಪಕ್ಷಕ್ಕೆ ಕೊಡಬೇಕಾಗುತ್ತದೆ. ಇದು ಇಂಥ ಎಲ್ಲಾ ಒಪ್ಪಂದಗಳಲ್ಲೂ ಮಾಡಿಕೊಳ್ಳಲಾಗುವ ಒಂದು ನಿಯಮ. ಒಂದು ವೇಳೆ, ಸೋನಿ ಸಂಸ್ಥೆ ಈ ಒಪ್ಪಂದ ಕೈಬಿಟ್ಟರೆ ಝೀ ಎಂಟರ್ಟೈನ್ಮೆಂಟ್ಗೆ 100 ಮಿಲಿಯನ್ ಟರ್ಮಿನೇಶನ್ ಫೀ ಕಟ್ಟಿಕೊಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ