BR Shetty: ಸಾವಿರ ಕೋಟಿ ರೂ ಬಜೆಟ್ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸಲು ಹೊರಟಿದ್ದ ಈ ಕನ್ನಡಿಗನಿಗೆ ಈಗ ದಿಕ್ಕುತೋಚದ ಸ್ಥಿತಿ
Epic Rise and Fall of BR Shetty: ದುಬೈಗೆ ಹೋಗಿ ಸ್ವಂತವಾಗಿ ಬೆಳೆದು ಬೃಹತ್ ಉದ್ಯಮ ಸಾಮ್ರಾಜ್ಯ ಕಟ್ಟಿ ಈಗ ಎಲ್ಲವನ್ನೂ ಕಳೆದುಕೊಂಡಿರುವ ಬಿಆರ್ ಶೆಟ್ಟಿ ಕಥೆ ಇದು. 18,000 ಕೋಟಿ ರೂ ಮೌಲ್ಯದ ಉದ್ಯಮ ಹಾಗೂ ಆಸ್ತಿ ಹೊಂದಿದ್ದ ಶೆಟ್ಟಿ 2019ರಲ್ಲಿ ಕೇವಲ 74 ರುಪಾಯಿಗೆ ಸಂಸ್ಥೆ ಮಾರಬೇಕಾಗಿ ಬಂದಿತ್ತು. ಮಡ್ಡಿ ವಾಟರ್ಸ್ನ ಮುಖ್ಯಸ್ಥರು ಬಿಆರ್ ಶೆಟ್ಟಿ ಅವರ ಸಂಸ್ಥೆ ಬಗ್ಗೆ ಆರೋಪಿಸಿ ಮಾಡಿದ ಒಂದು ಟ್ವೀಟು ಶೆಟ್ಟಿ ಸಾಮ್ರಾಜ್ಯ ಕುಸಿಯುವಂತೆ ಮಾಡಿತ್ತು.
ಕೈಯಲ್ಲಿ ಕೇವಲ 665 ರೂ ಇಟ್ಟುಕೊಂಡು ಕರುನಾಡಿನಿಂದ ಅರಬ್ ನಾಡಿಗೆ ಹಾರಿದ ಕನ್ನಡಿಗ ಬಿಆರ್ ಶೆಟ್ಟಿ ಬರೋಬ್ಬರಿ 18,000 ಕೋಟಿ ರೂ ಮೌಲ್ಯದ ಉದ್ಯಮ ಸಾಮ್ರಾಜ್ಯ ಕಟ್ಟಿದ ಕಥೆ (Rag to Rich Story) ಬಹಳ ರೋಚಕ. ಹಾಗೆಯೇ, ಅಷ್ಟು ದೊಡ್ಡ ಮೌಲ್ಯದ ಕಂಪನಿಯನ್ನು ಕೇವಲ 74 ರುಪಾಯಿಗೆ ಮಾರುವ ಸ್ಥಿತಿಗೆ ಬಂದ ಕತೆ ಅಷ್ಟೇ ಕರುಣಾಜನಕ. ಮಂಗಳೂರು ಮೂಲದ ಡಾ|| ಬಾವಗುತ್ತು ರಘುರಾಮ್ ಶೆಟ್ಟಿ 2017ರಲ್ಲಿ 1,000 ಕೋಟಿ ರೂ ಬಜೆಟ್ನಲ್ಲಿ ಮಹಾಭಾರತ ಸಿನಿಮಾ ನಿರ್ಮಿಸುವುದಾಗಿ ಘೋಷಿಸಿದಾಗ ಕೋಟ್ಯಂತರ ಭಾರತೀಯರ ನರನಾಡಿಗಳಲ್ಲಿ ಸಂಚಲನವಾಗಿತ್ತು. ಬಾಹುಬಲಿಯನ್ನು ಮೀರಿಸುವ ವೈಭವದ ಸಿನಿಮಾ, ಅದರಲ್ಲೂ ರಣರೋಚಕ ಮಹಾಭಾರತದ ಕಥೆ ದೊಡ್ಡಪರದೆಗೆ ಬರಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ನೋಡನೋಡುತ್ತಿದ್ದಂತೆಯೇ ಶೆಟ್ಟಿ ಸಾಮ್ರಾಜ್ಯ ಮುರುಟಿಹೋಗಿ ಅವರ ಬದುಕೇ ದುರಂತ ಸಿನಿಮಾದ ಕಥೆಯಂತಾಯಿತು. ಅದಕ್ಕೆ ಕಾರಣವಾಗಿದ್ದು ಮಡ್ಡಿ ವಾಟರ್ಸ್ನ ಒಂದು ಟ್ವೀಟ್.
ಗೌತಮ್ ಅದಾನಿ ಅವರ ಸಂಸ್ಥೆಗಳ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ವರದಿ ಬಿಡುಗಡೆ ಮಾಡಿದ್ದು ನಿಮಗೆ ನೆನಪಿರಬಹುದು. ಹಿಂಡನ್ಬರ್ಗ್ ರಿಸರ್ಚ್ ಒಂದು ಶಾರ್ಟ್ ಸೆಲ್ಲರ್ ಸಂಸ್ಥೆ. ಯಾವುದಾದರೂ ಕಂಪನಿ ಅಕ್ರಮ ಮಾರ್ಗದಲ್ಲಿ ಷೇರುಬೆಲೆ ಹೆಚ್ಚಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಲು ಇವು ತನಿಖಾ ವರದಿ ಬಿಡುಗಡೆ ಮಾಡಿ ಷೇರುಬೆಲೆ ಕುಸಿಯುವಂತೆ ಮಾಡುತ್ತವೆ. ಇಂಥ ಒಂದು ಶಾರ್ಟ್ ಸೆಲ್ಲರ್ ಸಂಸ್ಥೆ ಮಡ್ಡಿ ವಾಟರ್ಸ್ನ ಮುಖ್ಯಸ್ಥ ಕಾರ್ಸನ್ ಬ್ಲಾಕ್ ಎಂಬುವವರು 2019ರಲ್ಲಿ ಬಿಆರ್ ಶೆಟ್ಟಿ ವಿರುದ್ಧ ಒಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Sundar Pichai: ಎಂಜಿನಿಯರ್ ಅಲ್ಲ, ಕ್ರಿಕೆಟ್ ಆಟಗಾರನಾಗುವ ಆಸೆ ಹೊಂದಿದ್ದರು ಗೂಗಲ್ ಸಿಇಒ ಸುಂದರ್ ಪಿಚೈ
ಅದರಲ್ಲಿ, ಬಿಆರ್ ಶೆಟ್ಟಿ ಒಡೆತನದ ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯಲ್ಲಿ ಕೃತಕವಾಗಿ ಹಣದ ಹರಿವು ಸೃಷ್ಟಿಸಿ, ನೈಜ ಸಾಲದ ಪ್ರಮಾಣವನ್ನು ಮರೆಮಾಚಲಾಗಿದೆ ಎಂದು ಕಾರ್ಸನ್ ಬ್ಲಾಕ್ ತಮ್ಮ ಟ್ವೀಟ್ನಲ್ಲಿ ಆರೋಪಿಸಿದ್ದರು. ಅದಾದ ಬಳಿಕ ಲಂಡನ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿದ್ದ ಎನ್ಎಂಸಿ ಹೆಲ್ತ್ಕೇರ್ ಸಂಸ್ಥೆಯ ಷೇರುಬೆಲೆ ಅಧಃಪತನಗೊಂಡಿತ್ತು. ಕೊನೆಗೆ ಬಿಆರ್ ಶೆಟ್ಟಿ ಅವರು ತಮ್ಮ 12,478 ಕೋಟಿ ರೂ ಮೌಲ್ಯದ ಸಂಸ್ಥೆಯನ್ನು ಕೇವಲ 74 ರುಪಾಯಿಗೆ ಮಾರಬೇಕಾಯಿತು.
ಯುಎಇನಲ್ಲಿ ಇವರು ಅಲ್ಲಿನ ಶೇಖ್ ರೀತಿ ಬದುಕಿದ್ದವರು. ಹಲವು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದ್ದರು. ಬುರ್ಜ್ ಖಾಲೀಫಾದಲ್ಲಿ ಇಡೀ ಎರಡು ಮಹಡಿಗಳನ್ನೇ ಇವರು ಖರೀದಿಸಿದ್ದರು. ದುಬೈ ವರ್ಲ್ಡ್ ಟ್ರೇಡ್ ಸೆಂಟರ್, ಪಾಲ್ಮ್ ಜುಮೇರಾದಲ್ಲಿ ಇವರ ಆಸ್ತಿಗಳಿದ್ದವು. ಪ್ರೈವೇಟ್ ವಿಮಾನ ಇಟ್ಟುಕೊಂಡಿದ್ದರು. ಒಂದು ಟ್ವೀಟ್ನಿಂದಾಗಿ ಇವರ ರಾಯಲ್ ಬದುಕು ನಿರ್ನಾಮವಾಗಿ ಹೋಗಿದ್ದು ವಿಪರ್ಯಾಸ.
ಈಗಲೂ ಕೂಡ ಬಿಆರ್ ಶೆಟ್ಟಿ ಕೋರ್ಟ್ ಕೇಸ್ಗಳನ್ನು ಎದುರಿಸುತ್ತಿದ್ದಾರೆ. ಆರೋಪ ಮುಕ್ತರಾಗಲು ಹರಸಾಹಸ ನಡೆಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ