MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?

Indian Economy and MSMEs Contribution: ಭಾರತದ ಆರ್ಥಿಕತೆಗೆ ಎಂಎಸ್​ಎಂಇಗಳ ಕೊಡುಗೆ ಶೇ. 30ರಷ್ಟಿದೆ. ಚೀನಾದಲ್ಲಿ ಇದರ ಪ್ರಮಾಣ ಶೇ. 60ರಷ್ಟಿದೆ. ಮುಂದುವರಿದ ದೇಶಗಳಲ್ಲಿ ಅಲ್ಲಿನ ಆರ್ಥಿಕತೆಗೆ ಸಣ್ಣ ಉದ್ದಿಮೆಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇದೆ. ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಸಂಸ್ಥೆ ಸಿಬಿಆರ್​ಇ ಬಿಡುಗಡೆ ಮಾಡಿದ ವರದಿಯಲ್ಲಿ ಎಂಎಸ್​ಎಂಇಗಳ ಕೊಡುಗೆ ಬಗ್ಗೆ ಬೆಳಕು ಚೆಲ್ಲಲಾಗಿದೆ.

MSMEs: ಭಾರತದ ಜಿಡಿಪಿಗೆ ಎಂಎಸ್​ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಎಂಎಸ್​ಎಂಇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 09, 2024 | 10:30 AM

ನವದೆಹಲಿ, ಜನವರಿ 9: ರಿಯಲ್ ಎಸ್ಟೇಟ್ ಕನ್ಸಲ್ಟಿಂಗ್ ಸಂಸ್ಥೆ ಸಿಬಿಆರ್​ಇ ಸೌತ್ ಏಷ್ಯಾ ಭಾರತದ ಎಂಎಸ್​ಎಂಇ ವಲಯದ (MSME sector) ಬಗ್ಗೆ ಕುತೂಹಲಕಾರಿ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದೆ. ಮಧ್ಯಮ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳು (ಎಂಎಸ್​ಎಂಇ) ಭಾರತದ ಆರ್ಥಿಕತೆಗೆ ಹೇಗೆ ಪುಷ್ಟಿ ಕೊಡುತ್ತಿವೆ ಎಂಬುದನ್ನು ಅವಲೋಕಿಸುವ ವರದಿ ಇದು. ‘ಎಂಎಸ್​ಎಂಇ: ಆರ್ಥಿಕ ಪ್ರಗತಿಯ ಯಂತ್ರಗಳ ಅನಾವರಣ’ (MSMEs: Unleashing the Engines of Economic Prosperity) ಎಂಬ ಈ ವರದಿಯಲ್ಲಿ ಭಾರತದ ವಿವಿಧ ರಾಜ್ಯಗಳು ಎಂಎಸ್​ಎಂಇ ವಲಯಕ್ಕೆ ಎಷ್ಟು ಕೊಡುಗೆ ನೀಡುತ್ತಿವೆ ಎಂಬುದನ್ನೂ ಅವಲೋಕಿಸಿದೆ.

ಸಿಬಿಆರ್​ಇ ಪ್ರಕಟಿಸಿದ ಈ ವರದಿಯ ಪ್ರಕಾರ ದೇಶದ ಎಂಎಸ್​ಎಂಇ ವಲಯಕ್ಕೆ ಮಹಾರಾಷ್ಟ್ರದ ಕೊಡುಗೆ ಶೇ. 17ರಷ್ಟಿದೆ. ತಮಿಳುನಾಡು ಮತ್ತು ಉತ್ತರಪ್ರದೇಶ ಟಾಪ್-3 ರಾಜ್ಯಗಳ ಪಟ್ಟಿಯಲ್ಲಿವೆ. ಬಿಮಾರು ರಾಜ್ಯಗಳ ಪೈಕಿ ಒಂದು ಎಂದು ಸದಾ ಹೀಯಾಳಿಸಲ್ಪಡುವ ಉತ್ತರಪ್ರದೇಶ ರಾಜ್ಯ ಎಂಎಸ್​ಎಂಇ ವಲಯಕ್ಕೆ ಶೇ. 9ರಷ್ಟು ಕೊಡುಗೆ ನೀಡುತ್ತದೆ ಎನ್ನುವುದು ಗಮನಾರ್ಹ. ಇದು ಉದ್ಯಮ್ ಪೋರ್ಟಲ್ ಮೂಲಕ ನೊಂದಣಿಯಾದ ಎಂಎಸ್​ಎಂಇಗಳ ದತ್ತಾಂಶದ ಮೇಲೆ ಆಧಾರಿತವಾಗಿರುವ ವರದಿ.

ಇದನ್ನೂ ಓದಿ: Maldives: ಭಾರತದಲ್ಲಿ ಟ್ರೆಂಡ್ ಆಗುತ್ತಿದೆ #UninstallMakeMyTrip; ಯಾಕೆ ಮೇಕ್ ಮೈ ಟ್ರಿಪ್ ಮೇಲೆ ಆಕ್ರೋಶ?

ಎಂಎಸ್​ಎಂಇ ಸಂಖ್ಯೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು?

ಭಾರತದ ಐಟಿ ಬಿಟಿ ಸೆಂಟರ್ ಎನಿಸಿರುವ ಮತ್ತು ಸ್ಟಾರ್ಟಪ್​ಗಳ ಅಡ್ಡೆಯಾಗಿರುವ ಕರ್ನಾಟಕ ಎಂಎಸ್​ಎಂಇ ವಿಚಾರದಲ್ಲಿ ಮುಂಚೂಣಿಯಲ್ಲಿ ಇಲ್ಲ ಎನ್ನುವುದು ಆಶ್ಚರ್ಯ. ಸಣ್ಣ ಉದ್ದಿಮೆಗಳ ವಲಯದಲ್ಲಿ ಕರ್ನಾಟಕದ ಪಾಲು ಶೇ. 6 ಮಾತ್ರ ಇದ್ದು, ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬಳ್ಳಿಯಲ್ಲಿ ಹೆಚ್ಚಿನ ಸ್ಟಾರ್ಟಪ್​ಗಳು ನೆಲಸಿವೆ.

ಎಂಎಸ್​ಎಂಇ ವಲಯಕ್ಕೆ ರಾಜ್ಯಗಳ ಕೊಡುಗೆ

  1. ಮಹಾರಾಷ್ಟ್ರ: ಶೇ. 17
  2. ತಮಿಳುನಾಡು: ಶೇ. 10
  3. ಉತ್ತರಪ್ರದೇಶ: ಶೇ. 9
  4. ಗುಜರಾತ್: ಶೇ. 7
  5. ರಾಜಸ್ಥಾನ್: ಶೇ. 7
  6. ಕರ್ನಾಟಕ: ಶೇ. 6
  7. ಮಧ್ಯಪ್ರದೇಶ: ಶೇ. 5
  8. ಬಿಹಾರ: ಶೇ. 4
  9. ಪಶ್ಚಿಮ ಬಂಗಾಳ: ಶೇ. 4
  10. ಪಂಜಾಬ್: 4

ಇದನ್ನೂ ಓದಿ: EaseMyTrip: ವೈಯಕ್ತಿಕ ಲಾಭಕ್ಕಿಂತ ರಾಷ್ಟ್ರ ಹಿತಾಸಕ್ತಿ ಮುಖ್ಯ; ಮಾಲ್ಡೀವ್ಸ್ ಅಲ್ಲ, ಲಕ್ಷದ್ವೀಪ, ಅಯೋಧ್ಯೆ ಪ್ಯಾಕೇಜ್ ಕೊಡ್ತೀವಿ: ಈಸ್ ಮೈ ಟ್ರಿಪ್

ಭಾರತದಲ್ಲಿ ಎಂಎಸ್​ಎಂಇಗಳ ಸಂಖ್ಯೆ ಎಷ್ಟಿದೆ?

ಸಿಬಿಆರ್​ಇ ವರದಿ ಪ್ರಕಾರ ಭಾರತ ಸರ್ಕಾರದ ಉದ್ಯಮ್ ಪೋರ್ಟಲ್​ನಲ್ಲಿ ನೊಂದಣಿಯಾದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಂಖ್ಯೆ 2.1 ಕೋಟಿಯಷ್ಟಿದೆ. ಈ ಎಂಎಸ್​ಎಂಇಗಳು ದೇಶದ ಜಿಡಿಪಿಗೆ ನೀಡುತ್ತಿರುವ ಕೊಡುಗೆ ಶೇ. 30ರಷ್ಟಿದೆ. ಬರೋಬ್ಬರಿ 14 ಕೋಟಿ ಜನರಿಗೆ ಈ ವಲಯದಲ್ಲಿ ಉದ್ಯೋಗ ಸಿಕ್ಕಿದೆ. ಅಷ್ಟೇ ಅಲ್ಲ, ಭಾರತದ ಒಟ್ಟು ರಫ್ತಿನಲ್ಲಿ ಎಂಎಸ್​ಎಂಇಗಳ ಕೊಡುಗೆ ಶೇ. 44ರಷ್ಟಿದೆ ಎನ್ನುವುದು ಗಮನಾರ್ಹ.

ಬೇರೆ ಬೇರೆ ದೇಶಗಳಲ್ಲಿ ಎಂಎಸ್​ಎಂಇಗಳಿಂದ ಜಿಡಿಪಿಗೆ ಎಷ್ಟಿದೆ ಕೊಡುಗೆ?

  • ಚೀನಾ: ಶೇ. 60
  • ಜಪಾನ್: ಶೇ. 50
  • ಜರ್ಮನಿ: ಶೇ. 48
  • ಅಮೆರಿಕ: ಶೇ. 44
  • ಸಿಂಗಾಪುರ: ಶೇ. 44
  • ಸೌತ್ ಆಫ್ರಿಕಾ: ಶೇ. 40
  • ಬ್ರೆಜಿಲ್: ಶೇ. 30
  • ಭಾರತ: ಶೇ. 30
  • ರಷ್ಯಾ: ಶೇ. 22

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮುಂದುವರಿದ ದೇಶಗಳಲ್ಲಿ ಅಲ್ಲಿನ ಆರ್ಥಿಕತೆಗೆ ಎಂಎಸ್​ಎಂಇಗಳ ಕೊಡುಗೆ ಹೆಚ್ಚಿನ ಮಟ್ಟದಲ್ಲಿ ಇದೆ. ಹಾಗೆಯೇ, ಭಾರತದಲ್ಲಿ ಎಂಎಸ್​ಎಂಇ ವಲಯಕ್ಕೆ ಇರುವ ತೊಡರುಗಳ ಬಗ್ಗೆಯೂ ಈ ವರದಿಯಲ್ಲಿ ಬೆಳಕು ಚೆಲ್ಲಲಾಗಿದೆ.

ಇದನ್ನೂ ಓದಿ: Farmers: ಪಿಎಂ ಕಿಸಾನ್ ಯೋಜನೆ; ರೈತರಿಗೆ ಸಿಗಲಿದೆ 8,000 ರೂ ಹಣ; ಕಂತುಗಳ ಸಂಖ್ಯೆ 4ಕ್ಕೆ ಏರಿಕೆ ಸಾಧ್ಯತೆ

ಎಂಎಸ್​ಎಂಇ ವಲಯಕ್ಕೆ ಇರುವ ಹಿನ್ನಡೆ

  • ಭಾರತದಲ್ಲಿ 14 ಪ್ರತಿಶತದಷ್ಟು ಎಂಎಸ್ಎಂಇಗಳಿಗೆ ಮಾತ್ರವೇ ಸಾಲ ಸೌಲಭ್ಯ ಇದೆ. ಮುಂದುವರಿದ ದೇಶಗಳಲ್ಲಿ ಇದರ ಪ್ರಮಾಣ ಶೇ. 30ರಷ್ಟಿದೆ.
  • ಭಾರತದಲ್ಲಿ ಅರ್ಧದಷ್ಟು ಸಣ್ಣ ಉದ್ದಿಮೆಗಳ ಉತ್ಪನ್ನ ಮತ್ತು ಸೇವೆಗಳು ಇಕಾಮರ್ಸ್ ಪ್ಲಾಟ್​ಫಾರ್ಮ್​ಗಳಲ್ಲಿ ಇಲ್ಲ.
  • ಭಾರತದಲ್ಲಿ ಎಂಎಸ್​ಎಂಇಗಳ ಬೆಳವಣಿಗೆಗೆ ಪೂರಕವಾಗಿರುವ ಸಾರಿಗೆ, ವಿದ್ಯುತ್, ಡಿಜಿಟಲ್ ಕನೆಕ್ಟಿವಿಟಿ ಇತ್ಯಾದಿ ಸಮರ್ಪಕ ಇನ್​ಫ್ರಾಸ್ಟ್ರಕ್ಚರ್ ಇನ್ನೂ ನಿರ್ಮಾಣವಾಗಿಲ್ಲ.
  • ಎಂಎಸ್​ಎಂಇಗಳಿಗೆ ಕುಶಲ ಕಾರ್ಮಿಕರು ಸಿಗುವುದು ಕಷ್ಟಕರವಾಗಿದೆ. ಇದು ಅಸಂಘಟಿತ ವಲಯ ಎನ್ನುವ ಭಾವನೆ ನೆಲಸಿರುವುದು ಇದಕ್ಕೆ ಕಾರಣವಾಗಿಎ.
  • ಎಂಎಸ್​ಎಂಇಗಳು ದೂರದ ಮಾರುಕಟ್ಟೆಗಳನ್ನು ತಲುಪುವುದು ಕಷ್ಟವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ