ರುಕ್ಮಿಣಿ ವಿಜಯ್ ಕುಮಾರ್ ಕಾರಿನಲ್ಲಿದ್ದ ಲಕ್ಷಾಂತರ ಮೌಲ್ಯದ ವಸ್ತು ಕಳ್ಳತನ; ಆರೋಪಿ ಬಂಧನ
ನಟಿಯಾಗಿ, ಡ್ಯಾನ್ಸರ್ ಆಗಿ ಫೇಮಸ್ ಆಗಿರುವ ರುಕ್ಮಿಣಿ ವಿಜಯ್ ಕುಮಾರ್ ಅವರ ಕಾರಿನಲ್ಲಿ ಇಟ್ಟಿದ್ದ ವಸ್ತುಗಳು ಕಳ್ಳತನ ಆಗಿದ್ದವು. ವಾಕಿಂಗ್ ಮುಗಿಸಿ ಬರುವುದರೊಳಗೆ ನಟಿಯ ಬ್ಯಾಗ್ ಕಳವಾಗಿತ್ತು. ಅದರಲ್ಲಿ ರೋಲೆಕ್ಸ್ ವಾಚ್, ಡೈಮಂಡ್ ರಿಂಗ್ ಮುಂತಾದ ವಸ್ತುಗಳು ಇದ್ದವು. ಈಗ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ನಟಿ, ಕ್ಲಾಸಿಕಲ್ ನೃತ್ಯಗಾರ್ತಿ, ಕೊರಿಯೋಗ್ರಫರ್, ಫಿಟ್ನೆಸ್ ಫ್ರೀಕ್ ರುಕ್ಮಿಣಿ ವಿಜಯ್ ಕುಮಾರ್ (Rukmini Vijayakumar) ಅವರು ಇತ್ತೀಚೆಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡಿದ್ದರು. ವಾಕಿಂಗ್ ಮಾಡಲು ಕಬ್ಬನ್ ಪಾರ್ಕ್ಗೆ ಬಂದಾಗ, ಕಾರಲ್ಲಿ ಇಟ್ಟಿದ್ದ ಬ್ಯಾಗ್ ಕಳ್ಳತನ (Theft) ಆಗಿತ್ತು. ಈಗ ಆರೋಪಿಯನ್ನು ಬಂಧಿಸಲಾಗಿದೆ. ಅಂದಹಾಗೆ, ಯಾರು ಈ ರುಕ್ಮಿಣಿ ವಿಜಯ್ ಕುಮಾರ್? ‘ನಂದನಂದನಾ ನೀನು ಶ್ರೀಕೃಷ್ಣ..’ ಎಂದು ‘ಭಜರಂಗಿ’ ಸಿನಿಮಾದಲ್ಲಿ ಹೆಜ್ಜೆ ಹಾಕಿದ್ದ ಚೆಲುವೆ ಇವರು. ನಾಟ್ಯದಿಂದಲೇ ಎಲ್ಲರನ್ನೂ ಬೆರಗುಗೊಳಿಸ್ತಿದ್ದ ಕಲಾವಿದೆ. ಕ್ಲಾಸಿಕಲ್ ಡಾನ್ಸರ್ ಹಾಗೂ ನಟಿ ಆಗಿರುವ ರುಕ್ಮಿಣಿ ವಿಜಯ್ ಕುಮಾರ್ ಅವರ ವಸ್ತುಗಳು ಕಳವಾಗಿದ್ದವು.
ಕೋರಮಂಗಲದ ನಿವಾಸಿ ಆಗಿರುವ ರುಕ್ಮಿಣಿ ಅವರು ಕನ್ನಡದ ‘ಭಜರಂಗಿ’ ಸೇರಿದಂತೆ ತಮಿಳು, ತೆಲುಗಿನ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅಂತರಾಷ್ಟ್ರೀಯ ಮಟ್ಟದ ಕ್ಲಾಸಿಕಲ್ ಡ್ಯಾನ್ಸರ್ ಇವರು. ಬೆಂಗಳೂರಿನ ಇಂತಹ ಕಲಾವಿದೆಗೆ ಕೆಲ ದಿನಗಳ ಹಿಂದೆ ಆಘಾತ ಎದುರಾಗಿತ್ತು. ವಾಕಿಂಗ್ಗಾಗಿ ಕಬ್ಬನ್ ಪಾರ್ಕ್ಗೆ ಬಂದು, ಕ್ವೀನ್ ರೋಡ್ ಬಳಿ ರುಕ್ಮಿಣಿ ಅವರು ನಿಲ್ಲಿಸಿದ್ದ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ವಜ್ರದ ಒಡವೆ ಮತ್ತು ರೋಲೆಕ್ಸ್ ವಾಚ್ ಇದ್ದ ಬ್ಯಾಗ್ ಕಳ್ಳತನವಾಗಿತ್ತು.
ನಟಿ ರುಕ್ಮಿಣಿ ಅವರ ಬ್ಯಾಗ್ ಕದ್ದಿರುವ ಆರೋಪ ಇರುವುದು ಮಹಮ್ಮದ್ ಮಸ್ತಾನ್ ಮೇಲೆ. ಮಹಾಲಕ್ಷ್ಮಿ ಲೇಔಟ್ನ ಮುಸ್ತಾನ್ ವೃತ್ತಿಯಲ್ಲಿ ಕ್ಯಾಬ್ ಡ್ರೈವರ್. ಮೇ 11ರ ಬೆಳಗ್ಗೆ 8 ಗಂಟೆ ಹೊತ್ತಿನಲ್ಲಿ ವಾಕಿಂಗ್ಗೆ ಅಂತ ರುಕ್ಮಿಣಿ ಅವರು ಕೋರಮಂಗಲದ ತಮ್ಮ ಹೋಂಡಾ ಸಿಟಿ ಕಾರಿನಲ್ಲಿ ಕಬ್ಬನ್ ಪಾರ್ಕ್ಗೆ ಬಂದಿದ್ದರು. ಕ್ವೀನ್ ರಸ್ತೆ ಬದಿಯಲ್ಲಿ ಕಾರ್ ನಿಲ್ಲಿಸಿದ್ದು, ಪಾರ್ಕ್ಗೆ ಹೋಗುವಾಗ ಕಾರ್ ಡೋರ್ ಅನ್ನ ಸರಿಯಾಗಿ ಲಾಕ್ ಮಾಡಿರಲಿಲ್ಲ.
ಇದನ್ನ ಗಮನಿಸಿದ್ದ ಮಸ್ತಾನ್, ಒಮ್ಮೆ ನೋಡೇ ಬಿಡುವ ಅಂತ ರುಕ್ಮಿಣಿ ಕಾರಿನ ಡೋರ್ಗೆ ಕೈ ಹಾಕಿದ್ದ. ಈ ವೇಳೆ ಡೋರ್ ಓಪನ್ ಆಗ್ತಿದ್ದಂತೆ ತಕ್ಷಣ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದ ಎಂಬ ಆರೋಪ ಇದೆ. ಇದೀಗ, ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಮಾಹಿತಿ ನೀಡಿದರು.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಸಿಕ್ಕಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಮಸ್ತಾನ್ ಬಳಿ ಒಂದು ರೋಲೆಕ್ಸ್ ವಾಚ್, ನಾಲ್ಕು ಡೈಮಂಡ್ ರಿಂಗ್, ಬ್ಯಾಗ್ ಸೇರಿದಂತೆ 23 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಿಗೆ, ಅದ್ರಲ್ಲೂ ಬೆಳಗ್ಗೆ ವಾಕಿಂಗ್ ವೇಳೆ ದುಬಾರಿ ವಸ್ತುಗಳನ್ನ ತರಬಾರದು. ತಂದರೂ, ಕಾರ್ಗಳಲ್ಲಿ ಭದ್ರವಾಗಿ ಇರಿಸಿ, ಡೋರ್ ಲಾಕ್ ಆಗಿದ್ಯಾ ಅಂತ ಚೆಕ್ ಮಾಡ್ಬೇಕು. ಇಲ್ಲವಾದ್ರೆ ಎಲ್ಲಾ ಮಾಯವಾಗುತ್ತೆ ಎಂಬುದು ಈ ಘಟನೆಯೇ ಸಾಕ್ಷಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







